
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಉದ್ಯಮಶೀಲ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೇ ಹೊರತು, ಕೇವಲ ಉದ್ಯೋಗಿಯ ಮನೋಧರ್ಮವನ್ನಲ್ಲ. ಹೆತ್ತವರ ಗಳಿಕೆಯ ಮೇಲೆ ಅವಲಂಬಿತರಾಗದೆ ಸೋಮಾರಿತನಕ್ಕೆ ಒಗ್ಗಿಕೊಳ್ಳದೆ ಸದಾ ಉತ್ಸಾಹದ ಚಿಲುಮೆಯಾದಾಗ ಯಶಸ್ಸು ಸಾಧ್ಯ ಎಂದು ಜೇಸಿಸ್ ಅಂತರಾಷ್ಟ್ರೀಯ ಸಂಸ್ಥೆಯ ತರಬೇತುದಾರ ದೀಪಕ್ ರಾಜ್ ಹೇಳಿದರು. ಬಿಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ 2026 -27ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪೋಷಕರಿಗಾಗಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಅಭಿಶಿಕ್ಷಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಡಿ ಶೆಟ್ಟಿ ಮಾತನಾಡಿ, ಉತ್ತಮ ಹವ್ಯಾಸ, ನಿರಂತರ ಪ್ರಯತ್ನಗಳಿಂದ ಬದಲಾವಣೆ ಸಾಧ್ಯ ಎಂದರು. ಕಾಲೇಜಿನ ಸಂಚಾಲಕ ಸತೀಶ್ ಕುಮಾರ್ ಭಟ್ ಕಾಲೇಜಿನಲ್ಲಿ ಲಭ್ಯವಿರುವ ವೃತ್ತಿಪರ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ನೂತನ ಪ್ರಾಂಶುಪಾಲೆ ಗಾಯತ್ರಿ ಶೆಟ್ಟಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಪ್ರೀತಾ ಕೆ.ಪಿ ಮತ್ತು ಶ್ರೀಲತಾ ಎ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಾಣಿಜ್ಯ ವಿಭಾಗದ ಭೀಮವ್ವ, ಕಲಾ ವಿಭಾಗದ ದೀಪಾ ಹಾಗೂ ವಿಜ್ಞಾನ ವಿಭಾಗದ ಜೆನಿಫರ್ ಅವರನ್ನು ಸನ್ಮಾನಿಸಲಾಯಿತು. ಪ್ರಿಯಾ ಪ್ರಭು, ವಸುಂದರ ಹೆಗ್ಡೆ ನಿರ್ವಹಿಸಿದರು. ಬೀನಾ ಕಾಲೇಜಿನ ನಿಯಮಗಳನ್ನು ತಿಳಿಸಿದರು ಸೌಭಾಗ್ಯ ಎಚ್ಎನ್ ಮತ್ತು ಪೂರ್ಣಿಮಾ ನಾಯಕ್ ವಂದಿಸಿದರು.





























































































































