ವಲಸೆ ಮನುಷ್ಯ ಜೀವನದ ಗತಿ ಮತ್ತು ಚೆಹರೆಯನ್ನು ಬದಲಾಯಿಸುವ ಒಂದು ಮಹತ್ವದ ಸಂಗತಿ. ವಿಶ್ವದೆಲ್ಲೆಡೆ ವಿವಿಧ ಕಾರಣಗಳಿಗೆ ವಿವಿಧ ಪ್ರದೇಶ, ರಾಜ್ಯ, ದೇಶಗಳನ್ನೂ ದಾಟಿ ಜನ ಜನಾಂಗದ ಸಮುದಾಯದ ವಲಸೆ ನಡೆದಿವೆ, ನಡೆಯುತ್ತಲೇ ಇವೆ. ಕಳೆದೊಂದು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲಾವಧಿಯಿಂದ ನಡೆದ ತುಳುನಾಡ ಕರಾವಳಿಗರ ಆಧುನಿಕ ಮುಂಬಯಿ ವಲಸೆ ಕೂಡ ಈ ಹಿನ್ನೆಲೆಯಲ್ಲಿ ಬಹು ಮುಖ್ಯವಾದುದು. ವಿಶಿಷ್ಟ ಜನಪದ ಮತ್ತು ಜನಾಂಗೀಯ ಹಿನ್ನಲೆ ಮತ್ತು ಸಂಸ್ಕ್ರತಿಯುಳ್ಳ ದಕ್ಷಿಣೋತ್ತರ ಹಾಗೂ ಕಾಸರಗೋಡು ಜಿಲ್ಲೆಗಳ ತುಳುವರು ಸಾವಿರದ ಎಂಟುನೂರರ ಉತ್ತರಾರ್ಧದಲ್ಲಿ ಮುಂಬಯಿಯತ್ತ ಕಣ್ಣು ನೆಟ್ಟು ಕಾಲು ಬೆಳೆಸಿದ್ದು ಬಹು ಮಹತ್ವದ ವಿದ್ಯಮಾನವೆನ್ನಬಹುದು. ಹೀಗೆ ವಲಸೆ ಬರಲಾರಂಭಿಸಿದ ಕನ್ನಡ ಕರಾವಳಿಯ ತುಳುವ ಜನಸಂಖ್ಯೆ ಯ ಪೈಕಿ ಅತಿ ಮುಖ್ಯವಾದ ಸಮುದಾಯ ಬಂಟರದ್ದು. ಹತ್ತು ಹಲವು ಉಪನಾಮಗಳನ್ನು ಹೊಂದಿದ್ದರೂ ಮಹಾನಗರಿ ಮುಂಬಯಿಯ ಉದ್ದಗಲಕ್ಕೆ ಶೆಟ್ಟಿ ಎಂದೇ ಪರಿಚಿತವಾದ ಈ ‘ಸ್ವಾಭಿಮಾನಧನ’ ಸಮುದಾಯ ತನ್ನ ಉದ್ಯಮಶೀಲತೆ, ನಾಯಕತ್ವ ಗುಣಗಳಿಂದ ಮರಾಠಿ ಮಣ್ಣಿನ ಉದ್ದಗಲಕ್ಕೆ ಗಟ್ಟಿಯಾಗಿ ನೆಲೆನಿಂತ ಪರಿ ನಿಜಕ್ಕೂ ಅಚ್ಚರಿಯಾದುದು, ಚೇತೋಹಾರಿಯಾದುದು. ಮಹಾರಾಷ್ಟ್ರದ ವಿಶೇಷವಾಗಿ ಮುಂಬಯಿ ನೆಲದಲ್ಲಿ ಈ ಬಂಟ ಶೆಟ್ಟಿ ಸಮುದಾಯದ ವ್ಯವಹಾರ ನಿಪುಣತೆ, ಸಾಧನೆ ಎಷ್ಟೆಂದರೆ ತುಳುನಾಡಿನಿಂದಲೇ ಬಂದ ಬೇರೆ ಸಮುದಾಯಗಳೂ ಇತರ ಭಾಷಿಕರ ಮಧ್ಯೆ ಕೆಲವೊಮ್ಮೆ ತಮ್ಮನ್ನು ‘ಶೆಟ್ಟೀಸ್’ ಎಂದು ಗುರುತಿಸಿಕೊಳ್ಳುವಷ್ಟು!

ಬಾಂಬೇ ಬಂಟ್ಸ್ ಅಸೋಸಿಯೇಷನ್ ಎಂಬ ನೆರಳು : ಇದೊಂದು ಪರಿಶ್ರಮ ಹಾಗೂ ಸಾಧನಾ ಮುಖವಾದರೆ, ಬಂಟರ ಇನ್ನೊಂದು ಮಹತ್ವದ ಸಾಧನಾ ವಿಭಾಗ ಸಂಘಟನೆ. ಸರಿ ಸುಮಾರು ನೂರು ವರ್ಷಗಳ ಹಿಂದೆ ಮಹಾನಗರಿ ಮುಂಬಯಿ ಬಂಟರು ಸಮಾಜವಾಗಿ ಒಗ್ಗಟ್ಟಾದರು. ಈ ಯಶೋಗಾಥೆಗೆ ಸುಮಾರು ಐದು ದಶಕ ದಾಟುವ ಹೊತ್ತಲ್ಲೇ ಸಯನ್ ಭಾಗವನ್ನು ಕೇಂದ್ರವಾಗಿರಿಸಿಕೊಂಡು 1982 ರಲ್ಲಿ ಬಂಟರ ಎರಡನೇ ಮಹತ್ವದ ಸಂಘಟನೆ ಬಾಂಬೇ ಬಂಟ್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿತು. ತನ್ನ ಹುಟ್ಟಿನ ಆರಂಭದಿಂದಲೇ ಜನಮುಖಿಯಾಗಿ ಸ್ವಸಮಾಜದ ಆರ್ಥಿಕ ದುರ್ಬಲರ, ಸಹಾಯ ಅಪೇಕ್ಷಿತರ ಆಧಾರವಾಗಿ ಸಾಗುತ್ತಾ, ಸಾಮಾಜಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಜೊತೆಗೆ ಸಾಂಸ್ಕ್ರತಿಕ ವಾಗಿಯೂ ಸಮುದಾಯದ ಹಿತಾಸಕ್ತಿಯನ್ನು, ಮೇಲ್ಮೆಯನ್ನು ಕಾಯುತ್ತ ಬಂದ ಹೆಗ್ಗಳಿಕೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ನದ್ದು.ವಾರ್ಷಿಕ ಶಿಕ್ಷಣ ನಿಧಿ ನೆರವು ಯೋಜನೆ : ನಾಲ್ಕೂವರೆ ದಶಕಗಳ ತನ್ನ ಅಸ್ತಿತ್ವದ ಆರಂಭದ ವರ್ಷ ಗಳಿಂದಲೂ ಬಾಂಬೇ ಬಂಟ್ಸ್ ಅಸೋಸಿಯೇಷನ್ ಸಮುದಾಯದ ‘ಒಳಮುಖಿಯಾಗಿ’ ನೋಟ ಹರಿಸಿತು. ಅಂತರ್ನೋಟ ಸದಾ ತನ್ನ ಛಾಯೆಯೊಳಗೆ ಹುದುಗಿರುವ ಸಂಗತಿಗಳ ಒಳನೋಟವನ್ನು ಯಾವುದೇ ಸಂಘಟನೆಗೆ ನೀಡುತ್ತದೆ. ಆ ಮೂಲಕ ಬಹಿರ್ಮುಖದಲ್ಲಿ ಆಗಬೇಕಿರುವ ಕೆಲಸಗಳ ಅಗತ್ಯತೆಯ ಯಾದಿ ನೀಡುತ್ತದೆ. ಅಸೋಸಿಯೇಷನ್ ನ ಹಿರಿಯರು ಕಾಲ ಕಾಲಕ್ಕೆ ದೊರೆತ ನಾಯಕರ ಮೂಲಕ ಸಮುದಾಯದ ಆರ್ಥಿಕ ಹಿಂದುಳಿದ ಕುಟುಂಬಗಳ ಸ್ಥಿತಿ ಗತಿಗಳನ್ನು ತಿಳಿದುಕೊಳ್ಳುತ್ತಾ ಸಾಗಿತು. ಈ ಹಿನ್ನೆಲೆ ರೂಪುಗೊಂಡು ಜಾರಿಗೆ ಬಂದುದೇ ವಾರ್ಷಿಕ ಶಿಕ್ಷಣ ಸಹಾಯ ಧನ ಅಥವಾ ಶೈಕ್ಷಣಿಕ ನೆರವು ಯೋಜನೆ. ಸಂಸ್ಥೆಯೊಂದು ಸಂಘಟನಾ ನೆಲೆಯಲ್ಲಿ, ಭೌತಿಕ ಕಟ್ಟಡಗಳ ಮೂಲಕ ಕಾರ್ಯಕ್ರಮಗಳ ಮೂಲಕ ಅದೆಷ್ಟೆ ಬೆಳೆದರೂ ಅದರ ಅಸ್ತಿತ್ವದ ಒಟ್ಟು ಮೌಲ್ಯ ನಿರ್ಣಯಗೊಳ್ಳುವುದು ಸಮುದಾಯದೊಳಗೆ ಅಗತ್ಯವಿರುವರಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಹಾಯದ ಕೈಯಾಗಿ ಒದಗಿ ಬಂದಾಗ. ಸಕಾಲಿಕವಾಗಿ ಆರೋಗ್ಯದ ನೆರವಲ್ಲದೆ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿದ ಔದಾರ್ಯ ಬಾಂಬೆ ಬಂಟ್ಸ್ ಅಸೋಸಿಯೇಷನ್ ನದು. ನಿರಂತರ ನಾಲ್ಕು ದಶಕಗಳಿಂದಲೂ ಆಯ್ದ ಅಗತ್ಯವಿರುವ ಮತ್ತು ತರಗತಿಗಳಲ್ಲಿ ವಿಶೇಷ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಶಿಕ್ಷಣ ನೆರವು ನಿಧಿಯನ್ನು ವಿತರಿಸುವುದು ಜೊತೆಗೆ ಅಗತ್ಯ ಇರುವ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಪೂರ್ತಿ ವಾರ್ಷಿಕ ಖರ್ಚು ವೆಚ್ಚಗಳನ್ನು ಭರಿಸುವ ಕೆಲಸವನ್ನೂ ಮಾಡಲಾಗುತ್ತದೆ.
ಅಸೋಸಿಯೇಷನ್ ಇದಕ್ಕಾಗಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಶಿಕ್ಷಣ ಸಮಿತಿಯ ಛೇರ್ಮನ್ ಅವರ ಮುಂದಾಳತ್ವದಲ್ಲಿ ಸಮಾಜದ ಆರ್ಥಿಕ ಸಂಪನ್ನ ಕೊಡುಗೈ ದಾನಿಗಳ ಸಹಕಾರವನ್ನು ಪಡೆದುಕೊಂಡು ಈ ಉಪಯುಕ್ತ ಮಹಾ ಕಾರ್ಯವನ್ನು ನಡೆಸಿಕೊಡುತ್ತಾ ಬಂದಿದೆ. ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ಈ ಶಿಕ್ಷಣ ಸಹಾಯ ನಿಧಿ ವಿತರಣೆಗೆ ಉದಾರವಾಗಿ ನೆರವಾಗುವ ಸಮಾಜ ಬಾಂಧವರ ಒಂದು ಬಳಗವೇ ಇದ್ದು ಒಂದು ಆಕರ್ಷಕ ಸಮಾರಂಭವನ್ನು ಏರ್ಪಡಿಸಿ, ದಿನವಿಡೀ ನಡೆಯುವ ಒಂದು ಸಾಂಸ್ಕೃತಿಕ ಸಮಾರಂಭವನ್ನೂ ಜೊತೆಗಿರಿಸಿಕೊಂಡು ಈ ಕಾರ್ಯಕ್ರಮವನ್ನು ಸಾದರಪಡಿಸುವ ಸಂಪ್ರದಾಯ ದಶಕಗಳಿಂದ ನಡೆದು ಬಂದಿದೆ.
ಅಡ್ವೊಕೇಟ್ ಡಿ.ಕೆ ಶೆಟ್ಟಿ, ಶ್ರೀಧರ ಕೆ ಶೆಟ್ಟಿ ನೇತೃತ್ವ : ಈ ಬಾರಿಯ ವಾರ್ಷಿಕ ಶಿಕ್ಷಣ ನೆರವು ವಿತರಣಾ ಕಾರ್ಯಕ್ರಮ ಅಸೋಸಿಯೇಷನ್ ಅಧ್ಯಕ್ಷ ಅಡ್ವೊಕೇಟ್ ಡಿ.ಕೆ ಶೆಟ್ಟಿಯವರ ನೇತೃತ್ವದಲ್ಲಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ್ ಕೆ ಶೆಟ್ಟಿಯವರ ಸಮರ್ಥ ಮುಂದಾಳ್ತನದಲ್ಲಿ, ಸಮಿತಿಯ ಸರ್ವ ಪದಾಧಿಕಾರಿಗಳ ಭಾಗೀದಾರಿಕೆಯಲ್ಲಿ ನಡೆಯುತ್ತಿದೆ. ಆಗಸ್ಟ್ 17 ನೇ ರವಿವಾರ ನವಿ ಮುಂಬಯಿ ಜೂಯಿನಗರದ ಬಂಟ್ಸ್ ಸೆಂಟರ್ ಸಭಾಭವನದಲ್ಲಿ ಪೂರ್ವಾಹ್ನ 10 ಕ್ಕೆ ನಡೆಯುವ ವಾರ್ಷಿಕ ಶಿಕ್ಷಣ ನೆರವು ಸಮಾರಂಭದ ಅಧ್ಯಕ್ಷತೆಯನ್ನು ಅಡ್ವೊಕೇಟ್ ಡಿ.ಕೆ ಶೆಟ್ಟಿಯವರು ವಹಿಸಲಿದ್ದು, ನಗರದ ಪ್ರಖ್ಯಾತ ಲೆಕ್ಕ ಪರಿಶೋಧಕ, ದಾನಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಅಂಧೇರಿಯ ಪ್ರಸಿದ್ಧ ರೀಜೆನ್ಸಿ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ, ದಾನಿ ಜಯರಾಮ್ ಎನ್ ಶೆಟ್ಟಿಯವರು ಪ್ರಧಾನ ಅತಿಥಿಯಾಗಿರುವ ಈ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ವಿ.ಕೆ ಗ್ರೂಪ್ ಆಫ್ ಕಂಪೆನೀಸ್ ನ ಸಿಎಂಡಿ, ದಾನಿ ಕರುಣಾಕರ ಎಂ ಶೆಟ್ಟಿ, ಗೌರವ ಅತಿಥಿಗಳಾಗಿ ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ, ಕೊಡುಗೈ ದಾನಿ ಕೃಷ್ಣ ವೈ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ. ಶೆಟ್ಟಿ ಆಗಮಿಸಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಶಿವ ಪಂಚಾಕ್ಷರಿ ಮಹಾತ್ಮೆ ಯಕ್ಷಗಾನ ಬಯಲಾಟ : ಇದೇ ವೇಳೆ ದಿನದ ವಿಶೇಷ ಆಕರ್ಷಣೆಯಾಗಿ, ಶಿಕ್ಷಣ ನೆರವು ವಿತರಣಾ ಸಮಾರಂಭದ ಬಳಿಕ ಅಪರಾಹ್ನ ಮೂರು ಗಂಟೆಗೆ ಸರಿಯಾಗಿ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಮತ್ತು ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಶಿವ ಪಂಚಾಕ್ಷರಿ ಮಹಿಮೆ (ಶ್ವೇತ ಕುಮಾರ ಚರಿತ್ರೆ) ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಆಗಸ್ಟ್ 17 ರ ಬೆಳಗಿನಿಂದ ಇಳಿ ಸಂಜೆಯವರೆಗೆ ನಡೆಯುವ ಶಿಕ್ಷಣ ನೆರವು ನಿಧಿ ವಿತರಣೆ ಮತ್ತು ಸಾಂಸ್ಕ್ರತಿಕ (ಯಕ್ಷಗಾನ) ಕಾರ್ಯಕ್ರಮ ಹೀಗೆ ಅವಳಿ ಕಾರ್ಯಕ್ರಮಗಳಿಗೆ ಅಸೋಸಿಯೇಷನ್ ಸದಸ್ಯರು, ವಿದ್ಯಾರ್ಥಿಗಳು, ಹೆತ್ತವರು, ಸಮಾಜ ಬಾಂಧವರು ಹಾಗೂ ಬಹು ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಸೋಸಿಯೇಷನ್ ಅಧ್ಯಕ್ಷ ಅಡ್ವೊಕೇಟ್ ಡಿ.ಕೆ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಶೇಖರ್ ಆರ್ ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಎ ಶೆಟ್ಟಿ, ಜೊತೆ ಕಾರ್ಯದರ್ಶಿ ಜೈರಾಜ್ ರೈ ಕೆ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಕೆ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಪಿ ಶೆಟ್ಟಿ, ಅಸೋಸಿಯೇಷನ್ ಸರ್ವ ಪದಾಧಿಕಾರಿಗಳು, ವಿವಿಧ ವಿಭಾಗಗಳ ಕಾರ್ಯಾಧ್ಯಕ್ಷರು ಮತ್ತು ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.