ಬ್ರಹ್ಮಾವರ: ಅಂತಿಮ ಪರೀಕ್ಷೆಯ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಡಿ. 18 ರಂದು ಪರೀಕ್ಷಾಪೂರ್ವ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ, ವ್ಯಕ್ತಿತ್ವ, ಕಲಿಕಾ, ಪ್ರೇರಣಾ ಗುರು ಮೈಸೂರಿನ ಶ್ರೀ ಚೇತನ್ ರಾಮ್ ಆರ್. ಎ. ಆಗಮಿಸಿದ್ದರು. ಅವರು ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಸಮಸ್ಯೆ, ಹೇಗೆ ಓದಬೇಕು, ಆಹಾರ ಮತ್ತು ಆರೋಗ್ಯ ನಿರ್ವಹಣೆ, ಮೆದುಳಿನ ನಿರ್ವಹಣ ತಂತ್ರ, ಪಂಚೇಂದ್ರಿಯಗಳ ನೆರವಿನಿಂದ ವಿಷಯ ಸಂಗ್ರಹಣೆ, ಸಕಾರಾತ್ಮಕ ಚಿಂತನೆ, ಜ್ಞಾನ ಕೌಶಲ ಮನೋಭಾವದ ಕುರಿತು ಮಾಹಿತಿ ನೀಡಿ ಪಠ್ಯ ಪುಸ್ತಕವೇ ತಾಯಿ ಅದನ್ನು ಕೇಳಿ ತಿಳಿದು ನಿರಂತರ ಓದುವುದೇ ಸಾಧನೆಯ ಮಂತ್ರವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಸರಿಯಾದ ಸಮಯದಲ್ಲಿ ಸೂಕ್ತ ವ್ಯಕ್ತಿಯಿಂದ ಮಕ್ಕಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು. ಕಾರ್ಯಾಗಾರದಲ್ಲಿ ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಜಿ ಎಮ್ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲೆ ದೀಪ್ತಿ ಶೆಟ್ಟಿ, ಕನ್ನಡ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


















































































































