ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸಿ ಒತ್ತಡ ನಿವಾರಣೆ ಮಾಡಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವಲ್ಲಿ ಕ್ರೀಡೆಗಳ ಪಾತ್ರ ದೊಡ್ಡದು. ನಮ್ಮ ನೆಚ್ಚಿನ ಕ್ರೀಡೆಯಲ್ಲಿ ತೊಡಗಿಸಿಕೊಂಡಂತೆ ಕ್ರೀಡೆ ನಮ್ಮ ಮಾನಸಿಕ ಆರೋಗ್ಯಕ್ಕೆ ಕೂಡಾ ಅತ್ಯವಶ್ಯಕವಾಗಿದೆ. ಕ್ರೀಡೆ ಜೀವನದಲ್ಲಿ ಯಶಸ್ವಿಯಾಗಲು ಬೇಕಾದ ವಿಶ್ವಾಸ ಮತ್ತು ಕೌಶಲ್ಯಗಳನ್ನು ನೀಡುವ ಚಟುವಟಿಕೆಯಾಗಿದೆ. ಪಾಲಕರು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಅತ್ಯವಶ್ಯಕ. ಯುವ ಅಥ್ಲೆಟಿಕ್ಸ್ ಗಳಿಗೆ ಖೇಲೋ ಇಂಡಿಯಾ ಮೂಲಕ ಹಲವಾರು ಸವಲತ್ತು ಸಿಗುತ್ತಿವೆ. ಇದರ ಸದುಪಯೋಗ ಪಡೆಯುವಲ್ಲಿ ನಮ್ಮ ಸಮಾಜದವರು ಪ್ರಯತ್ನಿಸಬೇಕು. ಬಂಟರು ಸಂಘಟನೆ, ಉದ್ಯಮ, ಕೈಗಾರಿಕಾ, ವಿದ್ಯಾ ಕ್ಷೇತ್ರ ಮತ್ತು ಹಲವಾರು ಕ್ಷೇತ್ರದಲ್ಲಿ ಮಾಡಿದ ಸಾಧನೆ ಬಹಳ ದೊಡ್ಡದು. ಅದೇ ರೀತಿ ಕ್ರೀಡಾ ಕ್ಷೇತ್ರದಲ್ಲಿ ನಮ್ಮವರ ಸಾಧನೆ ದೊಡ್ಡ ಮಟ್ಟದಲ್ಲಿ ಮೂಡಿ ಬರಬೇಕು. ನಮ್ಮ ಸಮಾಜದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ನಮಗೆ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಮೀಟ್ ಹೋದಾಗ ಸಿಗುವ ಆತಿಥ್ಯ ಇಲ್ಲಿ ಪುಣೆ ಬಂಟರ ಸಂಘದಿಂದ ಕೂಡಾ ಸಿಕ್ಕಿದೆ. ಪುಣೆಗೆ ಬಂದು ತುಂಬಾ ಖುಷಿಯಾಗಿದೆ. ನನಗೆ ಇಲ್ಲಿ ನೀಡಿದ ಸನ್ಮಾನ ಹೃದಯ ತುಂಬಿ ಬಂತು. ಪುಣೆ ಬಂಟರ ಶಕ್ತಿಯಾಗಿರುವ ಸಂತೋಷ್ ಶೆಟ್ಟಿಯವರ ನಾಯಕತ್ವ ಗುಣವನ್ನು ಪುಣೆ ಬಂಟರು ತಿಳಿದುಕೊಂಡಿದ್ದಾರೆ. ಹಾಗೆಯೇ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ಸಂಘಟನಾ ಚತುರತೆ ಇಲ್ಲಿ ಕಾಣುತ್ತಿದೆ. ಸಮಾಜ ಬಾಂಧವರು ಒಂದೆಡೆ ಸೇರಿಕೊಂಡು ತಮ್ಮಲ್ಲಿರುವ ಪ್ರತಿಭೆಗಳನ್ನು ತೋರ್ಪಡಿಸುವ ಕಾರ್ಯ ಇಂತಹ ಕೂಟಗಳಿಂದ ಬೆಳಕಿಗೆ ಬರುತ್ತದೆ. ನಾವು ಯಾವ ಕ್ಷೇತ್ರದಲ್ಲಿ ಇದ್ದೇವೆ ಅಲ್ಲಿ ಪ್ರಯತ್ನ ಮುಖ್ಯ. ಅದರ ಫಲ ಖಂಡಿತಾ ಸಿಕ್ಕೇ ಸಿಗುತ್ತದೆ ಎಂಬುದನ್ನು ಇಲ್ಲಿ ಸೇರಿರುವ ಯುವ ಜನತೆಗೆ ಹೇಳಲು ಬಯಸುತ್ತೇನೆ ಎಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರೋಹಿತ್ ಕುಮಾರ್ ಕಟೀಲ್ ನುಡಿದರು. ಬಂಟರ ಸಂಘ ಪುಣೆ ಇದರ ಅಶ್ರಯದಲ್ಲಿ ಬಂಟ ಸಮಾಜ ಬಾಂಧವರಿಗಾಗಿ ವಾರ್ಷಿಕ ಕ್ರೀಡಾಕೂಟವು ಜನವರಿ 11 ರವಿವಾರದಂದು ಬೆಳಿಗ್ಗೆ ಪುಣೆಯ ಮುಕುಂದ್ ನಗರದ ಮಹಾರಾಷ್ಟ್ರೀಯ ಮಂಡಲ ಕಟಾರಿಯಾ ಕಾಲೇಜ್ ಗ್ರೌಂಡ್ ನಲ್ಲಿ ವಿವಿಧ ಕ್ರೀಡಾ ಆಟೋಟ ಸ್ಪರ್ದೆಗಳೊಂದಿಗೆ ಜರಗಿತು.


ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಗೌರವ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ನಡೆದ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಮಟ್ಟದ ಕ್ರೀಡಾಪಟು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರೋಹಿತ್ ಕುಮಾರ್ ಕಟೀಲ್, ಗೌರವ ಅತಿಥಿಗಳಾಗಿ ಮುಂಬಯಿ ಮಾಲ್ವನ್ ತಡ್ಕ ಗ್ರೂಪ್ ಆಫ್ ರೆಸ್ಟೋರೆಂಟ್ ನ ಸಿಎಂಡಿ ಆದರ್ಶ್ ಶೆಟ್ಟಿ ಹಾಲಾಡಿ, ಬಂಟರ ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರ. ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅಜಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ ಇಸಾರಮಕ್ಕಿ, ಮಹಿಳಾ ಕ್ರೀಡಾ ಕಾರ್ಯಾಧ್ಯಕ್ಷೆ ವಿನಯ ಯು ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿಯವರು ಉಪಸ್ಥಿತರಿದ್ದರು. ಅತಿಥಿ ಗಣ್ಯರು ಕ್ರೀಡಾಕೂಟದ ದೀಪ ಪ್ರಜ್ವಲನೆ ಮಾಡಿ ನಂತರ ಕ್ರೀಡಾಳುಗಳಿಂದ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ, ಬಲೂನ್ ಗಳನ್ನು ಹಾರಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಮುಖ್ಯ ಅತಿಥಿಯಾದ ರೋಹಿತ್ ಕುಮಾರ್ ಕಟೀಲ್ ರವರನ್ನು ಶಾಲು, ಫಲಪುಷ್ಪ, ಹಾರ, ಸ್ಮರಣಿಕೆ, ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. ಇವರ ಸನ್ಮಾನ ಪತ್ರವನ್ನು ಅಕ್ಷತಾ ಸುಜಿತ್ ಶೆಟ್ಟಿ ಓದಿದರು. ಗೌರವ ಅತಿಥಿ ಆದರ್ಶ್ ಶೆಟ್ಟಿಯವರನ್ನು ಶಾಲು, ಪುಷ್ಪ ಗುಚ್ಛ, ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಇವರ ಪರಿಚಯವನ್ನು ಕಿಶೋರ್ ಹೆಗ್ಡೆ ಮಾಡಿದರು. ಬೆಳಿಗ್ಗೆ ಮಕ್ಕಳಿಗಾಗಿ, ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧಗಳು ನಡೆದವು. ಅತಿಥಿ ಗಣ್ಯರು ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ವಿಜೇತರಾದ ಮಕ್ಕಳಿಗೆ ಪದಕ ನೀಡಿ ಗೌರವಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು ಈ ಕ್ರೀಡಾಕೂಟದ ಯಶಸ್ವಿಗೆ ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಎಲ್ಲಾ ಸಮಿತಿಯ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳು, ಸದಸ್ಯರುಗಳು ಸಹಕರಿಸಿದರು. ಕಿಶೋರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಚಿತ್ರ, ವರದಿ : ಹರೀಶ್ ಮೂಡುಬಿದ್ರಿ

















































































































