ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಕೀರ್ತಿನಗರ ಲಯನ್ಸ್ ಪಾರ್ಕ್ನ ಹರಿಭವ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನೆರವೇರಿತು. ಕ್ಲಬ್ ಅಧ್ಯಕ್ಷ ಲ. ಶಿವಪ್ರಸಾದ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಶಂಕರ ಭಟ್, ಕೋಟೆಬಾಗಿಲು ಸ. ಉ. ಹಿ.ಪ್ರಾ ಶಾಲೆಯ ಮೇಬಲ್ ಫೆರ್ನಾಂಡಿಸ್ ಹಾಗೂ ಮಿಜಾರು ಕೆ.ಪಿ.ಎಸ್. ಶಾಲೆಯ ನಾಗೇಶ್ ಎಸ್. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸದಸ್ಯ ವಿನೋದ್ ಕುಮಾರ್ ಅವರು ಶಿಕ್ಷಕ ವೃತ್ತಿ ಎಂಬುದು ಎಲ್ಲಾ ವೃತ್ತಿಗಳ ತಾಯಿಯಾಗಿದ್ದು ಅದಕ್ಕೆ ದೇವರಿಗೆ ಸಮಾನವಾದ ಸ್ಥಾನವನ್ನು ನೀಡಿದ ಉದಾತ್ತವಾದ ಸಂಸ್ಕೃತಿ ಬೆಳೆಸಿಕೊಂಡು ಬಂದ ಪರಂಪರೆ ನಮ್ಮದು. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಶಿಕ್ಷಣವೆಂಬುದು ಶಾಲೆಗೆ ಮಾತ್ರ ಸೀಮಿತವಾಗಿರದೆ ಗೂಗಲ್ ನಿಂದಲೂ ಬಹಳಷ್ಟು ಮಾಹಿತಿಯನ್ನು ಶಿಕ್ಷಣದ ರೂಪದಲ್ಲಿ ಪಡೆಯಬಹುದಾದ ಈ ಕಾಲಘಟ್ಟದಲ್ಲಿ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದುದರಿಂದ ಗೂಗಲ್ ನಲ್ಲಿ ಸಿಗದ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸಂಸ್ಕಾರವನ್ನು ಕಲಿಸುವ ಮೂಲಕ ಶಿಕ್ಷಕರು ಈ ಎಲ್ಲಾ ಸವಾಲುಗಳನ್ನು ಗೆಲ್ಲಬೇಕಾಗಿದೆ ಎಂದರು.

ಲಯನ್ಸ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಹಿರಿಯ ಸದಸ್ಯ ಕೆ. ಶ್ರೀಪತಿ ಭಟ್, ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಕೋಶಾಧಿಕಾರಿ ಹರೀಶ್ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ಕ್ಲಬ್ ಪ್ರಥಮ ಮಹಿಳೆ ಶೋಭಾ ಎಸ್. ಹೆಗ್ಡೆ ಸನ್ಮಾನಿತರನ್ನು ಗೌರವಿಸಿದರು. ಸನ್ಮಾನಿತರು ತಮ್ಮ ಅನುಭವವನ್ನು ಹಂಚಿಕೊಂಡರು. ಸದಸ್ಯರಾದ ಆಲ್ವಿನ್ ಮಿನೇಜಸ್, ವಿನಯ ಕುಮಾರ್ ಶೆಟ್ಟಿ ಮತ್ತು ಮಾರ್ಕ್ ಮೆಂಡೋನ್ಸಾ ಸನ್ಮಾನ ಪತ್ರ ವಾಚಿಸಿದರು. ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ವೈಷ್ಣವಿ ಪ್ರಾರ್ಥಿಸಿದರು. ಅರುಣ್ ಡಿಸಿಲ್ವ ಧ್ವಜವಂದನೆ ನಡೆಸಿದರು. ರಿಚರ್ಡ್ ಕರ್ಡೋಜಾ ಲಯನ್ಸ್ ಧ್ಯೇಯವಾಕ್ಯ ಪಠಿಸಿದರು. ದಯಾನಂದ ನಿರೂಪಿಸಿ, ಓಸ್ವಾಲ್ಡ್ ಡಿಕೋಸ್ತ ವಂದಿಸಿದರು.