ಬಂಟರ ಸಂಘವು ಒಂದು ದೇವಸ್ಥಾನವಿದ್ದಂತೆ. ಸಂಘವು ಅದರ ಎಲ್ಲಾ ಸದಸ್ಯರಿಗೆ ಸೇರಿದ್ದು, ಬಂಟರ ಸಂಘದ ಎಲ್ಲಾ ಮೂರು ಶಿಕ್ಷಣ ಸಂಸ್ಥೆಯಿಂದಾಗಿ ಮುಂದೆ ಸಂಘಕ್ಕೆ ದೊಡ್ಡ ಮಟ್ಟದ ಆದಾಯವಾಗಲಿದ್ದು, ಸಂಘವು ಮುಂದೆ ಆರ್ಥಿಕವಾಗಿ ಮತ್ತಷ್ಟು ಗಟ್ಟಿಯಾಗಲಿದೆ. ಸಂಘದ ಬೊರಿವಲಿ ಶಿಕ್ಷಣ ಸಂಸ್ಥೆಗೆ ಜೋಗೇಶ್ವರಿ ದಹಿಸರ್ ಪರಿಸರದ ಸಮಾಜ ಬಾಂಧವರ ಮಹತ್ವದ ಕೊಡುಗೆಯಿದೆ ಎಂದು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ, ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ಇದರ ಸಿ.ಎಂ.ಡಿ ಮಹೇಶ್ ಎಸ್. ಶೆಟ್ಟಿ ನುಡಿದರು. ಜನವರಿ 3 ರಂದು ಬೊರಿವಲಿ ಪಶ್ಚಿಮದ ನ್ಯೂ ಲಿಂಕ್ ರೋಡ್ ಪಕ್ಕದ ಎಕ್ಸರ್ ಕ್ಲಬ್ ಸಮೀಪವಿರುವ ಕೆ. ಡಿವೈನ್ ಲಾನ್ಸ್ ಎಂಡ್ ಕನ್ವೆನ್ಶನ್ ನ ಸಭಾಗೃಹದಲ್ಲಿ ಬೋಳ ನಂದಳಿಕೆ ‘ಶ್ರೀ ಮಾತಾ’ ಸುಬ್ಬಯ್ಯ ವಿ. ಶೆಟ್ಟಿ ಸ್ಮಾರಕ ವೇದಿಕೆಯಲ್ಲಿ, ಸಂಘದ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ಜರಗಿದ ಪ್ರಾದೇಶಿಕ ಸಮಿತಿಯ ಹದಿನೆಂಟನೆಯ ವರ್ಷದ ವಾರ್ಷಿಕೋತ್ಸವ ಅಷ್ಟಾದಶ ಸಂಭ್ರಮ ಸಮಾರಂಭದ ಸಭಾ ಕಾರ್ಯಕ್ರಮದ ಗೌರವ ಅತಿಥಿ ಹಾಗೂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹೇಶ್ ಎಸ್. ಶೆಟ್ಟಿಯವರು ಸಂಘದ ನೂರನೇ ವರ್ಷದ ಸಂದರ್ಭದಲ್ಲಿ ಸಂಘದ್ದೇ ಆದ ಆಸ್ಪತ್ರೆ, ವಿಶಾಲವಾದ ಬಂಟರ ಭವನ ಪುನಃ ನಿರ್ಮಾಣ ಸೇರಿ ಹಲವಾರು ಯೋಜನೆಗಳಿವೆ. ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯು ನಿಜವಾಗಿಯೂ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರತರಾಗಿರುವ ಅತ್ಯಂತ ಸುಂದರ ಹಾಗೂ ಮಾದರಿ ಸಮಿತಿಯಾಗಿದೆ ಎಂದು ಅವರು ಶ್ಲಾಘಿಸಿದರು. ಅಶೋಕ ಪಕ್ಕಳರಂತಹ ಪ್ರತಿಭಾವಂತರು ನಮ್ಮ ಸಂಘದ ಆಸ್ತಿಯೆಂದು ಹೇಳಿದ ಅವರು, ನಾವೆಲ್ಲರೂ ಒಟ್ಟಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು.

ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರು ನಮ್ಮ ಸಮಿತಿಯು ಸಮಿತಿಯ ಎಲ್ಲಾ ಸಲಹೆಗಾರರ ಮಾರ್ಗದರ್ಶನದಿಂದ ಹಲವಾರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ವೈದ್ಯಕೀಯ ಹಾಗೂ ಕ್ರೀಡಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಸಮಿತಿಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಹಕಾರದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ, ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಪ್ರಾಚೀನ ತುಳುನಾಡಿನ ಸಂಸ್ಕೃತಿಯನ್ನು ಇಂದಿನ ಜನತೆಗೆ ಪರಿಚಯಿಸುವ ಆಟಿ ತಿಂಗಳ ನೆನಪು, ಉದ್ಯೋಗಾಕಾಂಕ್ಷಿಗಳಿಗಾಗಿ ಸ್ಕಿಲ್ಲ್ ಫಾರ್ ಎಂಪ್ಲಾಯ್ ಮೆಂಟ್, ನವರಾತ್ರಿ ಉತ್ಸವ, ಊರಿನ ತಂಡಗಳ ಯಕ್ಷಗಾನ ತಾಳಮದ್ದಳೆಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಪ್ರವಾಸ, ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರಮುಖವಾಗಿವೆ. ಇದಲ್ಲದೆ ನಮ್ಮ ಸಮಿತಿಯ ಮೂಲಕ ಅಸಾಯಕರಿಗೆ ಸಹಾಯ ಮಾಡುವುದರೊಂದಿಗೆ ಬಡವರ ಕಣ್ಣೀರೊರೆಸುವ ಕಾರ್ಯ ನಡೆಸುತ್ತಿದ್ದು ಇದಕ್ಕೆ ದಾನಿಗಳ ಬೆಂಬಲವನ್ನು ಮರೆಯುವಂತಿಲ್ಲ ಎಂದರು. ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅವರು ಉಪಸ್ಥಿತರಿದ್ದು ಮಾತನಾಡುತ್ತಾ, ಕಳೆದ 44 ವರ್ಷಗಳ ಬಳಿಕ ಕಾಪು ಕ್ಷೇತ್ರದಲ್ಲಿ ನಮ್ಮ ಸಮಾಜದಿಂದ ನನಗೆ ಶಾಸಕನಾಗುವ ಅವಕಾಶ ದೊರೆತಿರುವುದಕ್ಕೆ ಮುಂಬಯಿಗರಾದ ನಿಮ್ಮೆಲ್ಲರ ಕೊಡುಗೆ ಅಪಾರವಾಗಿದ್ದು, ಅದಕ್ಕಾಗಿ ತಡವಾದರೂ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವೆನು, ನಮ್ಮವರು ಇಲ್ಲಿ ಹಗಲಿರುಳು ಪರಿಶ್ರಮಪಟ್ಟು ದುಡಿದು ಇಂದು ಬಹಳ ಎತ್ತರದ ಮಟ್ಟಕ್ಕೆ ತಲುಪಿರುವುದರೊಂದಿಗೆ IAS ನಂತಹ ಉನ್ನತ ಹುದ್ದೆಗಳಿಗೂ ಏರಲು ಸಾಧ್ಯವಾಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮುಂದಿನ ಪೀಳಿಗೆಗೆ ಹೆಚ್ಚಿನ ಪ್ರಯೋಜನವಾಗುವಂತೆ ನಮ್ಮ ಸಂಘಟನೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಕರೆ ನೀಡುತ್ತಾ, ನಾಡಿನ ಧಾರ್ಮಿಕ ಕ್ಷೇತ್ರಗಳಿಗೆ ಮುಂಬಯಿಗರ ಕೊಡುಗೆ ಅಪಾರ ಇದೆ ಎಂದರು. ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಸಮಿತಿಯ ಎಲ್ಲಾ ಕಾರ್ಯಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೆರಂಬ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿ.ಎಂ.ಡಿ. ಡಾ| ಸದಾಶಿವ ಕೆ. ಶೆಟ್ಟಿ ಕೂಳೂರು ಕನ್ಯಾನ ಮಾತನಾಡುತ್ತಾ, ನಾನು ಈ ಪ್ರಾದೇಶಿಕ ಸಮಿತಿಗೆ ಒಳಪಟ್ಟವನಾಗಿದ್ದು ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನನಗೆ ತುಂಬಾ ಹತ್ತಿರದ ಸಂಬಂಧಿಕರಾಗಿದ್ದು ಇಂದು ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ನಮ್ಮದೇ ಕಾರ್ಯಕ್ರಮ ಅಂತ ಇಂದಿಲ್ಲಿಗೆ ಬಂದಿರುವೆನು. ಇಲ್ಲಿ ಅನೇಕರಿಗೆ ಸನ್ಮಾನ ಮಾಡಿದ್ದು ಇಂತಹ ಸಮಾಜ ಪರ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರಲಿ ಎಂದರು. ವಿಶೇಷ ಅತಿಥಿಯಾಗಿ ಆಗಮಿಸಿದ ರಾಜೇಶ್ ಪ್ರಸಾದ್, IAS ಮುಖ್ಯ ಕಾರ್ಯದರ್ಶಿ ಚಂಡೀಗಡ ಅವರು ಮಾತನಾಡುತ್ತಾ, ನನ್ನನ್ನು ಅಷ್ಟು ದೂರದಿಂದ ಪ್ರೀತಿ, ಗೌರವದಿಂದ ಕರೆಸಿ, ವಿಶೇಷವಾಗಿ ಸನ್ಮಾನಿಸಿದಕ್ಕೆ ಅಭಾರಿಯಾಗಿದ್ದೇನೆ ಹಾಗೂ ಪ್ರಾದೇಶಿಕ ಸಮಿತಿಯ ಹದಿನೆಂಟನೆಯ ವಾರ್ಷಿಕೋತ್ಸವಕ್ಕೆ ಬಾಗವಹಿಸಲು ಸಂತೋಷವಾಗುತ್ತಿದೆ. ಕೆಲವು ತಿಂಗಳ ಹಿಂದೆ ಚೆಂಬೂರಿನ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದೆ. ಇಂದಿನ ಚಟುವಟಿಕೆಗಳನ್ನು ನೋಡುವಾಗ ನಮ್ಮವರು ಎಲ್ಲಾ ಕ್ಶೇತ್ರದಲ್ಲಿದ್ದು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯ. ನಮ್ಮ ಬಂಟರ ಸಂಘದ ಜನಸೇವೆಯು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಿಮ್ಮ ಎಲ್ಲಾ ಕಾರ್ಯಚಟುವಟಿಕೆಗಳು ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಮಹಿಳಾ ವಿಬಾಗದ ಚಟುವಟಿಕೆಗಳ ಬಗ್ಗೆ ಕಾರ್ಯಾಧ್ಯಕ್ಷೆ ಸುನೀತಾ ಎನ್ ಹೆಗ್ಡೆಯವರು ಮಾಹಿತಿಯಿತ್ತರೆ, ಯುವ ವಿಭಾಗದ ಚಟುವಟಿಕೆಗಳ ಬಗ್ಗೆ ಕಾರ್ಯಾಧ್ಯಕ್ಷ ಅಕ್ಷಜ್ ಆರ್ ಶೆಟ್ಟಿ ಮಾಹಿತಿಯಿತ್ತರು.
ವೇದಿಕೆಯಲ್ಲಿ ರಘುರಾಮ ಶೆಟ್ಟಿ ಅವೆನ್ಯೂ, ರಾಜೇಶ್ ಪ್ರಸಾದ್ ಐ.ಎ.ಎಸ್ ಮುಖ್ಯ ಕಾರ್ಯದರ್ಶಿ ಚಂಡೀಗಡ, ಡೆಪ್ಯೂಟಿ ಚೀಫ್ ಫೈರ್ ಆಫೀಸರ್ ಹರೀಶ್ಚಂದ್ರ ಶೆಟ್ಟಿ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬಂಟರ ಸಂಘ ಮುಂಬಯಿಯ ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಯೋಜಕರಾದ ಭಾಸ್ಕರ್ ವೈ ಶೆಟ್ಟಿ ಖಾಂದೇಶ್, ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಹೆಚ್ ಶೆಟ್ಟಿ, ಹಿರಿಯ ಸಲಹೆಗಾರರಾದ ಮುಂಡಪ್ಪ ಯಸ್ ಪಯ್ಯಡೆ, ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್ ಭಂಡಾರಿ, ರವೀಂದ್ರ ಆರ್ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಎನ್ ಹೆಗ್ಡೆ, ಸಲಹೆಗಾರರಾದ ಶೈಲಜಾ ಎ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಯಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಯಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಹೆಚ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿ ಪರಿವಾರ ಮತ್ತು ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ ಸುನೀತಾ ಎನ್ ಹೆಗ್ಡೆ ದಂಪತಿಯನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ವೈವಾಹಿಕ ಜೀವನದ ಐವತ್ತು ಸಂವತ್ಸವರನ್ನು ಪೂರೈಸಿದ ಖ್ಯಾತ ಹೋಟೇಲು ಉಧ್ಯಮಿ ಕೃಷ್ಣ ವೈ ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿಯನ್ನು, ಅವೆನ್ಯೂ ಹೋಟೇಲಿನ ರಘುರಾಮ ಶೆಟ್ಟಿ, ಡೆಪ್ಯೂಟಿ ಚೀಫ್ ಫೈರ್ ಆಫೀಸರ್ ಹರೀಶ್ಚಂದ್ರ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ : ನನ್ನನ್ನು ಇಂದು ಸನ್ಮಾನಿಸಿದಕ್ಕೆ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿ ಮತ್ತವರ ತಂಡಕ್ಕೆ ಕೃತಜ್ನತೆ ಸಲ್ಲಿಸುತ್ತಿರುವೆನು. ಕಳೆದ 15 ವರ್ಷಗಳಲ್ಲಿ ಹೊರನಾಡಿನ ಕನ್ನಡಿಗರಲ್ಲಿ ನಮ್ಮ ಸಂಘದ 7 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದರಿಂದ ನಮ್ಮವರು ಎಷ್ಟು ಪ್ರತಿಭಾವಂತರು ಹಾಗೂ ಕ್ರೀಯಾಶೀಲರು ಅಂತ ತಿಳಿಯಬಹುದಾಗಿದೆ. ನಾನು ಈ ಮಟ್ಟಕ್ಕೆ ಬರಲು ನನ್ನ ಹೆತ್ತವರು, ಸಹೋದರರು, ಪಯ್ಯಡೆ ಕುಟುಂಬ ಇವರ ಪ್ರೋತ್ಸಾಹ ಕಾರಣ. ಕ್ರಿಕೆಟ್ ನಲ್ಲಿ ನನಗೆ ಶರದ್ ಪವಾರ್ ಅವರ ಸಹಾಯ ಅಲ್ಲದೇ ಬಂಟರ ಸಂಘದಲ್ಲಿ ಹಿರಿಯರ ಮಾರ್ಗದರ್ಶನ ನನ್ನ ಯಶಸ್ಸಿಗೆ ಕಾರಣ. ನನಗೆ ಇಂದು ಆಶೀರ್ವದಿಸಿದ ಎಲ್ಲರಿಗೂ ಅಬಾರಿಯಾಗಿದ್ದೇನೆ ಎಂದು 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರೂ ಆದ ಡಾ. ಪಿ. ವಿ. ಶೆಟ್ಟಿ ನುಡಿದರು. ಜೋಗೇಶ್ವರಿ ದಹಿಸರ್ ಪ್ರದೇಶದ ಸಮಿತಿಯ ಸಾಧಕರದ, ಹಿರಿಯ ಹೋಟೇಲು ಉಧ್ಯಮಿ ಗೋರೆಗಾಂವ್ ಫಿಲ್ಮಿಸ್ತಾನ್ ಸ್ಟುಡಿಯೋ ಕ್ಯಾಂಟೀನ್ನ ವಿಠಲ್ ಎಸ್. ಶೆಟ್ಟಿ, ವ್ಯವಹಾರ ಕ್ಷೇತ್ರದಲ್ಲಿ ದಹಿಸರ್ನ ರಾಘವೇಂದ್ರ ಸ್ಟೋರ್ಸ್ನ ಶಿವರಾಮ್ ಎನ್. ಶೆಟ್ಟಿ ಹಾಗೂ ಹನುಮಾನ್ ಜನರಲ್ ಸ್ಟೋರ್ನ ವಸಂತ್ ಎಲ್. ಶೆಟ್ಟಿ, ಬೊರಿವಲಿಯ ಮಹಾನ್ಯ ಕ್ಲಿನಿಕ್ನ ಡಾ. ಗುರುಪ್ರಸಾದ್ ಶೆಟ್ಟಿ, ಯಕ್ಷಗಾನ ಕಲಾವಿದ ಹಾಗೂ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಕ್ರೀಡಾ ಕ್ಷೇತ್ರದ ದಹಿಸರ್ನ ಹೋಟೆಲ್ ದಯಾನಂದ್ ಮತ್ತು ಎನ್.ಎಲ್. ಸ್ಪೋರ್ಟ್ಸ್ ಕ್ಲಬ್ನ ದಯಾನಂದ ಕೆ. ಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಉಷಾ ಶೆಟ್ಟಿ, ಮಾಜಿ ನಗರ ಸೇವಕ ಹಾಗೂ ಸಮಾಜ ಸೇವಕ ಶಿವಾನಂದ ಶೆಟ್ಟಿ ಮತ್ತು ಖ್ಯಾತ ಗೋಲ್ ಕೀಪರ್ ಶಿವಿಕಾ ಶೆಟ್ಟಿ, ಆಹಾರ್ ನ ನೂತನ ಅಧ್ಯಕ್ಷ ವಿಜಯ್ ಶೆಟ್ಟಿ, ಪ್ರದೇಶದ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಮಿತಿಯ ಪ್ರಮುಖರಾದ ಅಶೋಕ್ ವಿ ಶೆಟ್ಟಿ, ರಘುನಾಥ್ ಎನ್ ಶೆಟ್ಟಿ, ಅಶೋಕ ಪಕ್ಕಳ ಮತ್ತು ಮೊಹನ್ ರೈ ಕರ್ನೂರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

















































































































