ಚಿಣ್ಣರಬಿಂಬ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತಾ ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಿಸ್ವಾರ್ಥ ಮನೋಭಾವನೆ ಇರುವ ಈ ಸಂಸ್ಥೆ ನಮ್ಮ ಊರಿನ ನೆಲದ ಸಾರ ಹಾಗೂ ಜನಪದ ಸಂಸ್ಕೃತಿಯನ್ನು ಮಹಾರಾಷ್ಟ್ರದ ಮಣ್ಣಿನಲ್ಲಿ ನಮ್ಮ ಊರಿನ ಮಕ್ಕಳಿಗೆ ಕಲಿಸಿಕೊಡುವ ಕೆಲಸ ನಿಜವಾಗಿಯೂ ಶ್ಲಾಘನೀಯ. ಈ ಸಂಸ್ಥೆ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ನಾನು ಆಶಿಸುತ್ತೇನೆ. ಈ ಸಂಸ್ಥೆಯಲ್ಲಿರುವ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿಯವರು ನುಡಿದರು. ಅವರು ಸೆಪ್ಟೆಂಬರ್ 14 ರಂದು ಭಾನುವಾರ ಸಮತ ವಿದ್ಯಾ ಮಂದಿರ ಸಾಕಿನಾಕದಲ್ಲಿ ನಡೆದ ಚಿಣ್ಣರಬಿಂಬ 2025- 26 ನೇ ಸಾಲಿನ ಸಾಕಿನಾಕ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ನಾನು ತುಂಬಾ ಸಂಘ ಸಂಸ್ಥೆಗಳಿಗೆ ಭೇಟಿದಾಗ ಸಿಗುವ ಆನಂದಕ್ಕಿಂತ ಮಕ್ಕಳ ಈ ಸಂಸ್ಥೆಯಲ್ಲಿ ಸ್ವಲ್ಪ ಹೊತ್ತು ಕಳೆದದ್ದು ಖುಷಿಯನ್ನು ನೀಡಿದೆ. ಇಲ್ಲಿಯ ಮಕ್ಕಳ ಶಿಸ್ತು, ಸಂಸ್ಕೃತಿ ನನಗೆ ತುಂಬಾ ಸಂತೋಷ ನೀಡಿತು. ಇಲ್ಲಿಯ ಇಂಗ್ಲೀಷ್ ಮಾಧ್ಯಮದ ಮಕ್ಕಳು ಇಷ್ಟು ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕೇಳಿ ತುಂಬಾ ಖುಷಿಯಾಯಿತು. ಈಗ ಸಾವಿರದಲ್ಲಿ ಇರುವ ಈ ಮಕ್ಕಳ ಸಂಖ್ಯೆ ಇನ್ನು ಮುಂದೆ ಲಕ್ಷಗಟ್ಟಲೆ ಆಗಲಿ ಎಂದು ನಾನು ಬಯಸುತ್ತೇನೆ. ಪುಟ್ಟ ಪುಟ್ಟ ಮಕ್ಕಳ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆ ಕಲ್ಪಿಸಿ ಕೊಡುವ ಪ್ರಕಾಶ್ ಭಂಡಾರಿ ಹಾಗೂ ಅವರ ತಂಡ ಅಭಿನಂದನಾರ್ಹರು ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಮಾತನಾಡುತ್ತಾ, ಚಿಣ್ಣರಬಿಂಬದ ಎಲ್ಲಾ ಶಿಬಿರಗಳ ಪದಾಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಶಿಬಿರ ಮಟ್ಟದ ಕಾರ್ಯಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ ಎನ್ನುವುದು ನಿಜವಾಗಿಯೂ ತುಂಬಾ ಸಂತೋಷವನ್ನು ನೀಡುತ್ತಿದೆ. ಚಿಣ್ಣರಬಿಂಬ ಮಕ್ಕಳಿಗೆ ಒಳ್ಳೆಯ ಪ್ರೋತ್ಸಾಹ ಹಾಗೂ ವೇದಿಕೆಯನ್ನು ನೀಡಿದೆ. ಮಕ್ಕಳ ಮುಂದಿನ ಭವಿಷ್ಯಕ್ಕೆ ಇಲ್ಲಿಂದಲೇ ತಳಪಾಯ ಸಿಗುತ್ತಿದೆ. ಎಲ್ಲಾ ಪಾಲಕರು, ಮಕ್ಕಳು, ಶಿಕ್ಷಕರು ಸ್ವಯಂಸೇವಕರ ಕಾರ್ಯಕ್ಕೆ ಶುಭ ಕೋರಿ ಅಭಿನಂದನೆಯನ್ನು ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕರಾದ ಪ್ರಕಾಶ್ ಬೆಟ್ಕರ್ ಇವರು ಮಾತನಾಡುತ್ತಾ, ನಾನು ನಿಮ್ಮ ಈ ಚಿಣ್ಣರ ಬಿಂಬದ ಕಾರ್ಯಕ್ರಮಕ್ಕೆ ಎರಡನೆಯ ಬಾರಿ ಬರುತ್ತಿರುವುದು. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅಣ್ಣ ತಂಗಿಯ ಬಾಂಧವ್ಯವಿದೆ. ನನಗೆ ನಿಮ್ಮ ಭಾಷೆ ಅರ್ಥವಾಗುವುದಿಲ್ಲ. ಆದರೆ ನಿಮ್ಮ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ ತುಂಬಾ ಇಷ್ಟವಾಯಿತು. ನಾನು ಕರ್ನಾಟಕದಲ್ಲಿ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿರುವ ಸಂಸ್ಕಾರ, ಸಂಸ್ಕೃತಿ ತುಂಬಾ ಚೆನ್ನಾಗಿದೆ. ಅದೇ ಸಂಸ್ಕೃತಿಯನ್ನು ನೀವು ಇಲ್ಲಿ ಮಕ್ಕಳಲ್ಲಿ ತೋರಿಸಿ ಕೊಡುತ್ತಿದ್ದೀರಿ ಎಂದರು.
ಮುಖ್ಯ ಅತಿಥಿಗಳಾದ ದಿನೇಶ್ ದೇವಾಡಿಗ ಅವರು ಮಾತನಾಡುತ್ತಾ, ಇಂಗ್ಲೀಷ್ ಮಾಧ್ಯಮದ ಈ ಮಕ್ಕಳು ಕನ್ನಡದಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬಂತು. ನಿಮ್ಮ ಕಲಿಕಾ ಸಾಮರ್ಥ್ಯ ತುಂಬಾ ಚೆನ್ನಾಗಿದೆ. ಈಗಿನ ಮಕ್ಕಳಿಗೆ ಚಿಣ್ಣರಬಿಂಬ ಎಂಬುದೊಂದು ವರದಾನವಾಗಿದೆ. ನಾವು ಚಿಕ್ಕವರಿರುವಾಗ ಈ ಅವಕಾಶಗಳು ಇರಲಿಲ್ಲ. ನಾನು ಕಳೆದ 25 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇನ್ನು ಮುಂದೆ ಇದನ್ನು ಸ್ವಲ್ಪ ಬದಿಗೊತ್ತಿ ನಮ್ಮ ಜನರಿಗೆ ನಮ್ಮ ಮಕ್ಕಳಿಗಾಗಿ ಚಿಣ್ಣರ ಬಿಂಬದಂತಹ ಮಕ್ಕಳ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಇನ್ನು ಮುಂದೆ ಚಿಣ್ಣರಬಿಂಬಕ್ಕೆ ನನ್ನ ಪೂರ್ಣ ಪ್ರಮಾಣದ ಸಹಕಾರ ಇರುತ್ತದೆ ಎಂದು ಆಶ್ವಾಸನೆ ನೀಡಿದರು.
ಚಿಣ್ಣರ ಬಿಂಬದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಪೂರ್ಣಿಮಾ ಶೆಟ್ಟಿಯವರು ನುಡಿಯುತ್ತಾ, ಚಿಣ್ಣರ ಬಿಂಬ ಎಂಬ ಸಂಸ್ಥೆಯಿಂದಾಗಿ ನಮ್ಮ ಮಕ್ಕಳಿಗೆ ವೇದಿಕೆ ಸಿಕ್ಕಿದೆ. ಈ ಮಕ್ಕಳು ಸಭಾ ಕಂಪನವಿಲ್ಲದೆ ವೇದಿಕೆಯಲ್ಲಿ ಅಭಿನಯಿಸುತ್ತಾರೆ, ಮಾತನಾಡುತ್ತಾರೆ, ಹಾಡುತ್ತಾರೆ ಎಂದರೆ ಅದಕ್ಕೆ ಚಿಣ್ಣರಬಿಂಬ ಸಂಸ್ಥೆಯೇ ಮುಖ್ಯ ಕಾರಣ. ಈ ಸ್ಪರ್ಧೆಗಳಿಂದಾಗಿ ನಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಅವರು ವರ್ಷದಿಂದ ವರ್ಷಕ್ಕೆ ಪ್ರತಿಭಾವಂತರಾಗಿ ಬೆಳೆಯುತ್ತಿದ್ದಾರೆ. ಚಿಣ್ಣರಬಿಂಬ ಸಂಸ್ಥೆ ಇಲ್ಲದೆ ಹೋಗಿದ್ದರೆ ಮಕ್ಕಳು ತಮ್ಮ ಈ ಎಲ್ಲಾ ಪ್ರತಿಭೆಗಳಿಂದ ವಂಚಿತರಾಗುತ್ತಿದ್ದರು ಎಂದು ಹೇಳಿದರು. ಎಲ್ಲಾ ಪಾಲಕರು ಪ್ರತಿ ಆದಿತ್ಯವಾರ ಮಕ್ಕಳನ್ನು ಚಿಣ್ಣರಬಿಂಬದ ತರಗತಿಗೆ ಕರೆದುಕೊಂಡು ಬಂದು ಈ ಸಂಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಡಾ| ಪೂರ್ಣಿಮಾ ಶೆಟ್ಟಿ ಅವರು ನುಡಿದರು. ಕೇಂದ್ರ ಸಮಿತಿಯ ಸದಸ್ಯರಾದ ರಮೇಶ್ ರೈ ಅವರು ಮಾತನಾಡುತ್ತಾ, ನಮ್ಮ ಚಿಣ್ಣರಬಿಂಬದಲ್ಲಿ ಜಾತಿ ಮತಗಳ ಬೇಧವಿಲ್ಲ. ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಇಲ್ಲಿದೆ. ಪ್ರತಿಯೊಬ್ಬರೂ ನಿಸ್ವಾರ್ಥ ಭಾವನೆಯಿಂದ ದುಡಿಯುತ್ತಿದ್ದಾರೆ. ನಮ್ಮ ಊರಿನ ಸಂಸ್ಕಾರ ಸಂಸ್ಕೃತಿಗಳನ್ನು ಕಲಿಯಬೇಕೆಂದು ಹುಟ್ಟಿಕೊಂಡ ಸಂಸ್ಥೆ ಇದು. ಇಲ್ಲಿಯ ಮಕ್ಕಳು ಸಭೆಗಳಲ್ಲಿ ನಿರ್ಭಯವಾಗಿ ಮಾತನಾಡುವುದನ್ನು ಕಲಿಯುತ್ತಾರೆ ಎಂದು ಹೇಳಿದರು. ಚಿಣ್ಣರ ಬಿಂಬ ಹಲವಾರು ಸಂಘಟನೆಗಳಿಗೆ ನಾಯಕರುಗಳನ್ನು ಕೊಟ್ಟಿದೆ. ಇಲ್ಲಿ ಕಲಿತ ಮಕ್ಕಳು, ಪಾಲಕರು ಹಲವಾರು ಸಂಘಟನೆಗಳ ಮುಂಚೂಣಿಯನ್ನು ಹಿಡಿದುಕೊಂಡಿದ್ದಾರೆ ಎಂದರು.
ತೀರ್ಪುಗಾರರಾದ ಸೂರಪ್ಪ ಕುಂದರ್ ಅವರು ಮಾತನಾಡುತ್ತಾ, ಮಕ್ಕಳು ತುಂಬಾ ಚೆನ್ನಾಗಿ ಭಾಗವಹಿಸಿದ್ದಾರೆ. ಪಾಲಕರೂ ಕೂಡಾ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಕೂಡಾ ಮಾತನಾಡದಂತಹ ಆ ಕನ್ನಡ ಭಾಷೆಯನ್ನು ಚಿಣ್ಣರಬಿಂಬದವರು ಈ ಶಿಬಿರವನ್ನು ಮಾಡಿ ಮಕ್ಕಳಿಗೆ ಕಲಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ. ಇಂದು ಮಕ್ಕಳು ನೀಡಿದ ಎಲ್ಲಾ ಸ್ಪರ್ಧೆಗಳು ಅವರ ಮುಂದಿನ ಜೀವನಕ್ಕೆ ನಾಂದಿಯಾಗಲಿ ಎಂದು ಹಾರೈಸಿದರು.
ಇನ್ನೋರ್ವ ತೀರ್ಪುಗಾರರಾದ ಹೇಮಾ ಸದಾನಂದ ಅಮೀನ್ ಮಾತನಾಡುತ್ತಾ ಮಕ್ಕಳ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು. ನನಗೆ ತುಂಬಾ ಖುಷಿಯಾಯಿತು. ಮಕ್ಕಳು ಸ್ಪರ್ಧೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ತುಂಬಾ ಸಂತೋಷದಿಂದ ಇದರಲ್ಲಿ ಭಾಗವಹಿಸಿದ್ದರು. ಅದರ ಖುಷಿ ಅವರ ಪಾಲಕರಲ್ಲಿಯೂ ಕಾಣುತ್ತಿತ್ತು. ಇಂದಿನ ಈ ಕಾರ್ಯಕ್ರಮವನ್ನು ಇನ್ನೂ ನೋಡುವ ಕೇಳುವ ಮನಸ್ಸಾಗಿದೆ. ಅಷ್ಟು ಅಚ್ಚುಕಟ್ಟಾಗಿ ಇಂದಿನ ಸ್ಪರ್ಧೆಯಲ್ಲಿ ಮಕ್ಕಳು, ಪಾಲಕರು ಭಾಗವಹಿಸಿದರು ಎಂದರು. ಹಲವಾರು ವರ್ಷಗಳಿಂದ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿರುವ, ಎಸ್ ಎಂ ಶೆಟ್ಟಿ ಶಿಬಿರದ ಶಿಕ್ಷಕಿ ಶ್ರೀಮತಿ ಅನಿತಾ ಎಸ್ ಶೆಟ್ಟಿ ಅವರಿಗೆ ಶಾಲು ಹಾಕಿ, ಪುಷ್ಪಗುಚ್ಛ ನೀಡಿ ವಿಶೇಷವಾಗಿ ಗೌರವಿಸಲಾಯಿತು. ಪ್ರಾದೇಶಿಕ ಮುಖ್ಯಸ್ಥೆ ಅನಿತಾ ಉದಯ ಶೆಟ್ಟಿ, ವಲಯ ಮುಖ್ಯಸ್ಥೆ ಉಷಾ ಶೇರಿಗಾರ್, ಶಿಬಿರ ಮುಖ್ಯಸ್ಥೆ ಶೋಭಾ ಅಮೀನ್, ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ, ಕನ್ನಡ ಶಿಕ್ಷಕಿ ಹರಿಣಿ ಶೆಟ್ಟಿ, ಭಜನೆ ಶಿಕ್ಷಕಿ ಶಶಿ ಶೆಟ್ಟಿ, ಸಹಾಯಕ ಕನ್ನಡ ಶಿಕ್ಷಕಿ ಪ್ರೀತಿ ಶೆಟ್ಟಿ, ಸಹಾಯಕ ಭಜನೆ ಶಿಕ್ಷಕಿ ಸುಮನ ದೇವಾಡಿಗ ಇವರ ನಿರಂತರ ಪರಿಶ್ರಮವನ್ನು ಕೊಂಡಾಡಿ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಉಮಾ ಮಹೇಶ್ವರಿ ಶಿಬಿರದಿಂದ ಆಗಮಿಸಿದ ಶಿಬಿರದ ಪದಾಧಿಕಾರಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಜೊತೆಗೆ ಪರಿಸರದ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಶಿಬಿರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ, ಮಕ್ಕಳಿಗೆ ಸಿಹಿ ತಿಂಡಿ ನೀಡಿ ಸಹಕರಿಸುವ ಸನತ್ ಶೆಟ್ಟಿ ಇವರನ್ನೂ ಕೂಡಾ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ತಾರಾನಾಥ ರೈ, ಸುಕುಮಾರ್ ಶೆಟ್ಟಿ, ನಾಗರಾಜ್ ಶೇರಿಗಾರ್ ಇವರನ್ನು ಸನ್ಮಾನಿಸಲಾಯಿತು. ಗೌರವಾರ್ಪಣೆ ಕಾರ್ಯಕ್ರಮವನ್ನು ಅನುಷಾ ಶೆಟ್ಟಿಯವರು ನಡೆಸಿಕೊಟ್ಟರು. ಶಿಬಿರದ ಮಕ್ಕಳಿಂದ ಕುಣಿತ ಭಜನೆ, ನೃತ್ಯ ಹಾಗೂ ಶಿಬಿರದ ಪಾಲಕರಿಂದ ಸಮೂಹ ಗಾಯನ ನಡೆಯಿತು. ವೇದಿಕೆಯಲ್ಲಿ ಶೋಭಾ ಶೆಟ್ಟಿ, ಡಾ| ಪೂರ್ಣಿಮಾ ಶೆಟ್ಟಿ, ಅನಿತಾ ಶೆಟ್ಟಿ, ಲತಾ ಶೆಟ್ಟಿ ಹರಿಣಿ ಶೆಟ್ಟಿ, ಶಶಿ ಶೆಟ್ಟಿ, ಶೋಭಾ ಅಮಿನ್, ರಾಜಾವರ್ಮ ಜೈನ್, ಪ್ರಕಾಶ್ ಬೆಟ್ಕರ್, ಸವಿತಾ ಶೆಟ್ಟಿ, ಅನಿತಾ ಶೆಟ್ಟಿ, ರಮೇಶ್ ರೈ, ಉಷಾ ಶೇರಿಗಾರ್ ಅವರು ಉಪಸ್ಥಿತರಿದ್ದರು.
ಅತಿಥಿಗಳ ಪರಿಚಯವನ್ನು ಬ್ರುವನ್ ಶೆಟ್ಟಿ, ತನುಶ್ರೀ ಅಮೀನ್, ಶಾವ್ಯ ಕಾಂಚನ್ ಹಾಗೂ ತ್ರಿಷಾ ಶೆಟ್ಟಿ ಅವರು ಮಾಡಿದರು. ದೃಷ್ಟಿ ಶೆಟ್ಟಿ, ಶ್ರೇಯಾ ಹೆಗ್ಡೆ, ಸ್ವಸ್ತಿಕಾ ಶೆಟ್ಟಿ, ದೀಪ್ತಿ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದ ಮಕ್ಕಳಾದ ಬ್ರುವನ್ ಶೆಟ್ಟಿ ಸಾತ್ವಿಕ್ ಶೆಟ್ಟಿ, ಶ್ರಾವ್ಯ ಕಾಂಚನ್, ಶ್ರೇಷ್ಠ ಜೈನ್, ತನುಶ್ರೀ ಅಮೀನ್, ಶರಣ್ಯ ಹೆಗ್ಡೆ ಪ್ರಾರ್ಥನೆಯನ್ನು ಹಾಡಿದರು. 2024- 25 ರ ಸಾಲಿನಲ್ಲಿ ಶೇಕಡ 93.2 ಅಂಕಗಳನ್ನು ಪಡೆದು ತೇರ್ಗಡೆಯಾದ ನಮ್ಮ ಚಿಣ್ಣರಬಿಂಬದ ಹಳೆ ವಿದ್ಯಾರ್ಥಿನಿ ದೀಪ್ತಿ ಶೆಟ್ಟಿ ಇವರನ್ನು ಗೌರವಿಸಲಾಯಿತು. ಈ ವರ್ಷ ವಿಶೇಷವಾಗಿ ಪರಿಸರದ ಮೂರರಿಂದ ಆರು ವರುಷದ ಒಳಗಿನ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಹಾಗೂ ಅದರಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ನೀಡಿ ಭಾಗವಹಿಸಿದ ಪುಟಾಣಿಗಳಿಗೆ ಪ್ರೋತ್ಸಾಹಕರ ಬಹುಮಾನವನ್ನು ಕೊಡಲಾಯಿತು. ಸ್ವಾಗತ ಭಾಷಣವನ್ನು ಶಿಬಿರದ ಮುಖ್ಯಸ್ಥೆ ಶೋಭಾ ಅಮೀನ್ ಅವರು ಮಾಡಿದರು. ಪ್ರಾಸ್ತಾವಿಕ ಭಾಷಣವನ್ನು ಕನ್ನಡ ಶಿಕ್ಷಕಿ ಹರಿಣಿ ಶೆಟ್ಟಿ ಅವರು ಮಾಡಿದರು. ತೀರ್ಪುಗಾರರ ಪರಿಚಯವನ್ನು ವಿದ್ಯಾ ಶೆಟ್ಟಿ ಹಾಗೂ ಸುಮತಿ ಹೆಗ್ಡೆ ಅವರು ಮಾಡಿದರು. ಶಿಬಿರದ ಮಕ್ಕಳು ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಮಾಡಿ ಎಲ್ಲರನ್ನೂ ಮನರಂಜಿಸಿದರು. ಫಲಿತಾಂಶ ಪ್ರಕಟಣೆ ಕಾರ್ಯಕ್ರಮವನ್ನು ಚಿಣ್ಣರಬಿಂಬದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಇವರು ನಡೆಸಿಕೊಟ್ಟರು. ಸಾಕಿನಾಕ ಶಿಬಿರದ ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ರಾಷ್ಟ್ರಗೀತೆಯನ್ನು ಹಾಡಲಾಯಿತು. ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.