ಸುಂದರ ಕೊಡಗಿನ ಮುಖ್ಯಪಟ್ಟಣ ಮಂಜಿನ ನಗರಿ ಮಡಿಕೇರಿಯ ಹೃದಯ ಭಾಗದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥಾ ಪುಸ್ತಕವು ಜನವರಿ 5 ರಂದು ಸೋಮವಾರ ಪೂರ್ವಾಹ್ನ ಮಡಿಕೇರಿಯಲ್ಲಿರುವ ಶ್ರೀ ಓಂಕಾರೇಶ್ವರ ದೇವರ ಸನ್ನಿಧಾನದಲ್ಲಿ ಪೂಜಾ ವಿದಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು. ಶ್ರೀ ಓಂಕಾರೇಶ್ವರ ದೇವಾಸ್ಥಾನ ಸಮಿತಿಯ ಅಧ್ಯಕ್ಷರು ಶ್ರೀ ಅಪ್ಪನೆರವಂಡ ಚುಮ್ಮಿ ದೇವಯ್ಯನವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮೂಡಿ ಬಂದಿರುವ ಚಿತ್ರಕಥಾ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಸರ್ವರಿಗೂ ಶುಭವನ್ನು ಹಾರೈಸಿದರು. ಮಡಿಕೇರಿ ಸಿಟಿ ಮುನ್ಸಿಪಲ್ ಕಾರ್ಪೊರೇಶನ್ ಮಾಜಿ ಅಧ್ಯಕ್ಷರು, ಮಡಿಕೇರಿ ಓಂಕಾರೇಶ್ವರ ದೇವಸ್ಥಾನ ಸಮಿತಿಯ ಪೂರ್ವ ಅಧ್ಯಕ್ಷರು ಶ್ರೀ ಕೊಂಗಂಡ ಎಸ್. ದೇವಯ್ಯನವರು ಗೌರವ ಅತಿಥಿಗಳಾಗಿ ಪಾಲ್ಗೊಂಡು ಪ್ರಥಮ ಕೃತಿಯನ್ನು ಸ್ವೀಕರಿಸಿದರು. ೧೬ನೇ ಶತಮಾನದಲ್ಲಿ ಕೊಡಗನ್ನು ಆಳಿರುವ ಹಾಲೇರಿ ವಂಶದ ರಾಜ ಮನೆತನದ ಶ್ರೀ ಲಿಂಗರಾಜೇಂದ್ರ ಒಡೆಯರ್-||, 1820ರಲ್ಲಿ ನಿರ್ಮಿಸಿರುವ ಶ್ರೀ ಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥೆ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈಯವರ ಪರಿಕಲ್ಪನೆಯಲ್ಲಿ ಡಿಜಿಟಲ್ ಗ್ರಾಫಿಕ್ಸ್ ಚಿತ್ರಕಥೆಯೊಂದಿಗೆ ವಿನ್ಯಾಸಗೊಂಡಿದೆ.



ಮಡಿಕೇರಿಯನ್ನು ಆಳಿರುವ ಹಾಲೇರಿ ವಂಶದ ರಾಜಮನೆತನದ ವಿವರ, ಐತಿಹಾಸಿಕ ಅರಮನೆ, ಶ್ರೀ ಓಂಕಾರೇಶ್ವರ ದೇವಾಲಯ ನಿರ್ಮಾಣದ ಹಿನ್ನೆಲೆ ಸುಂದರವಾಗಿ ವರ್ಣರಂಜಿತ ಚಿತ್ರಗಳೊಂದಿಗೆ ಮೂಡಿ ಬಂದಿದೆ. ಚಿತ್ರಕಥಾ ಪುಸ್ತಕ ಮಾಲಿಕೆಯು ಕನ್ನಡ ಮತ್ತು ಇಂಗೀಷ್ ಭಾಷೆಯಲ್ಲಿ ಮುದ್ರಣವಾಗಿದೆ. ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ಕನ್ನಡ, ಇಂಗ್ಲೀಷ್, ಅರೆಭಾಷೆ ಮತ್ತು ತಮಿಳು ಭಾಷೆಯಲ್ಲಿ ಅಕ್ಟೋಬರ್ ನಲ್ಲಿ ಕಾವೇರಿ ತುಲಾ ಸಂಕ್ರಮಣದಂದು ಬಿಡುಗಡೆಯಾಗಿದ್ದು ಇದೀಗ ಶ್ರೀ ಓಂಕಾರೇಶ್ವರ ದೇವಾಲಯದ ಚಿತ್ರಕಥಾ ಪುಸ್ತಕ ಮಡಿಕೇರಿಯ ಐಶ್ವರ್ಯ ಕ್ರೀಯೇಶನ್ಸ್ ರವರ 27ನೇ ಪ್ರಕಟಣೆಯಾಗಿದೆ. ಶ್ರೀ ಓಂಕಾರೇಶ್ವರ ದೇವಾಲಯದ ಚಿತ್ರಕಥಾ ಪುಸ್ತಕ ಕೊಂಡುಕೊಳ್ಳುವವರಿಗೆ ಮಡಿಕೇರಿ ಓಂಕಾರೇಶ್ವರ ದೇವಾಲಯ ಹಾಗೂ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ದೊರೆಯಲಿದೆ.

















































































































