ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಸಮಿತಿಯ ಮೊದಲ ಸಭೆಯಲ್ಲಿಯೇ ಚರ್ಚೆ ಮಾಡಲಾಯಿತು. ಈಗಾಗಲೇ ಉದ್ಯಮಿಗಳಿಂದ 13.75 ಕೋಟಿ ರೂ. ದೇಣಿಗೆಯ ವಾಗ್ದಾನವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ದೇವಳದ ಜೀರ್ಣೋದ್ದಾರ ಮತ್ತು ಅಭಿವೃದ್ಧಿಯ ಕುರಿತು 25 ಮಂದಿ ಪ್ರಮುಖರನ್ನೊಳಗೊಂಡ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ದೇವಳದ ಕಚೇರಿ ಸಭಾಂಗಣದಲ್ಲಿ ಅ. 25ರಂದು ಸಂಜೆ ನಡೆದ ಪ್ರಥಮ ಸಭೆಯ ಕೊನೆಯಲ್ಲಿ ಅವರು ಪ್ರತಿಕಾ ಮಾಧ್ಯಮದವರ ಜೊತೆ ಮಾತನಾಡಿದರು. ಈಗಾಗಲೇ ವಾಗ್ದಾನ ಬಂದಿದೆ. ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರ ನಡೆಯಲಿವೆ. ಇದರಲ್ಲಿ ಸರಕಾರದಿಂದ ರೂ. 11 ಕೋಟಿ ಪ್ರತ್ಯೇಕ ಬರಲಿದೆ. ಮುಂದಿನ ಎರಡು ವರ್ಷದಲ್ಲಿ ದೇವಸ್ಥಾನದ ಪೂರ್ಣ ಜೀರ್ಣೋದ್ದಾರ ಆಗಲಿದೆ ಎಂದವರು ತಿಳಿಸಿದರು. ಮಹಾಲಿಂಗೇಶ್ವರನಿಗೆ ಸೇರಿದ ಜಾಗ ಯಾವುದೆಲ್ಲ ಇದೆಯೋ ಅದೆಲ್ಲವೂ ಮಹಾಲಿಂಗೇಶ್ವರನಿಗೆ ಸೇರಬೇಕೆಂಬುದು ನಮ್ಮ ಆಶಯವಾಗಿತ್ತು. ಸುಮಾರು ಶೇಕಡ 60ರಷ್ಟು ಈ ಕೆಲಸ ಆಗಿದೆ. ಕುಟುಂಬ ಸಮೇತ ಸ್ಥಳದಲ್ಲಿ ವಾಸ್ತವ್ಯ ಇರುವವರಿಗೆ ಸಮಯಾವಕಾಶ ನೀಡಲಾಗಿದೆ. ಮುಂದಿನ ದಿನ ಅವರನ್ನು ತೆರವು ಮಾಡಲಾಗುವುದು. ದೇವಳದ ಮಾಸ್ಟರ್ ಪ್ಲಾನ್ ನಂತೆ ಕೆಲಸ ಕಾರ್ಯ ಆಗಬೇಕು. ಎಲ್ಲಾ ಪಕ್ಷದವರನ್ನು, ಎಲ್ಲಾ ಉದ್ಯಮಿಗಳನ್ನು ಸೇರಿಸಿಕೊಂಡು ಒಂದು ವ್ಯವಸ್ಥಿತವಾಗಿ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ಒಂದು ಸಭೆಯನ್ನು ಮಾಡಿದ್ದೇವೆ. ಸಭೆಯಲ್ಲಿ ನಾವು 10 ಕೋಟಿ ರೂಪಾಯಿ ವಾಗ್ದಾನದ ನಿರೀಕ್ಷೆಯಲ್ಲಿದ್ದೆವು. ಆದರೆ ಊರಿನ ಉದ್ಯಮಿಗಳಿಂದ 13.75 ಕೋಟಿ ರೂಪಾಯಿಗಳ ವಾಗ್ದಾನ ಲಭಿಸಿದೆ. ಇದರಿಂದ ಮಹಾಲಿಂಗೇಶ್ವರ ದೇವರ ಆಶೀರ್ವಾದ ಇದೆ ಎಂಬುದು ತಿಳಿಯಬಹುದು.

ಸರಕಾರದಿಂದ ಸುಮಾರು 11 ಕೋಟಿ ರೂಪಾಯಿ ಮಂಜೂರಾಗಿದೆ. ಅದರಲ್ಲಿ ಕೆರೆಗೆ 3.25 ಕೋಟಿ, ಕೆರೆಯ ಸುತ್ತಮುತ್ತಕ್ಕೆ 2.75 ಕೋಟಿ, ರಸ್ತೆಗೆ 3 ಕೋಟಿ, ತಡೆಗೋಡೆಗೆ ಎರಡು ಕೋಟಿ ಎಲ್ಲಾ ಸೇರಿ ಹನ್ನೊಂದು ಕೋಟಿ ರೂಪಾಯಿ ಆಗಿದೆ 24.57 ಕೋಟಿ ಅನುದಾನಕ್ಕೆ ವಾಗ್ದಾನ ಆಗಿದೆ. ಒಟ್ಟು ರೂಪಾಯಿ 60 ಕೋಟಿ ರೂಪಾಯಿಯಲ್ಲಿ ಜೀರ್ಣೋದ್ಧಾರದ ಆಲೋಚನೆ ಇದೆ. ಇನ್ನೂ 30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು. ನೆಲ್ಲಿಕಟ್ಟೆಯ ಒಂದು ಎಕರೆ ಜಾಗದಲ್ಲಿ ರೂಪಾಯಿ 25 ಕೋಟಿ ರೂಪಾಯಿಯಲ್ಲಿ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಿ ದೇವಸ್ಥಾನಕ್ಕೆ ತಿಂಗಳಿಗೆ ಕನಿಷ್ಠ 25 ಲಕ್ಷ ಬಾಡಿಗೆ ಬರಬೇಕು. ಆ ರೀತಿಯಲ್ಲಿ ಕೆಲಸ ನಡೆಯಲಿದೆ. ಟೂರಿಸಂ ಆಗಿ ಈ ಕ್ಷೇತ್ರ ಬೆಳಗಲಿದೆ. ಹಿಂದೂ ಧರ್ಮದ ಅಭಿವೃದ್ಧಿಗಾಗಿ ಏನು ಕೊಡುಗೆ ಕೊಡಬೇಕೋ ಅದನ್ನು ಅಶೋಕ್ ಕುಮಾರ್ ಕೊಡಿಸುವ ಕೆಲಸ ಮಾಡುತ್ತೇನೆ. ಮುಂದಿನ 15 ದಿನದೊಳಗೆ ಶೀಲಾನ್ಯಾಸ ಕೆಲಸ ಮಾಡಿ ಕಾಮಗಾರಿ ಆರಂಭಿಸಲಾಗುವುದು. ದೇವಳದ ಎದುರಿನ ನಾಗ ಗುಡಿ, ಅಯ್ಯಪ್ಪನ ಗುಡಿ ಸ್ಥಳಾಂತರ ಆಗಲಿದೆ. ಅದಕ್ಕೆ ಪ್ರತ್ಯೇಕವಾಗಿ ಭಕ್ತರ ಸಭೆ ಕರೆಯಲಾಗುವುದು. ಅದರಲ್ಲೂ ಎಲ್ಲಾ ಅಭಿವೃದ್ಧಿ ಆಗಬೇಕಾದರೆ ಎದುರಿನ ಸಭಾಭವನ ಕಟ್ಟಡ ತೆರವು ಮಾಡಬೇಕಾಗಿದೆ. ಹಾಲ್ ತೆರವು ಮಾಡುವಲ್ಲಿ ನಮಗೆ ನೋವಿದೆ. ಆದರೆ ಮಹಾಲಿಂಗೇಶ್ವರನ ಇಚ್ಛೆ ಏನಿದೆ ಅದನ್ನು ಮಾಡುವ ಕೆಲಸ ಮಾಡುತ್ತೇವೆ. ಹೊಸ ಮಾಸ್ಟರ್ ಪ್ಲಾನ್ ನಂತೆ ಕೆಲಸ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಖ್ಯಾತ ಉದ್ಯಮಿಗಳಾದ ‘ಬಂಜಾರ’ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ಬಿಂದು ಸಂಸ್ಥೆಯ ಅಧ್ಯಕ್ಷ ಸತ್ಯ ಶಂಕರ್, ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಆರ್ಥಿಕ ಸಮಿತಿಯ ಹೊರ ರಾಜ್ಯದ ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ರೈ ನಳೀಲು, ಕಾರ್ಯಧ್ಯಕ್ಷರಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ದಿಗ್ದರ್ಶಕರಾಗಿ ಕೇಶವಪ್ರಸಾದ್ ಮುಳಿಯ ಸೇರಿದಂತೆ ಒಂದಷ್ಟು ಸಮಿತಿಗಳನ್ನು ರಚನೆ ಮಾಡಲಾಗಿದೆ. ಇನ್ನು ಉಪ ಸಮಿತಿಗಳನ್ನು ರಚನೆ ಮಾಡಲಿಕ್ಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ ಅವರು ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಅವರ ಅಹ್ವಾನದ ಮೇರೆಗೆ ನಾನು ಜೀರ್ಣೋದಾರ ಸಮಿತಿ ಗೌರವಾಧ್ಯಕ್ಷನಾಗಿ ಒಪ್ಪಿಕೊಂಡಿದ್ದೇನೆ. 32 ಎಕರೆಯ ದೇವಳದ ಜಾಗದಲ್ಲಿ ಉತ್ತಮ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಉದ್ಯಾನವನ ಪುಷ್ಕರಣಿ, ದೇವಸ್ಥಾನಕ್ಕೆ ಬೇಕಾದ ಎಲ್ಲಾ ವಿಚಾರಗಳು ಮಾಸ್ಟರ್ ಪ್ಲಾನ್ ನಲ್ಲಿ ತುಂಬಾ ಚೆನ್ನಾಗಿ ಬಂದಿದೆ. ಮುಂದಿನ ದಿನ ಎಲ್ಲರ ಆಕರ್ಷಣೆಯ ಕೇಂದ್ರವಾಗುವುದರಲ್ಲಿ ಅನುಮಾನವಿಲ್ಲ ಎಂದರು. ಜೀರ್ಣೋದ್ಧಾರ ಸಮಿತಿಯ ಇನ್ನೋರ್ವ ಗೌರವಾಧ್ಯಕ್ಷ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಮೊದಲಿನಿಂದಲೇ ನಾನು ದೇವಸ್ಥಾನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ವ್ಯಕ್ತಿ. ತುಳುನಾಡಿನ ಎಲ್ಲಾ ದೈವ ದೇವಸ್ಥಾನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನಿಂದಾದ ಸಹಕಾರ ಮಾಡಿದವನು. ಈಗ ವಿಶೇಷವಾಗಿ ಪುತ್ತೂರಿನ ವಲಯದಲ್ಲಿ ಅತಿ ಪ್ರಾಚೀನ ಮತ್ತು ಅತ್ಯಂತ ಭಕ್ತಿ ಶ್ರದ್ಧೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರೇ ಜೀರ್ಣೋದ್ಧಾರ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಮಧೂರು ಕ್ಷೇತ್ರದಲ್ಲಿ ಕೆಲ ಸಮಯದ ಹಿಂದೆ ಜೀರ್ಣೋದ್ಧಾರ, ಬ್ರಹ್ಮಕಲಶದ ಭಾಗ್ಯ ಸಿಕ್ಕಿತ್ತು. ಇದೀಗ ಹೊಸದಾಗಿ ಅದೇ ಸಾನಿಧ್ಯ ಇರುವ ಕ್ಷೇತ್ರದಲ್ಲೂ ಸೇವೆ ಮಾಡುವ ಭಾಗ್ಯ ದೊರಕಿದೆ. ಅಶೋಕ್ ಕುಮಾರ್ ರೈ ಅವರ ಡೈನಾಮಿಕ್ ಲೀಡರ್ ಶಿಪ್ ನಲ್ಲಿ ನಾನು, ಪ್ರಕಾಶ್ ಶೆಟ್ಟಿಯವರು ಮತ್ತು ಸಮಿತಿಯ ಎಲ್ಲರೂ ಸೇರಿ ಯೋಜನೆಯನ್ನು ಯಶಸ್ವಿಗೊಳಿಸುವ. ಈಗಾಗಲೇ ಇಲ್ಲೊಂದು ಒಳ್ಳೆಯ ತಂಡವಿದೆ. ಶಿವ ಪರಿವಾರದ ಅನುಗ್ರಹದಿಂದ ಮಾಡಿದ ಕೆಲಸ ಯಶಸ್ವಿಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಮುಂಬೈ ಅಲ್ ಕಾರ್ಗೋದ ಶಶಿಕುಮಾರ್, ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ ನ ಮಾಲಕ ಬಲರಾಮ ಆಚಾರ್ಯ, ಮಾಸ್ಟರ್ ಫ್ಲ್ಯಾನರಿಯ ಎಸ್. ಕೆ. ಆನಂದ್, ಸಂಜೀವ ಶೆಟ್ಟಿ ಅಂಡ್ ಸನ್ಸ್ ಮುರಳಿಧರ ಶೆಟ್ಟಿ, ಮಿತ್ರಂಪಾಡಿ ಜಯರಾಮರೈ ಅಬುಧಾಬಿ, ಪೋಪ್ಯುಲರ್ ಸ್ವೀಟ್ಸ್ ನ ಮಾಲಕ ಮಾನೂರು ನರಸಿಂಹ ಕಾಮತ್, ರಾಧಾಸ್ ಡ್ರೆಸಸ್ ನ ಪ್ರಕಾಶ್ ಕಾಮತ್, ಗಣೇಶ್ ಕಾಮತ್, ದ್ವಾರಕಾ ಸಂಸ್ಥೆಯ ಗೋಪಾಲಕೃಷ್ಣ ಭಟ್, ಎನ್ ಶಿವಪ್ರಸಾದ್ ಶೆಟ್ಟಿ ಕಿನಾರ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಶಿವರಾಮ ಆಳ್ವ, ಪ್ರಸಾದ್ ಕೌಶಲ್ ಶೆಟ್ಟಿ, ಅಮರನಾಥ ಗೌಡ ಬಪ್ಪಳಿಗೆ, ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿವೃತ್ತ ಎಸ್ಪಿ ರಾಮದಾಸ ಗೌಡ, ರವೀಂದ್ರನಾಥ ರೈ ಬಳ್ಳಮಜಲು ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ವಾಗತಿಸಿದರು. ಸದಸ್ಯೆ ಕೃಷ್ಣವೇಣಿ ವಂದಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ವಿ.ಪಿ. ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ ಶೆಟ್ಟಿ, ಪ್ರಧಾನ ಅರ್ಚಕ ವೇ. ಮೂ ವಸಂತ ಕೆದಿಲಾಯ, ಕಾರ್ಯ ನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ನ್ಯಾಯವಾದಿ ಮಹೇಶ್ ಕಜೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.









































































































