ಮಹಾರಾಷ್ಟ್ರದಲ್ಲಿ ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಸಹಿತ 29 ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳಾಗಿ ಕಣಕ್ಕಿಳಿದ ಬಂಟ ಅಭ್ಯರ್ಥಿಗಳು ಉತ್ತಮ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ. ಕಲ್ಯಾಣ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಮಲ್ಲೇಶ್ ಶೆಟ್ಟಿ ಹಾಗೂ ಅವರ ಸುಪುತ್ರ ಹರ್ಮೇಶ್ ಮಲ್ಲೇಶ್ ಶೆಟ್ಟಿಯವರು ಶಿಂದೆ ಬಣದ ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದಾರೆ. ಪನ್ವೇಲ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂತೋಷ್ ಜಿ ಶೆಟ್ಟಿ ಸತತ ಐದನೇ ಬಾರಿ ಗೆಲುವು ಸಾಧಿಸುವ ಮೂಲಕ ವಿಕ್ರಮ ಸಾಧಿಸಿದ್ದಾರೆ. ಬಿಎಂಸಿ ಚುನಾವಣೆಯಲ್ಲಿ ಮುಂಬೈಯ ಪ್ರಸಿದ್ಧ ಸಿದ್ಧಿವಿನಾಯಕ ಮಂದಿರದ ಟ್ರಸ್ಟಿಯಾಗಿ ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿರುವ ಇನ್ನಾ ಭಾಸ್ಕರ್ ಶೆಟ್ಟಿ ಅವರು ಶಿವಸೇನೆ ಅಭ್ಯರ್ಥಿಯಾಗಿ ಧಾರಾವಿ ವಾರ್ಡಿನಲ್ಲಿ ಜಯಭೇರಿ ಬಾರಿಸಿದ್ದಾರೆ.



ಬಿಎಂಸಿ ವಾರ್ಡ್ ನಂಬರ್ 9ರಲ್ಲಿ ಗೊರಾಯಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಾನಂದ ಶೆಟ್ಟಿ ಚುನಾಯಿತರಾದರೆ, ನವಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದ್ಯಮಿ ಸುರೇಶ್ ಶೆಟ್ಟಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೀರಾ ಭಯಂದರ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಕಾಂಕ್ಷಾ ಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ವಸಾಯಿ ವಿರಾರ್ ಮಹಾನಗರ ಪಾಲಿಕೆಯಲ್ಲಿ ಮಾಜಿ ಮೇಯರ್ ಪ್ರವೀಣ್ ಶೆಟ್ಟಿ ಅವರು ಬಹುಜನ ವಿಕಾಸ್ ಅಘಾಡಿ ಪಕ್ಷದ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದಾರೆ. ಭಿವಂಡಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಹೋದರರಾದ ಸಂತೋಷ್ ಎಂ ಶೆಟ್ಟಿ ಮತ್ತು ರಾಜೇಶ್ ಎಂ ಶೆಟ್ಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಗೆದ್ದ ಎಲ್ಲಾ ಬಂಟ ಅಭ್ಯರ್ಥಿಗಳಿಗೆ ಸಮಸ್ತ ಬಂಟ ಸಮಾಜ ಬಾಂಧವರ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತಿದೆ.

















































































































