ಒಬ್ಬೊಬ್ಬರ ಮನುಷ್ಯನ ವ್ಯಕ್ತಿತ್ವ ಸರಳತೆ ಕೆಲವರನ್ನು ಸಹಜವಾಗಿಯೇ ಆಕರ್ಷಿಸುತ್ತದೆ. ಅದು ಸ್ವಾಭಾವಿಕ. ಕೆಲವರು ತಮ್ಮ ಮಾತುಗಳಿಂದಾಗಲಿ, ಕೆಲಸಗಳಿಂದಾಗಲಿ ಅಥವಾ ಗೌರವಪೂರ್ಣ ನಡವಳಿಕೆಯಿಂದಾಗಲಿ ಇತರರ ಮನ ಗೆದ್ದುಕೊಳ್ಳುತ್ತಾರೆ. ಅವರ ವ್ಯಕ್ತಿತ್ವವೇ ಅವರಿಗೆ ಎತ್ತರದ ಸ್ಥಾನವನ್ನು ನೀಡುತ್ತದೆ. ಅದೇ ರೀತಿಯ ಒಬ್ಬ ಸ್ನೇಹಿತನಾಗಿದ್ದನು ಪುನೀತ್ ಶೆಟ್ಟಿ. ಹೃದಯಾಘಾತದಿಂದ ಅವನು ಅಕಾಲಿಕವಾಗಿ ನಿಧನರಾದರು ಎಂಬುದು ಮನಸ್ಸಿಗೆ ತುಂಬಾ ನೋವು ತಂದ ಸಂಗತಿ. ಕೇವಲ 37ನೇ ವಯಸ್ಸಿನಲ್ಲೇ ಬದುಕು ಮುಗಿದರೂ, ಅವನ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಪುನೀತ್ ಶೆಟ್ಟಿ ಸೆಲ್ಕೋ ಸೊಲಾರ್ನಲ್ಲಿ ಉದ್ಯೋಗದಲ್ಲಿದ್ದು, ಹೆಬ್ರಿ ಕಾರ್ಕಳ ಪ್ರದೇಶದಲ್ಲಿ ನಿಜಕ್ಕೂ ಕ್ರಾಂತಿ ಮೂಡಿಸಿದ್ದ. ಸೋಲಾರ್ ಕ್ಷೇತ್ರದಲ್ಲಿ ಅವನು ಮಾಡಿದ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದವು. ಗುಡ್ಡದ ಮೇಲಿನ ನಾರಾಯಣಣ್ಣನ ಮನೆಗೆ ಸೋಲಾರ್ ಲೈಟ್ ಅಳವಡಿಸಿ ಮನೆಗೆ ಬೆಳಕು ಕೊಟ್ಟದ್ದು ಅವನೇ. ಕಳೆದ ವರ್ಷ ನಕ್ಸಲ್ ವಿಕ್ರಂ ಗೌಡ ನ ಎನ್ಕೌಂಟರ್ ನಡೆದ ಪೀತಬೈಲಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಿ ಹಲವಾರು ಮನೆಗಳಿಗೆ ಬೆಳಕು ಚೆಲ್ಲಿದ್ದವನು ಕೂಡ ಅವನೇ. ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಅನೇಕ ಸರಕಾರಿ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಸೋಲಾರ್ ದೀಪ ಅಳವಡಿಸುವ ಮೂಲಕ ಅವನು ಸೇವೆ ಸಲ್ಲಿಸಿದ್ದ. ಆ ಪ್ರದೇಶದ ಜನರು “ಸೋಲಾರ್ ಎಂದರೆ ಪುನೀತ್ ಶೆಟ್ಟಿ” ಎಂದು ಹೆಮ್ಮೆಪಡುವರು. ಅದಕ್ಕೆ ಸಹಕಾರ ನೀಡುವವರು ಸೆಲ್ಕೋ ಸೋಲಾರ್ ಗುರುಪ್ರಕಾಶ್ ಶೆಟ್ಟಿಯವರಂತಹ ಬೆನ್ನೆಲುಬಾಗಿ ನಿಂತವರು.

ಆತ ಸಣ್ಣ ಪುಟ್ಟ ಕಾರ್ಯಗಳಲ್ಲಿಯೇ ಸಂತೋಷ ಕಾಣುವ ಸರಳ ಮನಸ್ಸಿನ ವ್ಯಕ್ತಿಯಾಗಿದ್ದ. ಗುಡ್ಡದ ಮೇಲಿನ ಜಯಂತಗೌಡ, ನಾರಾಯಣಣ್ಣ, ಭೋಜಣ್ಣ ಮುಂತಾದ ಎಲ್ಲರಿಗೂ ಆತ ಪರಿಚಿತ. ಕಬ್ಬಿನಾಲೆ ಅಥವಾ ಗುಡ್ಡದ ಮೇಲಿನ ಕುಟುಂಬಗಳಿಗೆ ಆತ ನೀಡಿದ ಸಹಕಾರ ಅನೇಕರ ಮನ ಗೆದ್ದಿತ್ತು. ಮಾತು ಕಡಿಮೆ ಕೆಲಸ ಹೆಚ್ಚು, ಇದೇ ಅವನ ನಿಜಸ್ವಭಾವ. ಗೆಳೆಯರೊಂದಿಗೆ ತಿರುಗಾಡುವ ಹಂಬಲಕ್ಕಿಂತ ಕೆಲಸ ಮತ್ತು ಕುಟುಂಬದ ಮೇಲಿನ ಬದ್ದತೆ ಅವನಿಗಿತ್ತು. ಖಾಲಿ ಸಮಯದಲ್ಲಿ ಕ್ರಿಕೆಟ್, ವರ್ಷಕ್ಕೊಮ್ಮೆ ಶಾರದಾ ಪೂಜಾ ಉತ್ಸವದಲ್ಲಿ ಸಕ್ರಿಯ ಪಾಲ್ಗೊಳ್ಳುವುದು ಇವು ಅವನ ಜೀವನದ ನಿಯಮಿತ ಭಾಗವಾಗಿದ್ದವು. ಅವನ ಒಳ್ಳೆಯ ಗುಣಗಳು ಎಲ್ಲರನ್ನೂ ಹತ್ತಿರ ಕರೆಸಿಕೊಂಡಿದ್ದವು. ಬದುಕು ಕಳೆದು ಹೋದ ನಂತರವೂ, ಅವನ ನೆನಪು, ನಿಷ್ಠೆ ಮತ್ತು ಸೇವಾ ಮನೋಭಾವ ಅನೇಕರ ಮನಗಳಲ್ಲಿ ಅಳಿಸದ ಗುರುತು ಬಿಟ್ಟಿದೆ. ಅವನು ಮಾಡಿದ್ದ ಸೇವಾ ಕಾರ್ಯಗಳು, ಮನುಷ್ಯತ್ವಕ್ಕೆ ನೀಡಿದ ಸಹಕಾರ ಅವುಗಳ ಬಗ್ಗೆ ಆತ ಎಂದಿಗೂ ಹೆಮ್ಮೆ ಪಟ್ಟವನಲ್ಲ. ಬದಲಿಗೆ ಮೌನವಾಗಿ ಸೇವೆ ಮಾಡುತ್ತಿದ್ದ. ಗುಡ್ಡದ ಜನರ ಪ್ರೀತಿ, ವಿಶ್ವಾಸ ಮತ್ತು ಗೌರವವೇ ಅವನ ವ್ಯಕ್ತಿತ್ವದ ನಿಜವಾದ ಗುರುತಾಗಿತ್ತು.
ಅವನು ಸೊಲಾರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಮಾಡುವ ಕೆಲಸದ ಮೇಲೆ ಇರುವ ಬದ್ದತೆ ಮತ್ತು ನಿಷ್ಠೆ ಅವನನ್ನು ವಿಭಿನ್ನನನ್ನಾಗಿಸಿತ್ತು. ಇಂದು ಪುನೀತ್ ನಮ್ಮೊಂದಿಗಿಲ್ಲ. ಆದರೆ ಅವನು ಬಿಟ್ಟು ಹೋದ ಮೌಲ್ಯಗಳು, ಸಮಾಜಮುಖಿ ಕಳಕಳಿ ಮತ್ತು ಆದರ್ಶ ವ್ಯಕ್ತಿತ್ವ ಸದಾ ನಮಗೆ ಪ್ರೇರಣೆಯಾಗಿವೆ. ರಾಜಕಾರಣಿಗಳು, ಸಾಹಿತಿಗಳು, ಪ್ರಭಾವಿಗಳ ನಡುವೆ ಜನರಲ್ಲಿ ಒಳ್ಳೇತನ ಹುಡುಕುವುದು ಇಂದಿನ ಸಮಾಜದಲ್ಲಿ ಅಪರೂಪ. ಆದರೆ ಸಣ್ಣ ಸಣ್ಣ ವ್ಯಕ್ತಿತ್ವದ ಜನರಲ್ಲೂ ಮನುಷ್ಯತ್ವ ಕಾಣುವ ಪರಿ ಅವನದ್ದಾಗಿತ್ತು. ಅಂತಹವರು ತುಂಬಾ ವಿರಳ. ಅದಕ್ಕಾಗಿಯೇ ಆತ ಎಲ್ಲರಿಗೂ ಪ್ರೇರಣೆಯಾಗಿದ್ದ.
ಬದುಕು ಅಷ್ಟೇ.
ಬರಹ : ರಾಂ ಅಜೆಕಾರು ಕಾರ್ಕಳ







































































































