ಅಖಿಲ ಅಮೇರಿಕಾ ತುಳು ಅಸೋಸಿಯೇಷನ್ (ಆಟಾ) ವತಿಯಿಂದ ಆಯೋಜಿಸಲಾದ ಸಿರಿಪರ್ಬ -2025 ಕಾರ್ಯಕ್ರಮವು ಜುಲೈ 4,5,6 ರಂದು ಉತ್ತರ ಕೆರೊಲಿನಾ ರಾಜ್ಯದ ರಾಲೆ ನಗರದ ಟ್ರಯಾಂಗಲ್ ತುಳುವೆರೆ ಚಾವಡಿ ಸಹಯೋಗದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಐತಿಹಾಸಿಕ ಸಮ್ಮೇಳನದಲ್ಲಿ ಆಟಾದ ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಸಿರಿಪರ್ಬ ಸಂಚಾಲಕಿ ರಂಜನಿ ಅಸೈಗೋಳಿ, ‘ಆಟಾ’ದ ಪದಾಧಿಕಾರಿಗಳು, ರಾಲೆ ಟ್ರಯಾಂಗಲ್ ತುಳುವೆರೆ ಚಾವಡಿಯ ಪದಾಧಿಕಾರಿಗಳು ಮತ್ತು ವಿವಿಧ ರಾಷ್ಟ್ರಗಳಿಂದ ಆಗಮಿಸಿದ ತುಳು ಸಂಘಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಅಮೇರಿಕಾ – ಕೆನಡಾದ ತುಳುವರ ಸಂಘಟನೆಯ ಪ್ರಯತ್ನ ಈ ಸಿರಿಪರ್ಬವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಗುರುತಿಸುವಂತೆ ಮಾಡಿತು. ಅತಿಥಿಗಳ ಸ್ವಾಗತ ಮತ್ತು ಮೆರವಣಿಗೆ ಕಾರ್ಯಕ್ರಮದ ಮೊದಲ ದಿನ, ಮುಖ್ಯ ಅತಿಥಿಗಳಾಗಿ ತುಳುನಾಡಿನಿಂದ ಆಗಮಿಸಿದ ಡಾ. ಸಾಯಿಗೀತಾ ಹೆಗ್ಡೆ, ಕತಾರ್ನಿಂದ ಆಗಮಿಸಿದ ಡಾ. ರವಿ ಶೆಟ್ಟಿ ಮೂಡಂಬೈಲು, ಕನೆಕ್ಟಿಕಟ್ ನಿಂದ ಆಗಮಿಸಿದ ಶ್ರೀ ಶೇಖರ ನಾಯ್ಕ್, ನ್ಯೂಯಾರ್ಕಿನಿಂದ ಆಗಮಿಸಿದ ಡಾ. ಬೆಳ್ಳೆ ದಿನಕರ ರೈ ಹಾಗೂ ಬಾಸ್ಟನ್ ನಿಂದ ಆಗಮಿಸಿದ ಶ್ರೀ ಸ್ಯಾಮ್ಯುಯೆಲ್ ಡ್ರಾಗ್ಮೋರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಜುಲೈ 5 ರಂದು ಬೆಳಿಗ್ಗೆ 9-30 ಕ್ಕೆ ಅಮೇರಿಕದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ್ದ ತುಳುವ ಬಾಂಧವರು ಭಾರೀ ಉತ್ಸಾಹದಿಂದ ವೈಭವದ ಮೆರವಣಿಗೆಯಲ್ಲಿ ಪಾಲ್ಗೊಂಡು, ಯಕ್ಷಗಾನ, ಹುಲಿವೇಷ, ಭಜನೆ, ಚೆಂಡೆ ತಾಸೆಗಳ ವಾದನ, ಅಮೆರಿಕಾ, ಭಾರತ ಹಾಗೂ ತುಳುವ ಧ್ವಜಗಳೊಂದಿಗೆ ಅತಿಥಿಗಳನ್ನು ಸಡಗರದಿಂದ ಸಭಾಂಗಣಕ್ಕೆ ಕರೆತಂದು, ಬೆಲ್ಲ ನೀರು ನೀಡುವ ಮೂಲಕ ಸತ್ಕರಿಸಿದರು. ಸಾನ್ವಿ ಅಸೈಗೋಳಿಯವರಿಂದ ಗಣೇಶ ಸ್ತುತಿ ಹಾಗು ನಿಯತಿ ಯು ಶೆಟ್ಟಿಯವರ ಯಕ್ಷಗಾನ ನೃತ್ಯ ಪ್ರಸ್ತುತಿಯಿಂದ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮವು ತಬಲಾ, ಫ್ಯಾಷನ್ ಶೋ, ಹಾಡು, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕಿರು ನಾಟಕ, ಶಾಸ್ತ್ರೀಯ ಸಂಗೀತ, ತುಳು ಭಾವಗೀತೆಗಳ ಪ್ರಸ್ತುತಿಯ ಮೂಲಕ ವೈವಿಧ್ಯತೆಯಿಂದ ತುಂಬಿತ್ತು. ಡಾ. ರಾಜೇಂದ್ರ ಕೆದಿಲಾಯರ ನೇತೃತ್ವದ ಯಕ್ಷಗಾನ ಪ್ರದರ್ಶನ, ಅನುಸೂಯ ಪೂಂಜಾ ನಿರ್ದೇಶನದ ತುಳುವ ಐಸಿರಿ ರೂಪಕ ಹಾಗೂ, ಡಾ. ರೋಶನ್ ಪಾಯಸ್ ಅವರ ಧನ್ಯವಾದ ಸಮರ್ಪಣೆ ಮನಸ್ಸು ಮುಟ್ಟಿದವು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸಾಯಿಗೀತಾ ಹೆಗ್ಡೆ, ಡಾ| ರವಿ ಶೆಟ್ಟಿ (ಕತಾರ್), ಶೇಖರ್ ನಾಯ್ಕ್ ಅವರನ್ನು ಗೌರವಿಸಲಾಯಿತು. ಡಾ ರಾಜೇಂದ್ರ ಕೆದಿಲಾಯ, ಡಾ. ಬೆಳ್ಳೆ ದಿನಕರ್ ರೈ, ಶೇಖರ್ ನಾಯ್ಕ್ ಹಾಗೂ ಸ್ಯಾಮ್ಯುಯೆಲ್ ಡ್ರಾಗ್ಮೋರ್ ರವರನ್ನು ಆಟಾ ಸಮ್ಮಾನದ ಮೂಲಕ ಗೌರವಿಸಲಾಯಿತು. ತುಳು ಸಾಹಿತ್ಯ ವಿಭಾಗದಲ್ಲಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ “ತುಳು ಕಾವ್ಯ ಮೀಮಾಂಸೆ” ಕೃತಿಗೆ ಮತ್ತು ತುಳು ಲಿಪಿ ಬರವಣಿಗೆ ವಿಭಾಗದಲ್ಲಿ ಸತೀಶ್ ಅಗ್ಪಾಲ್ ರವರಿಂದ ಸಂಪಾದಿತವಾದ “ಜೋಕುಲೆ ಉಜ್ಜಾಲ್” ಕವನ ಸಂಕಲನಕ್ಕಾಗಿ ಬೆಂಗಳೂರಿನ “ತುಳುವೆರೆ ಚಾವಡಿ”ಗೆ ಶ್ರೀ ಭಾಸ್ಕರ್ ಶೇರಿಗಾರ್ ಅವರಿಂದ ಪ್ರಾಯೋಜಿತವಾದ ಸಿರಿಮುಡಿ ಪ್ರಶಸ್ತಿ- 2025 ಘೋಷಿಸಲಾಯಿತು. ಪ್ರಹ್ಲಾದ್ ರಾವ್ ಅವರಿಗೆ ಯಂಗ್ ಲಿಟರರಿ ಅವಾರ್ಡ್, ಆಟಾ ಬಿ ಇಂಟರ್ನ್ಯಾಶನಲ್ ಅವಾರ್ಡ್ ನ್ನು ಹೈಸ್ಕೂಲ್, ಮಿಡ್ಲ್ ಸ್ಕೂಲ್, ಪ್ರೈಮರಿ ಸ್ಕೂಲ್ ಮಟ್ಟದಲ್ಲಿ ವಿಜೇತರಿಗೆ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿ ಡಾ. ಸಾಯಿಗೀತಾ ಹೆಗ್ಡೆ ಮಾತನಾಡಿ, ನಿನ್ನೆ ಇವತ್ತು ನಾಳೆಗಳಲ್ಲಿ ತುಳು ಭಾಷೆಯ ಬೆಳವಣಿಗೆ ಹಾಗೂ ತುಳುನಾಡಿನ ಪರಂಪರೆಯ ಕುರಿತು ವಿವರಿಸಿ, ತುಳು ನಿಘಂಟು ಆರಂಭವಾದ ದಿನವನ್ನು ತುಳು ದಿನವೆಂದು ಅಕ್ಟೋಬರ್ 2 ನೇ ತಾರೀಕಿನಂದು 1980ರ ದಶಕದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯ ಸ್ಥಾನವನ್ನು ಕೊಟ್ಟು ಎಂಟನೆಯ ಪರಿಚ್ಛೇದಕ್ಕೆ ಸೇರಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿ ಡಾ| ರವಿ ಶೆಟ್ಟಿ ಕತಾರ್ ಮಾತನಾಡಿ, ತುಳುನಾಡಿನ ಶ್ರೇಷ್ಠತೆಯನ್ನು ವಿವರಿಸುತ್ತಾ ಸಂಘದ ಉದ್ದೇಶ, ಕಾರ್ಯವಿಧಾನ, ವಿಭಿನ್ನತೆಯಿಂದ ನಡೆದ ಆಟಾದ ಸಿರಿಪರ್ಬವನ್ನು ಬಣ್ಣಿಸಿ, ನಾವು ನಮ್ಮ ಜನ್ಮ ಭೂಮಿಗೆ ಋಣಿಯಾಗಿರಬೇಕೆಂದು ಕರೆಕೊಟ್ಟರು. ಇನ್ನೋರ್ವ ಅತಿಥಿ ಶ್ರೀ ಶೇಖರ್ ನಾಯ್ಕ್ ಮನೆಮನೆಯಲ್ಲಿ ತುಳು ಮಾತನಾಡಿ ಎಂದು ಕರೆ ಕೊಟ್ಟರು. ತನ್ನ ತಂದೆಯವರು ತುಳು ಭಾಷೆ ದೇವರ ಭಾಷೆಯೆಂದು ಹೇಳುತಿದ್ಡುದನ್ನ ನೆನಪಿಸಿಕೊಂಡರು. ಡಾ ಬೆಳ್ಳೆ ದಿನಕರ್ ರೈ ಮಾತನಾಡಿ, ತುಳು ಬಹು ಸಂಪಧ್ಭರಿತ ಭಾಷೆ. ಮುಂದಿನ ಪೀಳಿಗೆಯವರು ಇದನ್ನು ಉಳಿಸಬೇಕಾಗಿ ವಿನಂತಿಸಿದರು. ಇನ್ನೋರ್ವ ಅತಿಥಿಗಳಾಗಿ ಬರಬೇಕಿದ್ದ ಘನ ಕರ್ನಾಟಕ ಸರಕಾರದ ಸಭಾಪತಿಯವರಾದ ಸನ್ಮಾನ್ಯ ಯು ಟಿ ಖಾದರ್ ಅವರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ಓದಿ ಹೇಳಲಾಯಿತು. ಸಿರಿ ಪರ್ಬ -2025 ರ ಸಂಚಾಲಕಿ ರಂಜನಿ ಅಸೈಗೋಳಿ ಸಿರಿಪರ್ಬದ ಯಶಸ್ಸಿಗಾಗಿ ದುಡಿದ ಎಲ್ಲರಿಗೂ ಮನಸಾರೆ ವಂದಿಸಿ, ಸಿರಿ ಪರ್ಬದ ಜವಾಬ್ದಾರಿ ಬಗ್ಗೆ ವಿವರಿಸಿ, ನಾವು ಒಂದೇ ಕುಟುಂಬದ ಸದಸ್ಯರಂತೆ ಒಟ್ಟಾಗಿದ್ದೇವೆ ಎಂದು ನುಡಿದರು. ಸಭಾ ಕಾರ್ಯಕ್ರಮದಲ್ಲಿ ಸಿರಿ ನುಡಿ ಎಂಬ ಸ್ಮರಣ ಸಂಚಿಕೆಯನ್ನು ಹಾಗೂ ಪೂವರಿ ತುಳು ಪತ್ರಿಕೆಯ ಹೊಸ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶ್ರೀವಲ್ಲಿ ರೈ ಮಾರ್ಟೆಲ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ತುಳುವನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯಾಗಿ ಘೋಷಿಸುವ ಕನಸು ಮತ್ತು ಸಂವಿಧಾನದ 8ನೇ ಪರಿಚ್ಚೇದದಲ್ಲಿ ಸೇರಿಸುವ ಗುರಿಯನ್ನು ಬಿಂಬಿಸಿದರು. ಇದು ಕೇವಲ ಒಂದು ಕಾರ್ಯಕ್ರಮವಲ್ಲ. ಇದು ನಮ್ಮ ಭವಿಷ್ಯದ ಪೀಳಿಗೆಗೆ ತುಳು ಪರಂಪರೆಯನ್ನು ಪಸರಿಸುವ ಸಂಸ್ಕೃತಿಯ ಸಂಚಯ ಎಂದು ನುಡಿದರು.
ರತ್ನಾಕರ್ ಶೇರಿಗಾರ್, ಪ್ರೀತಿ ಯು ಶೆಟ್ಟಿ, ಆರ್ಯಶ್ರೀ ಮಾರ್ಟೆಲ್, ಸುಹಾನ್ ಆಸೈಗೋಳಿ, ರಾಧಾಕೃಷ್ಣ ಶೆಟ್ಟಿ, ಶರತ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಸುಶಾಂತ್ ಶೆಟ್ಟಿ, ಶ್ರದ್ಧಾ ಕೃಷ್ಣ ಮೂರ್ತಿ, ಶೈಲಶ್ರೀ ಶೇರಿಗಾರ್, ಅನುಸೂಯ ಪೂಂಜಾ, ಗಣಪತಿ ಭಟ್, ನಿಯತಿ ಯು ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀವಲ್ಲಿ ರೈ ಮಾರ್ಟೆಲ್ ಹಾಗೂ ಭಾಸ್ಕರ್ ಶೇರಿಗಾರ್ ಸ್ವಾಗತಿಸಿದರು. ‘ಆಟಾ’ದ ಉಪಾಧ್ಯಕ್ಷರಾದ ಶಿರೀಶ್ ಶೆಟ್ಟಿ, ಸುದರ್ಶನ್ ಶೆಟ್ಟಿ, ‘ಆಟಾ’ದ ನಿರ್ದೇಶಕ ಮಂಡಲಿಯ ಅಧ್ಯಕ್ಷರಾದ ಕೆ.ಪಿ ಮೋಹನಚಂದ್ರ, ಟ್ರಯಾಂಗಲ್ ತುಳುವೆರೆ ಚಾವಡಿಯ ಸ್ಥಾಪಕ ಅಧ್ಯಕ್ಷರಾದ ಉಮೇಶ ಅಸೈಗೋಳಿ ಹಾಗೂ ಅಧ್ಯಕ್ಷರಾದ ಸುರೇಶ ಶೆಟ್ಟಿ ವೇದಿಕೆಯಲ್ಲಿದ್ದರು. ಸಿರಿಪರ್ಬದ ಅಂಗವಾಗಿ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ತುಳುನಾಡಿನ ವೈಭವ ಬಿಂಬಿಸುವ ಯಕ್ಷಗಾನದ ದ್ವಾರ, ಸಿರಿಚಾವಡಿ, ಫೋಟೋ ಬೂತುಗಳು ಒಂದಾಗಿ ಜನರನ್ನು ತುಳುನಾಡಿಗೆ ಕರೆದೊಯ್ಯುವ ಭಾವನೆಯನ್ನು ಮೂಡಿಸಿದ್ದವು. ಅಮೇರಿಕಾದ ರಾಷ್ಟ್ರಗೀತೆ, ಭಾರತದ ವಂದೇ ಮಾತರಂಗಳಿಂದ ಕಾರ್ಯಕ್ರಮವು ಮೊದಲ್ಗೊಂಡು ಭಾರತದ ರಾಷ್ಟ್ರಗೀತೆ ಜನಗಣಮನದೊಂದಿಗೆ ಸಂಪನ್ನಗೊಂಡಿತು.
ಜುಲೈ 6 ರಂದು ಎಲ್ಲಾ ತುಳುವರು ಪಿಕ್ನಿಕ್ ನಲ್ಲಿ ಪಾಲ್ಗೊಂಡರು. ದಕ್ಷಿಣ ಕನ್ನಡದ ಹೆಸರು ತುಳುನಾಡೆಂದು ಬದಲಾಯಿಸಬೇಕಾಗಿ ಕರ್ನಾಟಕ ಸರಕಾರವನ್ನು ಅಮೇರಿಕಾ ಕೆನಡಾದ ತುಳುವರು ಒತ್ತಾಯಿಸಿದರು. ತುಳುನಾಡಿನ ಆಟೋಟ ಸ್ಪರ್ದೆಗಳು, ನೃತ್ಯ ತುಳುನಾಡಿನ ತಿಂಡಿ ತಿನಸುಗಳು ಹಾಗೂ ಅಭಿನಂದನಾ ಕಾರ್ಯಕ್ರಮಗಳೊಂದಿಗೆ ಸಿರಿಪರ್ಬವು ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಆಟಾದ ಸ್ಥಾಪಕಾಧ್ಯಕ್ಷರಾದ ಶ್ರೀ ಭಾಸ್ಕರ್ ಶೇರಿಗಾರ್, ಅಧ್ಯಕ್ಷರಾದ ಶ್ರೀವಲ್ಲಿ ರೈ ಮಾರ್ಟೆಲ್ ಹಾಗೂ ಸಿರಿಪರ್ಬದ ಸಂಚಾಲಕರಾದ ರಂಜಿನಿ ಅಸೈಗೋಳಿ ಅವರನ್ನು ಆಟಾ ಸಮ್ಮಾನ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ಸಿರಿಪರ್ಬ ಕಾಯಕ್ರಮದಲ್ಲಿ ಐನೂರಕ್ಕೂ ಹೆಚ್ಚು ಜನ ತುಳುವರು ನೋಂದಾಯಿಸಿಕೊಂಡಿದ್ದು, ಅದಕ್ಕಿಂತಲೂ ಹೆಚ್ಚು ಜನ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಂಜೆ ಸುಮಾರು 5 ಗಂಟೆಯ ಸಮಯಕ್ಕೆ ಎಲ್ಲರೂ ಭಾರವಾದ ಮನಸ್ಸಿನಿಂದ ವಿದಾಯ ಹೇಳಬೇಕಾಯಿತು.ಮುಖ್ಯ ನಿರೂಪಕರಾದ ಡಾ. ರತ್ನಾಕರ್ ಶೇರಿಗಾರ್ ಅವರು ಸುಲಲಿತ ಪ್ರೌಢ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಒಟ್ಟಾಗಿ ಹೇಳುವುದಾದರೆ ತುಳುನಾಡಿನಲ್ಲಿ ನಡೆಯುವ ಕಾರ್ಯಕ್ರಮಗಳಂತೆಯೇ ದೂರದ ಅಮೆರಿಕಾದಲ್ಲಿಯೂ ಸಂಪೂರ್ಣ ಸುಸಜ್ಜಿತವಾಗಿ ಸಿರಿಪರ್ಬವನ್ನು ಆಯೋಜಿಸಲಾಗಿತ್ತು. ಮುಂದಿನ ಸಿರಿಪರ್ಬ ಯಾವಾಗ ಎಂಬ ಪ್ರಶ್ನೆ ತುಳುವರ ಬಾಯಿಯಲ್ಲಿ ಬರುವಂತೆ ಮಾಡುವಷ್ಟು ಯಶಸ್ವಿಯಾಗಿತ್ತು .