





ತುಳುವರ ಹೊಸ ವರ್ಷಾರಂಭ ಬಿಸು ಹಾಗೂ ಚಂದ್ರಮಾನ ಪದ್ದತಿಯ ಯುಗಾದಿಯನ್ನು ನೈಜೀರಿಯ ದೇಶದಲ್ಲಿನ ನಮ್ಮ ತುಳು ಕನ್ನಡದ ಬಂಧುಗಳು ಅಚ್ಚುಕಟ್ಟಾಗಿ ಆಚರಿಸಿ ಸನಾತನ ಸಂಸ್ಕೃತಿಯನ್ನು ಮೆರೆದರು. ನಮ್ಮ ದೇಶದಿಂದ ಬಹಳಷ್ಟು ದೂರ ಸಪ್ತಸಾಗರದಾಚೆಯ ನೈಜೀರಿಯ ಪಶ್ಚಿಮದ ‘ಕಾನೋ’ ಎಂಬ ರಾಜ್ಯದಲ್ಲಿ ‘ಕರ್ನಾಟಕ ಸಂಘ ಕಾನೋ’ದ ಎಲ್ಲಾ ತೌಳವರು ಮತ್ತು ಕನ್ನಡಿಗರು ಒಟ್ಟಾಗಿ ಉಲ್ಲಾಸ ಉತ್ಸಾಹದಿಂದ (ಬಿಸು) ಯುಗಾದಿಯನ್ನು ಆಚರಿಸಿದರು. ಪ್ರತೀ ಮನೆಯವರು ತಯಾರಿಸಿ ತಂದ ತಾರಾವರಿಯ ತರಕಾರಿ ವ್ಯಂಜನಗಳು, ಪಾಯಸ, ಹೋಳಿಗೆಯ ಪಕ್ವಾನ್ನ ಸಹಿತ ಸಾಮೂಹಿಕ ಭೋಜನವನ್ನು ಸಂಪ್ರದಾಯಿಕ ಬಾಳೆ ಎಲೆಯಲ್ಲಿ ಎಲ್ಲರೂ ಒಟ್ಟಾಗಿ ನೆಲದಲ್ಲಿ ಕುಳಿತು ಸವಿದರು. ಮಕ್ಕಳಿಗೆ ಇದೊಂದು ಹೊಸ ಅನುಭವವಾದರೆ ಕೆಲವು ಹಿರಿಯರೂ ಮರೆತು ಹೋದ ಸಂಪ್ರದಾಯವನ್ನು ಈ ಕಾರ್ಯಕ್ರಮ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿತ್ತು. ಸಂಘದ ಸ್ಥಾಪಕರಾದ ಮಂಗಳೂರಿನ ಪ್ರಖ್ಯಾತ ಹರಿದಾಸರಾದ ಶರತ್ ಶೆಟ್ಟಿ ಪಡುಪಳ್ಳಿಯವರ ಮನೆಯಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಶರತ್ ಶೆಟ್ಟಿಯವರು ತರಕಾರಿ ಮತ್ತು ಹಣ್ಣುಗಳಿಂದ ರಚಿಸಿದ ಬಿಸುಕಣಿಗೆ ಪೂಜಿಸಿ, ಮಕ್ಕಳಿಗೆ ಬಿಸು ಆಚರೆಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಸಂಘದ ಎಲ್ಲಾ ಸದಸ್ಯರು ಶ್ರದ್ದೆ ಮತ್ತು ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.



























































































































