
ಹಿಂದೂ ಯುವ ಸೇನೆ ಮಂಗಳೂರು ಇದರ ಪದವು ಶಾಖೆ ಸಂಚಾಲಿತ ಕುಲಶೇಖರ ಪದವು ಶ್ರೀ ಶನೈಶ್ಚರ ದೇವಸ್ಥಾನ ನಿರ್ಮಾಣ, ಬಿಂಬ ಪ್ರತಿಷ್ಠೆ, ಬ್ರಹ್ಮಕಲಶ ಸಮಾಲೋಚನಾ ಸಭೆಯು ಮಾರ್ಚ್ 17ರಂದು ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್ನಲ್ಲಿ ಮಹೇಶ್ ಶೆಟ್ಟಿ ತೆಳ್ಳಾರ್ ಅವರ ಆಡಳಿತದ ‘ಸೋರಾ ಬೈ ನೈನ್’ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಶ್ರೀ ಶನೈಶ್ಚರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿಯವರು ದೇವಸ್ಥಾನದ ಸಮಗ್ರ ಮಾಹಿತಿಯನ್ನು ನೀಡಿ, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ನವಗ್ರಹ ಸಹಿತ ಶ್ರೀ ಶನೈಶ್ಚರ, ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ, ಈ ವರ್ಷ ಎಪ್ರಿಲ್ 23ರಂದು ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಅಶ್ವತ್ಥ ವೃಕ್ಷ ಪ್ರತಿಷ್ಠೆ ನಡೆಸಬೇಕೆಂದು ಸಂಕಲ್ಪಿಸಲಾಗಿದೆ. ಅದರಂತೆ ಎಪ್ರಿಲ್ 18ರಿಂದ 24ರ ತನಕ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶದ ಸಂಭ್ರಮ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ
ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿಗೆ ಅಧ್ಯಕ್ಷರನ್ನಾಗಿ ಹಿಂದೂ ಪ್ರಕಾರವಾದಿ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ಅವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಾರ್ಯದರ್ಶಿಯಾಗಿ ಭಾರತೀಯ ಜನತಾ ಪಕ್ಷದ ಮೀರಾ ಭಯಂದರ್ ಜಿಲ್ಲಾ ಉಪಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಯಶೀಲ ತಿಂಗಳಾಯ ಗುರುಸ್ವಾಮಿ, ಉದಯ ಶೆಟ್ಟಿ ಮಲಾರ ಬೀಡು, ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಯೋಗೇಂದ್ರ ಗಾಣಿಗ, ಜಿ.ಕೆ ಕೆಂಚನಕೆರೆಯವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಶೆಟ್ಟಿ ತೆಳ್ಳಾರ್ ನಿರೂಪಿಸಿದರು. ಸಭೆಯಲ್ಲಿ ಬ್ರಹ್ಮಕಲಶ ಸಮಿತಿಯ ಕಾರ್ಯದರ್ಶಿ ಕಿರಣ್ ರೈ ಬಜಾಲ್, ಕೋಶಾಧಿಕಾರಿ ವಿಕ್ರಮ್ ಚೌಟ ಹಾಗೂ ಅಪಾರ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಉಪಸ್ಥಿತರಿದ್ದರು.
ಚಿತ್ರ, ವರದಿ : ದಿನೇಶ್ ಕುಲಾಲ್


























































































































