ಆಳ್ವಾಸ್ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ 3.55 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ 17 ಲಾಭಾಂಶ (ಡಿವಿಡೆಂಟ್) ಘೋಷಿಸಿದೆ. ಆಳ್ವಾಸ್ ಕೃಷಿಸಿರಿ ಆವರಣದಲ್ಲಿನ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ 2024-25 ನೇ ಸಾಲಿನ 9ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಲಾಯಿತು. ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 170 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಈ ವರ್ಷ 19 ಲಕ್ಷದಷ್ಟು ಹೆಚ್ಚಿನ ಲಾಭ ಗಳಿಸಿದೆ. ಶೇ 99.62 ಸಾಲ ವಸೂಲಾತಿ ಮಾಡಿದೆ. 2016ರ ಜುಲೈ 10 ರಂದು ಸಂಘ ಆರಂಭಗೊಂಡಿದ್ದು, ಪ್ರಸ್ತುತ 5543 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ನಮ್ಮ ಆಳ್ವಾಸ್ ಸಹಕಾರಿ ಸಂಘ ಮುಂದಿನ ವರ್ಷ ತನ್ನ ದಶಮಾನೋತ್ಸವದ ಹಿರಿಮೆಯ ಮೈಲಿಗಲ್ಲನ್ನು ತಲುಪಲಿದೆ. ಕಳೆದ ಒಂಬತ್ತು ವರ್ಷಗಳಿಂದ ಸಂಘವು ಸಮಾಜಮುಖಿ ಕಾರ್ಯ ಹಾಗೂ ಪಾರದರ್ಶಕತೆಯಿಂದ ಸದಸ್ಯರ ವಿಶ್ವಾಸವನ್ನು ಗಳಿಸಿದೆ. ಸಹಕಾರಿ ಚಳವಳಿಯನ್ನು ಬಲಪಡಿಸುವಲ್ಲಿ, ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಮತ್ತು ಸದಸ್ಯರ ಆರ್ಥಿಕ ಶಕ್ತೀಕರಣದಲ್ಲಿ ಸಂಘವು ಪ್ರಮುಖ ಪಾತ್ರವಹಿಸಿದೆ. ದಶಮಾನೋತ್ಸವದ ಸಂಭ್ರಮವನ್ನು ಹೊಸ ಯೋಜನೆಗಳು ಮತ್ತು ಸದಸ್ಯರ ಹೆಚ್ಚಿನ ಪಾಲ್ಗೊಳ್ಳಿಕೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಆಳ್ವಾಸ್ ಸಹಕಾರಿ ಸಂಘವು ತನ್ನ ಸದಸ್ಯರಿಗೆ ಇನ್ನಷ್ಟು ಸುಲಭವಾದ, ತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ಒದಗಿಸಲು ಹೊಸ ಮೊಬೈಲ್ ಆ್ಯಪ್ನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದರು. ಆಳ್ವಾಸ್ನ ಪ್ರತಿ ಕಾರ್ಯದಲ್ಲೂ ಸಮಾಜಮುಖಿ ಚಿಂತನೆ ಒಳಗೊಂಡಿದೆ. ಸದ್ಯ ಈ ಸಹಕಾರಿ ಸಂಘದ ಶಾಖೆಯನ್ನು ಬೇರೆಲ್ಲೂ ತೆಗೆಯುವ ಯೋಚನೆ ಹೊಂದಿಲ್ಲ. ಸರಕಾರ ನಿಗದಿಪಡಿಸಿರುವ ನಿಯಮವನ್ನು ಪಾಲನೆ ಮಾಡಿ, ವ್ಯವಹಾರವನ್ನು ವೃದ್ಧಿಸುವ ಗುರಿಯನ್ನು ಹೊಂದಿದ್ದೆವೆ. ಮುಂದಿನ ವರ್ಷಕ್ಕೆ 100 ಕೋಟಿ ಠೇವಣಿ ಸಂಗ್ರಹಿಸಿ, ಬ್ಯಾಂಕಿನ ವ್ಯವಹಾರವನ್ನು 195 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದರು.ಸಂಘದ ವ್ಯವಹಾರದಲ್ಲಿ ಯಾವುದೇ ನ್ಯೂನತೆಗಳಿಲ್ಲದೆ ಈ ವರ್ಷವೂ ಸೇರಿ ಸತತ 8 ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿಯ ಸಂಘ ಎಂಬ ಗೌರವಕ್ಕೆ ಪಾತ್ರವಾಗಿದ್ದೇವೆ. 2024-25ನೇ ಸಾಲಿನ ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಟಾಪರ್ಗಳಾದ ಆಳ್ವಾಸ್ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ, ಪ್ರಸ್ತುತ ಪ.ಪೂ ಕಾಲೇಜಿನಲ್ಲಿ ಓದುತ್ತಿರುವ ಪಾವನಾ ಶರಣಾ ಬಸಪ್ಪ ಮೇಗೂರ್, ಹರೀಶ ಬಡಿಗೇರ್, ರಿಯಾ ವಿಧ್ಯಾದರ್ ಕಾಮ್ಟೆ, ವಿನಯ, ಮಾನ್ಯ, ಐತ್ಯಾ, ಚಿನ್ಮಯ್ ಹಾಗೂ ದ್ವಿತೀಯ ಪದವಿಪೂರ್ವ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವೈಷ್ಣವಿ ಪ್ರಸಾದ ಭಟ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ನಗದಿನೊಂದಿಗೆ ಅಭಿನಂದಿಸಲಾಯಿತು.
ಸಹಕಾರ ಶಿಕ್ಷಣ ನಿಧಿಯ 3,19,821 ಲಕ್ಷದ ಚೆಕ್ ಅನ್ನು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಗೆ ಮೂಡುಬಿದಿರೆಯ ಸಹಕಾರಿ ತರಬೇತಿ ಸಂಸ್ಥೆಯ ಉಪನ್ಯಾಸಕಿ ಬಿಂದು ಬಿ ನಾಯರ್ ಮೂಲಕ ಹಸ್ತಾಂತರಿಸಲಾಯಿತು. ಸಂಘದ ಉಪಾಧ್ಯಕ್ಷ ಎ ಮೋಹನ್ ಪಡಿವಾಳ್, ನಿರ್ದೇಶಕರುಗಳಾದ ಶ್ರೀಪತಿ ಭಟ್, ಜಯಶ್ರೀ ಅಮರನಾಥ್ ಶೆಟ್ಟಿ, ನಾರಾಯಣ ಪಿಎಂ, ವಿವೇಕ್ ಆಳ್ವ, ರಾಮಚಂದ್ರ ಮಿಜಾರು, ಪ್ರಕಾಶಿನಿ ಹೆಗ್ಡೆ, ಅಶ್ವಿನ್ ಜೊಸ್ಸಿ ಪಿರೇರಾ, ಮೀನಾಕ್ಷಿ ಇದ್ದರು. ನಿರ್ದೇಶಕ ಜಯರಾಮ್ ಕೋಟ್ಯಾನ್ ಸ್ವಾಗತಿಸಿ, ಆಳ್ವಾಸ್ ಪ.ಪೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕೆ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.