ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಜನರ ಜೀವನಶೈಲಿಯನ್ನು ಸುಧಾರಿಸಲು ಹಾಗೂ ಅವಳಿ ಜಿಲ್ಲೆಗಳ ಕೈಗಾರಿಕಾ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸಮಿತಿಯ ಈ ಬೆಳ್ಳಿಹಬ್ಬದ ವರ್ಷದಲ್ಲಿ, ಮುಂಬಯಿಯ ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಿತಿಯ ಜಿಲ್ಲಾ ಸಮಿತಿಯ ( ದಕ್ಷಿಣ ಕನ್ನಡ/ ಉಡುಪಿ) ಪದಾಧಿಕಾರಿಗಳು ನಿರಂತರ ಕಾರ್ಯ ಚಟುವಟಿಕಿಯೊಂದಿಗೆ ಹಲವಾರು ಜನಪರ ಕಾರ್ಯಗಳತ್ತ ಗಮನ ಹರಿಸಿ ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಹಂತದಲ್ಲಿ ಸಮಿತಿಯ ಈಗಿನ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಎಂ ಶೆಟ್ಟಿ ಇವರು ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ ಎರಡು ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯನ್ನು ಪ್ರಾರಂಭಿಸಲು ಮನವಿ ಮಾಡಿದರು. ಈ ಮನವಿಯಲ್ಲಿ ಒಂದು ಮಾರ್ಗವು ಸ್ಟೇಟ್ಬ್ಯಾಂಕ್ ಮಂಗಳೂರು – ಮಂಗಳೂರು ವಿಮಾನ ನಿಲ್ದಾಣ- ಸ್ಟೇಟ್ ಬ್ಯಾಂಕ್ ಮಂಗಳೂರು ಆಗಿರುತ್ತದೆ. ಎರಡನೇ ಮಾರ್ಗವು ಮಣಿಪಾಲ (ಉಡುಪಿ ಮೂಲಕ) – ಮಂಗಳೂರು ವಿಮಾನ ನಿಲ್ದಾಣ- ಮಣಿಪಾಲ (ಉಡುಪಿ ಮೂಲಕ) ಆಗಿರುತ್ತದೆ.

ಈಗ ಮಂಗಳೂರು ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸಾವಿರಾರು ಪ್ರಯಾಣಿಕರು ಭಾರತದ ವಿವಿಧ ರಾಜ್ಯಗಳಿಗೆ ಮತ್ತು ಅಂತರರಾಷ್ಟ್ರೀಯ ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. ಭಾರತದ ಬಹುತೇಕ ಎಲ್ಲಾ ವಿಮಾನ ನಿಲ್ದಾಣಗಳು ತಮ್ಮ ನಗರದ ಮಿತಿಗಳಿಗೆ ಸರ್ಕಾರಿ ಬಸ್ ಸಂಪರ್ಕವನ್ನು ಹೊಂದಿವೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆ ಇಲ್ಲ. ಮಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯ ನಿರ್ವಹಿಸುವ ಪ್ರೈವೇಟ್ ಟ್ಯಾಕ್ಸಿಗಳು ಅತಿ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ. ವಿಮಾನ ನಿಲ್ದಾಣಕ್ಕೆ ಬೇರೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಇರುವುದಿಲ್ಲ. ಇಲ್ಲಿನ ಟ್ಯಾಕ್ಸಿ ಯೂನಿಯನ್ ಓಲಾ, ಉಬೆರ್ ಟ್ಯಾಕ್ಸಿಗಳನ್ನು ಹಾಗೂ ಆಟೋರಿಕ್ಷಾಗಳನ್ನು ವಿಮಾನ ನಿಲ್ದಾಣಕ್ಕೆ ಒಳಗೆ ಬರಲು ಬಿಡುವುದಿಲ್ಲ. ಇದು ಕಾನೂನು ಬಾಹಿರ ಆದರೂ ಅವರು ಬಿಡುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ಹೆಚ್ಚಿನ ಶುಲ್ಕವನ್ನು ಅನಿವಾರ್ಯವಾಗಿ ಭರಿಸಬೇಕಾಗುತ್ತದೆ ಎಂದು ಅವರಿಗೆ ಮನದಟ್ಟು ಮಾಡಲಾಯಿತು.
ವಿಭಾಗೀಯ ನಿಯಂತ್ರಣ ಅಧಿಕಾರಿಯವರು ಸಮಿತಿಗೆ ಭರವಸೆ ನೀಡಿ, ಮುಂದಿನ 2-3 ತಿಂಗಳೊಳಗೆ ಮಂಗಳೂರು ವಿಭಾಗಕ್ಕೆ ಹೊಸ ಬಸ್ಸುಗಳ ಸೇರ್ಪಡೆಯಾಗಲಿದೆ. ಅದರ ಬಳಿಕ ಮೇಲಿನ ಎರಡು ಮಾರ್ಗಗಳ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪರಿಗಣಿಸುವುದಾಗಿ ಹೇಳಿದರು. ಅದರಂತೆ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಗೆ ತಮ್ಮ ಅಧಿಕೃತ ರೆಕಮಂಡೇಷನ್ ಅನ್ನು ಕಳುಹಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಆದರೆ ಇದಕ್ಕೆ ವ್ಯಾಪಕ ಪ್ರಚಾರ ಸಿಗಬೇಕು ಮತ್ತು ಬಸ್ ಮಾರ್ಗಗಳನ್ನು ನಿರ್ವಹಿಸಲು ಕನಿಷ್ಠ ಪ್ರಯಾಣಿಕರ ನಿಯಮಿತ ಪ್ರಯಾಣ ಅಗತ್ಯ ಎಂದು ಅವರು ಒತ್ತಿ ಹೇಳಿದರು. ಸಮಿತಿಯು ಮಂಗಳೂರು, ಉಡುಪಿ, ಬೆಂಗಳೂರು ಹಾಗೂ ಮುಂಬೈನಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳ ಮೂಲಕ, ಪತ್ರಿಕೆಗಳ ಮೂಲಕ ಇದಕ್ಕೆ ವ್ಯಾಪಕ ಪ್ರಚಾರ ಕೊಟ್ಟು, ಎಲ್ಲಾ ವಿಮಾನ ಪ್ರಯಾಣಿಕರುಗಳಿಗೂ ಇದರ ಬಗ್ಗೆ ಮಾಹಿತಿ ನೀಡಿ, ಈ ಸೇವೆಯ ಪ್ರಯೋಜನ ಪಡೆದುಕೊಳ್ಳಲು ಸಲಹೆ ನೀಡಿದರು. ಆದ್ದರಿಂದ ಸಮಿತಿಯು ಎಲ್ಲಾ ಮುಂಬಯಿ, ಬೆಂಗಳೂರು ಹಾಗೂ ಇತರ ಕಡೆಯ ವಿಮಾನ ಪ್ರಯಾಣಿಕರಿಗೆ, ಈ ಬಸ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮತ್ತು ಈ ಎರಡು ಮಾರ್ಗಗಳನ್ನು ಲಾಭದಾಯಕವಾಗಿ ನಿರ್ವಹಿಸಲು ಕೆಎಸ್ಆರ್ಟಿಸಿಯನ್ನು ಬೆಂಬಲಿಸುವಂತೆ ವಿನಂತಿಸುತ್ತದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ, ತೋನ್ಸೆ ಜಯಕೃಷ್ಣ ಎ ಶೆಟ್ಟಿ ಸಂಸ್ಥಾಪಕ, ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷ, ಹರೀಶ್ ಕುಮಾರ್ ಎಂ ಶೆಟ್ಟಿ ಜಿಲ್ಲಾಧ್ಯಕ್ಷ, ಸುರೇಂದ್ರ ಸಾಲಿಯನ್ ಪ್ರಧಾನ ಕಾರ್ಯದರ್ಶಿ, ಕೆ ಪಿ ಜಗದೀಶ್ ಅಧಿಕಾರಿ ರಾಜ್ಯ ಸಂಯೋಜಕ, ಜಿ ಟಿ ಆಚಾರ್ಯ ಮತ್ತು ಸುರೇಂದ್ರ ಮೆಂಡನ್ ಜಿಲ್ಲಾ ಕಾರ್ಯದರ್ಶಿಗಳು, ಅರುಣ್ ಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ ಮಾಣಿಗುತ್ತು, ಸುಂದರ ಆಚಾರ್ಯ ಬೆಳುವಾಯಿ ಜಿಲ್ಲಾ ಉಪಾಧ್ಯಕ್ಷರುಗಳು ಈ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸುತ್ತಿದ್ದಾರೆ.