ಮುಂಬೈ: ಮುಂಬೈ ಒಂದು ಬಹುಭಾಷಿಕ ನಗರ. ಇದು ಸ್ವಾತಂತ್ರ್ಯದ ಅನುಭವ ನೀಡುವ ನಗರವೂ ಹೌದು. ಬಲ್ಲಾಳರ ಕತೆ, ಕಾದಂಬರಿಗಳ ಮೂಲಕ ಮುಂಬೈಗೆ ಕಾಲಿಡುವ ಮುನ್ನವೇ ಪ್ರವೇಶಿಸಿದ್ದೇನೆ. ಎಪ್ಪತ್ತರ ದಶಕದಲ್ಲಿ ಹದಿನೆಂಟು ಕನ್ನಡ ಮಾಧ್ಯಮ ರಾತ್ರಿಶಾಲೆಗಳಿದ್ದವು. ಇಲ್ಲಿ ಕಲೆಕ್ಟಿವ್ ಪೇರೆಂಟಿಂಗಿನ ( ಸಾಮೂಹಿಕ ಪಾಲನೆಯ) ಅನುಭವವಾಗುತ್ತದೆ. ಇಲ್ಲಿ ಹುಟ್ಟಿದವರಿಗೆ ಗೊತ್ತಿರದ ಅನುಭವ ಹೊರಗಿನಿಂದ ವಲಸೆ ಬಂದವರಿಗೆ ಗೊತ್ತಿರುತ್ತದೆ. ಮುಂಬೈ ಕನ್ನಡ ಕುಟುಂಬ ಸಾಮಾಜಿಕ ಋಣದ ಕುಟುಂಬ. ಹಿರಿಯರ ಋಣದಲ್ಲಿ ನಾವು ಬೆಳೆದಿದ್ದೇವೆ. ಇಂದು ನಾವು ಅನೇಕ ಬರಹಗಾರರ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ದಿನಕರ ದೇಸಾಯಿ, ವಿ.ಜಿ. ಭಟ್ಟ ಅವರು ಮೊದಲ ಬಂಡಾಯ ಕವಿಗಳು. ಬಲ್ಲಾಳ, ಚಿತ್ತಾಲ, ಕಟ್ಟೀಮನಿ, ನಿರಂಜನ ಮೊದಲಾದವರದು ಸಮಾಜಶೀಲ ಬರೆವಣಿಗೆ. ಮಿತ್ರಾ ವೆಂಕಟ್ರಾಜ್ ಅವರಿಗೆ ಬಲ್ಲಾಳ ಪ್ರಶಸ್ತಿ ಸಂದಿರುವುದು ಮತ್ತು ಅವರ ಉಪಸ್ಥಿತಿ ಇರುವುದು ಸಂತಸದ ಸಂಗತಿ ಎಂದು ಹಿರಿಯ ಕವಿ, ಲೇಖಕ ಜಯಂತ ಕಾಯ್ಕಿಣಿ ನುಡಿದರು.

ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಇದರ ಸಂಯುಕ್ತ ಆಶ್ರಯದಲ್ಲಿ ಡಿ. 3ರಂದು ವಿದ್ಯಾನಗರಿ ಕಲೀನಾ ಕ್ಯಾಂಪಸ್ ನ ಜೆ. ಪಿ. ನಾಯಕ್ ಭವನದಲ್ಲಿ ನಡೆದ ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು ಬದುಕನ್ನು ತಿಳಿದುಕೊಳ್ಳುವುದಕ್ಕೆ ಮಾಡಿಕೊಂಡಿರುವುದೇ ಸಾಹಿತ್ಯ. ಜೀವನಕ್ಕಿರುವ ಪಠ್ಯವೇ ಸಾಹಿತ್ಯ. ಸಾಹಿತ್ಯವು ನಮ್ಮ ಬದುಕಿನ ಪರೀಕ್ಷೆಗಳಿಗೆ ನಮ್ಮನ್ನು ಅಣಿಗೊಳಿಸುತ್ತದೆ. ಹಿಂದೆ ಪ್ರಕಟಗೊಳ್ಳುತ್ತಿದ್ದ ಬರೆಹಗಳಲ್ಲಿ ಗುಣಮಟ್ಟದ ನಿಯಂತ್ರಣವಿರುತಿತ್ತು. ಇಂದಿನ ಬರೆಹಗಾರರು ಇತರರ ಬರೆಹಗಳನ್ನು ಓದದೇ ಬರೆಯುತ್ತಿರುವುದು ಅತ್ಯಂತ ಬೇಸರದ ಸಂಗತಿ. ಈಗ ಪ್ರಕಟಣಕಾರ್ಯ ಸುಲಭವಾಗಿದೆ. ಇದು ಒಂದು ರೀತಿಯಲ್ಲಿ ಶರವೇಗದಲ್ಲಿ ಸಾಹಿತ್ಯದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಅಧಃಪತನ. ಗಂಗಾಧರ ಚಿತ್ತಾಲರು ಕೇವಲ ಎಪ್ಪತ್ತೆರಡು ಕವಿತೆಗಳನ್ನು ಬರೆದು ಕನ್ನಡದ ಅಗ್ರಮಾನ್ಯ ಕವಿಗಳಲ್ಲಿ ಗುರುತಿಸಿಕೊಂಡವರು. ಅವರ ಕವಿತೆಗಳಲ್ಲಿ ಶಬ್ದಸಂಗೀತ, ಭಾವಸಾಂದ್ರತೆ, ಚಿಂತನಶೀಲತೆ, ಅನುಭವದ ಪ್ರಾಮಾಣಿಕತೆ ಇರುತ್ತದೆ. ಅರವಿಂದ ನಾಡಕರ್ಣಿ ಅವರ ಕವಿತೆಗಳಲ್ಲಿ ಯಾಜಮಾನ್ಯ ಸಂಸ್ಕೃತಿಯ ಬಗ್ಗೆ ಬೇಸರ ಇರುವುದನ್ನು ಕಾಣಬಹುದು. ಇಲ್ಲಿನ ಕವಿತೆಗಳಲ್ಲಿ ನಾಟಕೀಯ ಶೈಲಿಯ ಕನ್ನಡದೊಂದಿಗೆ ಹಿಂದಿ ಮರಾಠಿ ಪದಗಳ ಮುಂಬೈ ಟೋನ್ ಇರುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಪ್ರೊ. ಜಿ. ಎನ್. ಉಪಾಧ್ಯ ಅವರು ಮಾತನಾಡುತ್ತಾ, ಕನ್ನಡದ ಶ್ರೇಷ್ಠ ಕತೆಗಾರ ವ್ಯಾಸರಾಯ ಬಲ್ಲಾಳ ಅವರು ಮುಂಬೈ ಕನ್ನಡಿಗರ ಭಾಗ್ಯ. ವ್ಯಾಸರಾಯ ಬಲ್ಲಾಳ ಅವರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿ ಅತ್ಯಂತ ಮಹತ್ವದ್ದು. ಮೈಸೂರು ಮಂಗಳೂರು ಧಾರವಾಡ ವಲಯದ ಬಳಿಕ ಮುಂಬೈಯಲ್ಲೊಂದು ಕನ್ನಡ ವಲಯ ಬೆಳೆದು ಬಂತು. ಇದಕ್ಕೆ ರಾ. ಹ. ದೇಶಪಾಂಡೆ, ಬಲ್ಲಾಳರಂತಹ ಹಿರಿಯರನೇಕರು ಕಾರಣ . ಬಲ್ಲಾಳರು ಕನ್ನಡ ಸಂಘದ ಬೇರೆ ಬೇರೆ ಜವಾಬ್ದಾರಿಯನ್ನು ವಹಿಸಿ ಕನ್ನಡದ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಿದವರು. ಕಾಲಕಾಲಕ್ಕೆ ವಿಭಾಗಕ್ಕೆ ಮಾರ್ಗದರ್ಶನ ನೀಡಿದವರು. ಕನ್ನಡ ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಶ್ರಮಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಕಣ್ಬೆಳಕು. ಅವರು ತಮ್ಮ ಕತೆಗಳಲ್ಲಿ ಕಟ್ಟಿ ಕೊಡುವ ರೂಪಕಗಳು ಅತ್ಯದ್ಭುತ. ಕನ್ನಡದ ಗದ್ಯಸಾಹಿತ್ಯಕ್ಕೆ ಹೊಸ ಆಯಮವನ್ನು ನೀಡಿದ ಕಾಯ್ಕಿಣಿ ಅವರು ಚೈತನ್ಯ ಮೂರ್ತಿ. ಜೀವನದೃಷ್ಟಿಯನ್ನು ತಿದ್ದುವ, ಬದುಕಿನ ವಾಸ್ತವದರ್ಶನವನ್ನು ತಮ್ಮ ಮಾತು ಕೃತಿಗಳಲ್ಲಿ ಮಾಡಿಕೊಟ್ಟವರು ಜಯಂತ ಕಾಯ್ಕಿಣಿ. ವಿಭಾಗದಲ್ಲಿ ಈವರೆಗೆ ನೂರ ಹದಿನೈದು ಕೃತಿಗಳು ಪ್ರಕಟಗೊಂಡಿವೆ. ಕನ್ನಡದ ದೀಕ್ಷೆ ಕೊಡುವ, ದೀಪದಿಂದ ದೀಪ ಹಚ್ಚುವ ಕೆಲಸ ವಿಭಾಗ ಮಾಡುತ್ತಿದೆ ಎಂದರು. ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಭಾಜನರಾದ ಹಿರಿಯ ಕಥನಕಾರರಾದ ಮಿತ್ರಾ ವೆಂಕಟ್ರಾಜ್, ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ ಪುರಸ್ಕೃತ ಶ್ಯಾಮಲಾ ಉಚ್ಚಿಲ್ ಮತ್ತು ವಿಭಾಗದ ವಿಶೇಷ ಸಾಧಕರನ್ನು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. 2024-25ನೆಯ ಸಾಲಿನ ವ್ಯಾಸರಾಯ ಬಲ್ಲಾಳ ಪ್ರಶಸ್ತಿಯನ್ನು ಹಿರಿಯ ಲೇಖಕಿ ಮಿತ್ರಾ ವೆಂಕಟ್ರಾಜ್ ಅವರಿಗೆ ಪ್ರದಾನಿಸಿ ಶಾಲು ಹೊದಿಸಿ ಫಲ ನೀಡಿ ಪ್ರಶಸ್ತಿ ಫಲಕಗಳನ್ನಿತ್ತು ಗೌರವಿಸಲಾಯಿತು. ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಸ್ವೀಕರಿಸಿದ ಮಿತ್ರಾ ವೆಂಕಟ್ರಾಜ್ ಅವರು ಮಾತನಾಡುತ್ತಾ , ತಮ್ಮ ಕಾವ್ಯದಿಂದ, ಕತೆಗಳಿಂದ, ನಡೆ-ನುಡಿಗಳಿಂದ ನಮ್ಮೆಲ್ಲರ ಮನೆ ಮನಗಳನ್ನು ಗೆದ್ದವರು ಜಯಂತ್. ಅವರ ವ್ಯಕ್ತಿತ್ವದ ತಾಜಾತನ ಹಾಗೆಯೇ ಇರಲಿ. ನನ್ನ ಕತೆಗಳಿಗೆ ಕುಂದಾಪುರ ಮತ್ತು ಮುಂಬೈ ನಗರ ಎರಡರ ದೇಣಿಗೆ ಇದೆ. ಬದುಕನ್ನು ನೋಡುವ ನನ್ನ ದೃಷ್ಟಿಯು ನನ್ನ ಕತೆಗಳಲ್ಲಿ ಅನಾವರಣಗೊಂಡಿದೆ. ಕತೆ ಬರೆಯುವುದೆಂದರೆ ತೀರ ವೈಯುಕ್ತಿಕ ಪ್ರಕ್ರಿಯೆ. ಅದಕ್ಕೆ ಧ್ಯಾನಸ್ಥ ಸ್ಥಿತಿ ಬೇಕು. ಕತೆ ಕೊಡುವ ತೃಪ್ತಿ ಅಮೂಲ್ಯವಾದದ್ದು.
ಪ್ರಶಸ್ತಿಗಳು ಓದುಗರ ಸಾಮೂಹಿಕ ಮೆಚ್ಚುಗೆಯ ದ್ಯೋತಕವಾಗಿ ಬರುತ್ತದೆ. ಅದು ನನಗೆ ಸಾರ್ಥಕ ಭಾವನೆಯನ್ನು ನೀಡುತ್ತದೆ. ವ್ಯಾಸರಾಯ ಬಲ್ಲಾಳರು ಸಮರ್ಥ ಸ್ತ್ರೀಪಾತ್ರಗಳನ್ನು ಸೃಷ್ಟಿಸಿದವರು. ಬಲ್ಲಾಳರ ಹೆಸರಿನ ಪ್ರಶಸ್ತಿ ಮನೆಯ ಹಿರಿಯರ ಆಶೀರ್ವಾದದಂತೆ. ಇದನ್ನು ಮನಃಪೂರ್ವಕವಾಗಿ ಶಿರಸಾ ಸ್ವೀಕರಿಸುತ್ತೇನೆ ಎಂದು ನುಡಿದು ಬಲ್ಲಾಳ ಕುಟುಂಬದ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಅಭಿನಂದನ ನುಡಿಗಳನ್ನಾಡಿದರು. ರಂಗಕಲಾವಿದೆ ಅಹಲ್ಯಾ ಬಲ್ಲಾಳ ಅವರು ಗಂಗಾಧರ ಚಿತ್ತಾಲ ಅವರ ಕವಿತೆಯನ್ನು ಮತ್ತು ಸಂಶೋಧನ ವಿದ್ಯಾರ್ಥಿ ಅನಿತಾ ಪೂಜಾರಿ ತಾಕೋಡೆ ಅವರು ಅರವಿಂದ ನಾಡಕರ್ಣಿ ಅವರ ಕವಿತೆಯನ್ನು ವಾಚಿಸಿದರು. ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಕೊಡಮಾಡುವ ವರ್ಷದ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿಯನ್ನು ವಿಭಾಗದ ಎಂ. ಎ. ವಿದ್ಯಾರ್ಥಿ ಶ್ಯಾಮಲಾ ಉಚ್ಚಿಲ್ ಅವರಿಗೆ ಶಾಲು, ಕೃತಿಯೊಂದಿಗೆ ಗೌರವಧನ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ- ಶಿವಮೊಗ್ಗ ಕನ್ನಡ ಸಂಘ ಕೊಡಮಾಡುವ ಎಂ. ಕೆ. ಇಂದಿರಾ ಪ್ರಶಸ್ತಿ ಭಾಜನರಾದ ಪ್ರತಿಭಾ ರಾವ್, ತಮ್ಮ ಮೇಣಕ್ಕಂಟಿದ ಬತ್ತಿ ಕವನಸಂಕಲನಕ್ಕೆ ಬಳ್ಳಾರಿಯ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ ಅನಿತಾ ಪೂಜಾರಿ ತಾಕೋಡೆ ಮತ್ತು ವಿ.ಸೀ. ಸಂಸ್ಮರಣೆಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ ಕಲಾ ಭಾಗ್ವತ್ ಅವರನ್ನು ಗೌರವಿಸಲಾಯಿತು. ವಿಭಾಗದ ಹಿರಿಯ ವಿದ್ಯಾರ್ಥಿ ದುರ್ಗಪ್ಪ ಕೋಟಿಯವರ್ ಅವರು ಡಾ. ಜಿ ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ತಮ್ಮ ಪಿಎಚ್.ಡಿ ಮಹಾಪ್ರಬಂಧದ ಕೃತಿರೂಪವಾದ ಮುಂಬಯಿ ಗದ್ಯ ಸಾಹಿತ್ಯ ಪುಸ್ತಕವನ್ನು ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದರು. ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದ ಪರವಾಗಿ ಕಲಾವಿದೆ ಕುಸುಮಾ ಬಲ್ಲಾಳ ಉಪಸ್ಥಿತರಿದ್ದರು. ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಹಿರಿಯ ಲೇಖಕಿ ಶ್ಯಾಮಲಾ ಮಾಧವ, ಸ್ಮಿತಾ ಕಾಯ್ಕಿಣಿ, ಯು. ವೆಂಕಟ್ರಾಜ್ ರಾವ್, ದೇವದಾಸ್ ಶೆಟ್ಟಿ, ಮೋಹನ್ ಮಾರ್ನಾಡ್, ಅಮಿತಾ ಭಾಗ್ವತ್, ಎಸ್. ಕೆ. ಸುಂದರ್, ನಾರಾಯಣ ರಾವ್ ಮೊದಲಾದ ಗಣ್ಯರು, ವಿಭಾಗದ ವಿದ್ಯಾರ್ಥಿಗಳು, ಮತ್ತಿತರ ಸಾಹಿತ್ಯಾಸಕ್ತರು ಹಾಜರಿದ್ದರು.











































































































