
ರಾಷ್ಟ್ರಪ್ರಶಸ್ತಿ ಆಯ್ಕೆಯ ಹಿನ್ನೆಲೆಯಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ನ ಮೌಲ್ಯಮಾಪನದ ಅಂಗವಾಗಿ ಆಗಮಿಸಿದ್ದ ಕೇಂದ್ರ ಸರಕಾರದ ನಿಯೋಗವು ಕುಂತಳನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಗೆ ಭೇಟಿ ನೀಡಿ ಸೆಂಟರ್ ನಲ್ಲಿ ನಡೆಯುತ್ತಿರುವ ನಾನಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿತು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ ಶೆಟ್ಟಿ ಅವರು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.


ಪದವಿ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಐಟಿಐಗಳ 1,450 ವಿದ್ಯಾರ್ಥಿಗಳಿಗೆ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಪಳ್ಳಿ ಬೆಳ್ಳೆ ಮಣಿಪುರ ಮತ್ತು ಅಲೆವೂರು ಗ್ರಾಮ ಪಂಚಾಯಿತಿಗಳಲ್ಲಿ 1450 ಮಹಿಳೆಯರಿಗೆ ಮಹಿಳಾ ಸಬಲೀಕರಣ ನಿಮಿತ್ತ ಉದ್ಯಮ ಅಭಿವೃದ್ಧಿ ಕಾರ್ಯಾಗಾರ, ಡಿಜಿಟಲ್ ಸಾಕ್ಷರತೆ ಅಂಗವಾಗಿ 400 ಮಂದಿಗೆ ಆಲ್ ಕಾರ್ಗೋ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಒಂದು ತಿಂಗಳ ಮೂಲ ಮತ್ತು ಉನ್ನತ ಮಟ್ಟದ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ, ನಾಲ್ಕು ವರ್ಷಗಳಲ್ಲಿ ಎಂ.ಆರ್.ಜಿ ಗ್ರೂಪ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ನಾಲ್ಕು ಉದ್ಯೋಗ ಮೇಳಗಳಿಂದ 3,700 ಜನರಿಗೆ ಉದ್ಯೋಗಾವಕಾಶ ಒದಗಿಸಿರುವುದು ಮೊದಲಾದ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.
ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಸೆಕ್ಷನ್ ಅಧಿಕಾರಿ ಧನಂಜಯ್ ಚಾವ್ಲ, ಹೈದರಾಬಾದಿನ ಎನ್.ಐ.ಆರ್.ಡಿ ಸಂಸ್ಥೆಯ ಕನ್ಸಲ್ಟಂಟ್ ಉಪೇಂದ್ರ, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯರ್, ಮುಖ್ಯ ಯೋಜನಾಧಿಕಾರಿ ಡಾ. ಉದಯ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿ’ಸಿಲ್ವ, ಕಾಪು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು. ಟ್ರಸ್ಟ್ ನ ಖಜಾಂಚಿ ವಿಜೀತ್ ಶೆಟ್ಟಿ ವಂದಿಸಿದರು.

























































































































