ಪ್ರತಿಯೊಂದು ಹೊಸ ಕಾರ್ಯಕಾರಿ ಸಮಿತಿ ರಚನೆಯಾದಾಗ ಅನುಸರಿಸಿಕೊಂಡು ಬರುವಂತೆ ಈ ಸಾರಿಯೂ ಭಾವಚಿತ್ರದೊಂದಿನ ನಿರ್ದೇಶಿಕ ಪುಸ್ತಕವನ್ನು ಮುದ್ರಿಸಿ, ಪ್ರತಿಯೊಬ್ಬ ಸಮಿತಿ ಸದಸ್ಯರಿಗೆ, ಪೋಷಕರಿಗೆ ಮತ್ತು ಹಿತ್ಯೇಷಿಗಳಿಗೆ ಹಂಚುವ ಕಾರ್ಯಕ್ರಮ ನಡೆಯಿತು. ಭಾವಚಿತ್ರದೊಂದಿಗೆ ಮುದ್ರಿತವಾದ ನಿರ್ದೇಶಿಕ ಪುಸ್ತಕವನ್ನು ಶ್ರೀಧರ ಶೆಟ್ಟಿ (ಕಾರ್ಯದಕ್ಷರು, ಶೈಕ್ಷಣಿಕ ಸಮಿತಿ ಹಾಗೂ ನಿರ್ದೇಶಿಕ ಪುಸ್ತಕದ ಉಸ್ತುವಾರಿ) ಅವರ ದಿವ್ಯ ಹಸ್ತದಿಂದ, ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ಪದಾಧಿಕಾರಿಗಳು, ವಿಶ್ವಸ್ಥ ಮಂಡಳಿ ಮತ್ತು ಸಮಿತಿ ಸದಸ್ಯರ ಸಮಕ್ಷಮದಲ್ಲಿ ಆಗಸ್ಟ್ 23 ರಂದು ನಿತ್ಯಾನಂದ ಸಭಾಗೃಹ ಸಯನ್ ಇಲ್ಲಿ ಬಿಡುಗಡೆಗೊಳಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಶ್ರೀಧರ ಶೆಟ್ಟಿಯವರಿಗೆ ಹೂಗುಚ್ಚವನ್ನು ಕೊಟ್ಟು ಗೌರವಿಸಿ ಮಾತನಾಡಿ, ಅವರು ಮಾಡಿದ ಘನತರದ ಕೆಲಸ ಅಂದರೆ ಎಲ್ಲಾ ಸದಸ್ಯರ ಮಾಹಿತಿಯನ್ನು ಸಂಗ್ರಹಿಸಿ, ನಿಪುಣತೆಯಿಂದ, ಅಚ್ಚುಕಟ್ಟಾಗಿ ಸೂಕ್ಷ್ಮತೆಯಿಂದ ಮುದ್ರಿಸಿದ ವಿಚಾರವಾಗಿ ಶ್ಲಾಘನೆ ಮಾಡಿದರು. ಈ ಪುಸ್ತಕದಲ್ಲಿ ವಿಘ್ನ ನಿವಾರಕ ಶ್ರೀ ಗಣಪತಿಯ ಚಿತ್ರದೊಂದಿಗೆ ಪ್ರಾರಂಭವಾಗಿ, ಮುನ್ನುಡಿ, ವಿಶ್ವ ಬಂಟಗೀತೆ, ಬಂಟರ ಉಪನಾಮಗಳ ಹೆಸರು ಹಾಗೂ ಪ್ರತಿಯೊಬ್ಬ ಸಮಿತಿ ಸದಸ್ಯನ ಜನನ ತಾರೀಖನ್ನು ಅನುಕ್ರಮವಾಗಿ ಮುದ್ರಿಸಲಾಗಿದೆ. ಅಲ್ಲದೆ, ಅದರಲ್ಲಿ ಎಲ್ಲಾ ಮಾಹಿತಿಗಳನ್ನು ಅಂದರೆ, ಭಾವಚಿತ್ರ, ಹೆಸರು, ವಿಳಾಸ, ಇ ಮೇಲ್ ಮುಂತಾದ ವಿಚಾರಗಳನ್ನು ಅಧ್ಯಕ್ಷರಿಂದ ಹಿಡಿದು ಅನುಕ್ರಮವಾಗಿ ಅವರವರ ಪಾತ್ರಕ್ಕನುಗುಣವಾಗಿ ಮುದ್ರಿಸಿದ್ದಾರೆ. ಮಾತ್ರವಲ್ಲದೇ ಬಣ್ಣ ಬಣ್ಣದ ಜಾಹಿರಾತುಗಳನ್ನು ಕೂಡಾ ಮುದ್ರಿಸಿದ್ದಾರೆ.