
ಸುರತ್ಕಲ್ ಬಂಟರ ಸಂಘದ ಯುವ ಘಟಕದ ವತಿಯಿಂದ ಏಪ್ರಿಲ್ 28, 29ರಂದು ನಡೆಯಲಿರುವ ಬಂಟ್ಸ್ ಕ್ರಿಕೆಟ್ ಲೀಗ್ ಪಂದ್ಯಾಕೂಟದ ಜೆರ್ಸಿ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಿತು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಪಂದ್ಯಾಕೂಟದ ಟ್ರೋಫಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಕಲೆಗೆ ಜಾತಿ ಇಲ್ಲ. ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಎಲ್ಲರೂ ತನು, ಮನ, ಧನಗಳನ್ನು ಮನಸ್ಪೂರ್ತಿಯಾಗಿ ನೀಡಿ ಸಹಕರಿಸಬೇಕೆಂದು ಬಂಟ್ಸ್ ಕ್ರಿಕೆಟ್ ಲೀಗ್ ಗೆ ಶುಭ ಹಾರೈಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಯಾವುದೇ ಸಮಾಜದ ನಾಯಕರು ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು. ನಮ್ಮ ಶಕ್ತಿ ಬಂಟ ಸಮಾಜಕ್ಕೆ ಉಪಯೋಗವಾಗಬೇಕು. ಸಮಾಜದ ಪ್ರತಿಭೆಗಳಿಗೆ ನಾವೆಲ್ಲರೂ ಒಗ್ಗಟ್ಟಾಗಿ ಪ್ರೋತ್ಸಾಹಿಸಬೇಕಿದೆ. ನಮ್ಮ ಯುವ ಸಮುದಾಯ ಮುಂದಿನ ದಿನಗಳಲ್ಲಿ ಎಲ್ಲಾ ಸ್ತರಗಳಲ್ಲಿಯೂ ಬೆಳೆಯಬೇಕು. ಎಲ್ಲಾ ಸಮಾಜಗಳಿಗೂ ಮಾದರಿಯಾಗಬೇಕು ಎಂದು ನುಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ, ಸಮಾಜದ ಯುವ ಸಮೂಹ ದುಷ್ಚಟಗಳಿಗೆ ಬಲಿಯಾಗದಂತೆ ಎಲ್ಲಾ ಬಂಟರ ಸಂಘಗಳು ಮುಂದಾಗಬೇಕು. ಕ್ರೀಡೆ ದುಷ್ಚಟ ಮುಕ್ತವಾಗಲು ಉತ್ತಮ ಮಾರ್ಗ. ಯುವ ಸಮುದಾಯದ ಎಲ್ಲಾ ರೀತಿಯ ಕ್ರೀಡಾಕೂಟ, ಸಾಮಾಜಿಕ ಕೈಕರ್ಯಗಳಿಗೆ ಜಾಗತಿಕ ಯುವ ಬಂಟರ ಸಂಘದ ಸಹಕಾರ ಎಂದಿಗೂ ಇರಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅವರು, ಯುವ ಸಮುದಾಯ ಸಂಘದ ಹಿರಿಯರ ಅಭಿಪ್ರಾಯಗಳನ್ನು ಪಡೆದುಕೊಂಡು ಮುನ್ನಡೆಯಬೇಕು. ಯುವ ಸಮಿತಿ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಕೆಲಸಗಳಲ್ಲೂ ತಲ್ಲೀನರಾಗಬೇಕು ಎಂದರು. ಇದೇ ವೇಳೆ ಕ್ರಿಕೆಟ್ ಪಂದ್ಯಾಕೂಟಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ, ಸುಧಾಕರ ಎಸ್ ಪೂಂಜಾ, ಲೋಕಯ್ಯ ಶೆಟ್ಟಿ ಮುಂಚೂರು, ಉದ್ಯಮಿ ಗಿರೀಶ್ ಶೆಟ್ಟಿ ಪೆರ್ಮುದೆ, ಪುಷ್ಪರಾಜ್ ಶೆಟ್ಟಿ ಮಧ್ಯ, ಬಬಿತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಯುವ ಘಟಕದ ಸಂಚಾಲಕ ಶಿಶಿರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೂಪ್ ಶೆಟ್ಟಿ ಸ್ವಾಗತಿಸಿದರು. ಶಮಾ ಶೆಟ್ಟಿ ಪ್ರಾರ್ಥಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.


























































































































