ಮುಂಬೈಯ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಲಹೆಗಾರರೆಂದೇ ಪ್ರಸಿದ್ಧಿ ಪಡೆದ ಅಂತರಾಷ್ಟ್ರೀಯ ಖ್ಯಾತಿಯ ಆರ್ಥಿಕ ತಜ್ಞ, ಪ್ರಸಿದ್ಧ ಜೀವವಿಮಾ ಸಲಹೆಗಾರ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್ ಕೆ ಶೆಟ್ಟಿ ಆಂಡ್ ಕಂಪನಿಯ ಆಡಳಿತ ನಿರ್ದೇಶಕ ಡಾ| ಆರ್ ಕೆ ಶೆಟ್ಟಿ ಅವರಿಗೆ ಭಾರತೀಯ ಜೀವವಿಮಾ ನಿಗಮದ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ ಪುರಸ್ಕಾರ ಲಭಿಸಿದೆ. ಭಾರತೀಯ ಜೀವವಿಮಾ ನಿಗಮದ ಕೇಂದ್ರ ಕಚೇರಿ ವತಿಯಿಂದ ಮುಂಬೈ ನರಿಮಾನ್ ಪಾಯಿಂಟ್ ನ ಯೋಗ ಕ್ಷೇಮ ಸಭಾಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅಧ್ಯಕ್ಷ ಆಲಿಸ್ಟೇರ್ ರಿಚರ್ಡ್ಸ್ ಸಹಿ ಹಾಕಿರುವ ಪ್ರಮಾಣ ಪತ್ರವನ್ನು ಎಲ್ಐಸಿ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಮೋಹಂತಿ ಹಸ್ತಾಂತರಿಸಿ ಎಲ್ಐಸಿ ಗಿನ್ನಿಸ್ ಓಲ್ಡ್ ರೆಕಾರ್ಡ್ ಸಾಧನ ಗೌರವ ಪುರಸ್ಕಾರವನ್ನು ಡಾ| ಆರ್ ಕೆ ಶೆಟ್ಟಿ ಅವರಿಗೆ ಪ್ರಧಾನ ಮಾಡಿ ಅಭಿನಂದಿಸಿದರು.

ಗ್ಲೋಬಲ್ ಇಂಡಿಯನ್ ಅವಾರ್ಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಂದ ಗೌರವ, 2024 ರ ಸಾಲಿನ ಬಂಟರತ್ನ ಪ್ರಶಸ್ತಿ, ಇನ್ನಿತರ ಪ್ರತಿಷ್ಠಿತ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ಗಳಿಸಿರುವ ಡಾ| ಆರ್ ಕೆ ಶೆಟ್ಟಿ ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿ ತನ್ನ ಹೆಸರನ್ನು ವಿಶ್ವದಾಖಲೆಯಲ್ಲಿ ದಾಖಲಿಸಿಕೊಂಡಿರುವ ಭಾರತೀಯರಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದಾರೆ. 2025 ರ ಜನವರಿ 20 ರಂದು ಕೇವಲ 24 ಗಂಟೆಗಳ ಒಳಗೆ ದೇಶದಾದ್ಯಂತ ಒಟ್ಟು 5,88,107 ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಅವರ ಸೇವೆ ದಾಖಲಾಗಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿರುವುದು ಸಂಸ್ಥೆಯ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಗೆ ಮತ್ತೊಂದು ಸಾಕ್ಷಿಯಾಗಿದೆ. ಸುಮಾರು ಶತಮಾನದ ಇತಿಹಾಸದಲ್ಲೇ ಎಂಡಿಆರ್ಟಿ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಡಾ| ಆರ್ ಕೆ ಶೆಟ್ಟಿ ಅವರು 2025 ರ ಆಗಸ್ಟ್ ನಲ್ಲಿ ಚೀನಾದ ಮಕಾವುನಲ್ಲಿ ನಡೆದ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಾಗತಿಕ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರರಾಗಿ ಆಯ್ಕೆಯಾಗಿ ವಿಶ್ವದ ಗಮನ ಸೆಳೆದಿದ್ದರು. ಬಂಟರ ಸಂಘದ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಲಹಾ ಸದಸ್ಯ ಸಹಿತ ಹತ್ತಾರು ಸಂಘ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ಅವರು ಪೀಪಲ್ಸ್ ಆರ್ಟ್ ಸೆಂಟರ್ ಮುಂಬೈ ಸಂಸ್ಥೆಯ ಛತ್ರಪತಿ ಶಿವಾಜಿ ಮಹಾರಾಜ್ ಸಾಧನ ಪುರಸ್ಕಾರ ಸಹಿತ ನೂರಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.