ಸರ್ವಶಕ್ತ ಭಗವಂತನ ಆಶೀರ್ವಾದದಿಂದ ಈ ಕ್ಷೇತ್ರದ ಜೊತೆಯಲ್ಲಿ ಋಣಾನುಬಂಧವಿದೆ. ಇಲ್ಲಿ ಸಣ್ಣ ಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭದ ನಂತರ ಇಲ್ಲಿ ದೇವಸ್ಥಾನದ ಶಂಕುಸ್ಥಾಪನೆಯನ್ನು ಕೂಡ ಮಾಡುವ ಯೋಗ ನನಗೆ ಸಿಕ್ಕಿದೆ. ನಂತರ ನಡೆದ ಜೀರ್ಣೋದ್ದಾರ ಮತ್ತು ಬ್ರಹ್ಮ ಕಲಶೋತ್ಸವದ ಗೌರವಾಧ್ಯಕ್ಷನಾಗಿ ನನ್ನಿಂದಾಗುವ ದೇವತಾ ಕಾರ್ಯವನ್ನು ಮಾಡಿ ಸಂತೃಪ್ತಿಯನ್ನು ಪಡೆದಿದ್ದೇನೆ. ಕ್ಷೇತ್ರದ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷನಾಗಬೇಕೆಂಬ ನಿಮ್ಮೆಲ್ಲರ ಪ್ರೀತಿಯ ಮಾತಿಗೆ ಒಪ್ಪಿ ನನ್ನಿಂದಾಗುವ ಸೇವೆಯನ್ನು ನೀಡಲು ಸದಾ ಸಿದ್ದನಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ. ಹಾಗೆಯೇ ಜನವರಿಯಲ್ಲಿ ನಡೆಯುವ ವಾರ್ಷಿಕೋತ್ಸವ ಮಹಾಪೂಜೆಯ ಆಮಂತ್ರಣ ಪತ್ರಿಕೆ ಬಿಡಗಡೆ ಆಗಿದೆ. ಪುಣೆಯ ಸರ್ವ ತುಳು ಕನ್ನಡಗಿರ ಮತ್ತು ಇತರೆ ಬಾಷಿಕರ ಭಕ್ತಿಯ ಪುಣ್ಯ ಕ್ಷೇತ್ರವಾಗಿದೆ ಇದು. ಕಾಲಾನುಸಾರ ಕ್ಷೇತ್ರದ ಜೀರ್ಣೋದ್ದಾರದ ಕಾರ್ಯಗಳು ಸಂಕಲ್ಪದಂತೆ ಆಗಿ ದೇವಸ್ಥಾನ ಕಂಗೊಲಿಸುತ್ತಿದೆ. ಯಾವುದೇ ಆಡಂಬರ ಇಲ್ಲದೆ ಎಲ್ಲರ ಸೇವೆ ನಿಸ್ವಾರ್ಥವಾಗಿ ನಡೆದಾಗ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮುಂದಿನ ವಾರ್ಷಿಕೋತ್ಸವಕ್ಕೆ ಬಹಳಷ್ಟು ತಯಾರಿ ನಡೆಯಲಿಕ್ಕಿದೆ. ಕ್ಷೇತ್ರದ ಧಾರ್ಮಿಕ, ಸಾಂಸ್ಕ್ರತಿಕ ಮತ್ತು ಎಲ್ಲಾ ಸೇವಾ ಕಾರ್ಯಗಳು ನಿರ್ವಿಘ್ನವಾಗಿ ನಡೆದು ಭಕ್ತರಿಗೆ ನಾಡಿಗೆ ಒಳ್ಳೆಯದಾಗಲಿ ಎಂದು ಶ್ರೀ ಅಯ್ಯಪ್ಪ ಸ್ವಾಮಿಯಲ್ಲಿ ಬೇಡಿಕೊಳ್ಳುತ್ತಾ ಶುಭವನ್ನು ಹಾರೈಸುತ್ತೇನೆ ಎಂದು ವಾರ್ಷಿಕೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಇದರ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷರಾದ ಸದಾನಂದ ಕೆ ಶೆಟ್ಟಿ ನುಡಿದರು .
ಡಿಸೆಂಬರ್ 15 ಸೋಮವಾರದಂದು ಧನು ಸಂಕ್ರಮಣದ ಅಂಗವಾಗಿ ದೇವಸ್ಥಾನದಲ್ಲಿ ಭಜನೆ ನಂತರ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ರವರ ನೇತ್ರತ್ವದಲ್ಲಿ ವಿಶೇಷ ಪೂಜೆ, ಪಡಿ ಪೂಜೆ, ಮಹಾ ಮಂಗಳಾರತಿ ಜರಗಿತು. ಸಂಕ್ರಮಣದ ಪೂಜೆಯ ನಂತರ ನಡೆದ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸದಾನಂದ ಕೆ ಶೆಟ್ಟಿಯವರನ್ನು ಮುಂದೆ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷರನ್ನಾಗಿ ಸಭೆಯಲ್ಲಿ ಅಧ್ಯಕ್ಷ ಸುಭಾಶ್ ಶೆಟ್ಟಿ ಮತ್ತು ಸ್ಥಾಪಕಾಧ್ಯಕ್ಷ ರಘುರಾಮ್ ರೈಯವರು ಅನುಮೋದನೆ ಮಾಡಿ ಸಭೆಯ ಎಲ್ಲರ ತಿರ್ಮಾನದಂತೆ ಅವಿರೋದವಾಗಿ ಆಯ್ಕೆ ಮಾಡಲಾಯಿತು. ವಾರ್ಷಿಕೋತ್ಸವ ಮತ್ತು ಮಹಾ ಪೂಜೆಯ ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ,ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ರಘುರಾಮ್ ರೈ, ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಬಾಲಕೃಷ್ಣ ಗೌಡ, ಜನ ಸಂಪರ್ಕಾಧಿಕಾರಿ ಪ್ರಶಾಂತ್ ಆಳ್ವ, ಸಲಹೆಗಾರಾದ ಶೇಖರ್ ಟಿ ಪೂಜಾರಿ, ಜಗದೀಶ್ ಶೆಟ್ಟಿ, ಗುರು ಸ್ವಾಮಿ ಭಾಸ್ಕರ್ ಕೊಟ್ಟಾರಿ, ಕಾರ್ಯಕಾರಿ ಸಮಿತಿಯ ಕಾರ್ಯಧ್ಯಕ್ಷ ಜಗದೀಪ್ ಶೆಟ್ಟಿ, ಕಾರ್ಯದರ್ಶಿ ಭಗವಾನ್ ದಾಸ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಟಿ ಪೂಜಾರಿ, ಗುರುಸ್ವಾಮಿ ಪ್ರಭಾಕರ ಸ್ವಾಮಿ ಮತ್ತು ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು , ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ,ಮಹಿಳಾ ಗುರು ಭಕ್ತರು ಉಪಸ್ಥಿತರಿದ್ದರು. ಎಲ್ಲರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಘುರಾಮ ರೈಯವರು ಸ್ವಾಗತಿಸಿ, ತಾರಾನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವಸ್ಥ ಮಂಡಳಿ, ಕಾರ್ಯಕಾರಿ ಸಮಿತಿ, ಮಹಿಳಾ ಭಕ್ತ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಹೆಚ್ಚಿನ ಸಂಖ್ಯೆಯ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಅನ್ನಪ್ರಸಾದ ಸ್ವೀಕರಿಸಿದರು.

ಚಿತ್ರ, ವರದಿ : ಹರೀಶ್ ಮೂಡುಬಿದಿರೆ
















































































































