ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ವಿಭಾಗ ಯುವ ಬಂಟರ ವಿಭಾಗ, ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಜುಲೈ 12 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ‘ಪೆರ್ಮೆದ ಬಂಟೆರ್’ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ.ಎ ಅಶೋಕ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಂಟ ಸಮುದಾಯದವರು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇದು ನಿಜಕ್ಕೂ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಬಂಟ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ನಮ್ಮ ಸಮಾಜದಲ್ಲಿ ಯಾರೂ ಶಿಕ್ಷಣದಿಂದ ವಂಚಿತರಾಗದೆ ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಬೆಂಗಳೂರು ಬಂಟರ ಸಂಘದಿಂದ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಬೆಂಗಳೂರು ಬಂಟರ ಸಂಘ ನೀಡುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಗೆ ಲೋನ್ ವ್ಯವಸ್ಥೆ ಬೇಕಾದಲ್ಲಿ ಬೆಂಗಳೂರು ಬಂಟರ ಸಂಘ ಮುಂದೆ ನಿಂತು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುತ್ತದೆ ಎಂದು ಹೇಳಿದರು. ಪುತ್ತೂರಿಗೂ ನನಗೂ ಬಹಳ ನೆಂಟು ಇದೆ. ಪುತ್ತೂರು ಎಂದರೆ ನನಗೆ ತುಂಬಾ ಪ್ರೀತಿಯ ಊರು. ಇಲ್ಲಿನ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಅತ್ಯಂತ ವಿನೂತನ ರೀತಿಯಲ್ಲಿ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು. ಬಂಟ ವಿದ್ಯಾರ್ಥಿಯ ಕಲಿಕೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡೋಣ ಎಂದು ಹೇಳಿದರು. ಸಿ.ಎ ಅಶೋಕ್ ಶೆಟ್ಟಿಯವರನ್ನು ಬಂಟರ ಸಂಘ ಪುತ್ತೂರು ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಬಂಟರು ಸಾಹಸ ಜೀವಿಗಳು ಸಂಘಟಕರು. ಜಗತ್ತಿನ ಯಾವುದೇ ಊರಲ್ಲಿ ಇದ್ದರೂ ನಾಯಕತ್ವದ ಮೂಲಕ ಬಂಟರು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಪುರಾತನ ಇತಿಹಾಸವನ್ನು ಹೊಂದಿರುವ ಬಂಟರ ತರವಾಡು ಮನೆಗಳನ್ನು ಕಾಣಬಹುದು. ಬಂಟ ಸಮಾಜದವರು ಸಂಘಟನಾ ಕ್ಷೇತ್ರದಲ್ಲಿ ಎತ್ತಿದ ಕೈಯಾಗಿದ್ದು ಬಂಟರಿಗೆ ವಿಶೇಷವಾದ ಸ್ಥಾನ ಇದೆ. ದ.ಕ., ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಬಲ ಸಮುದಾಯವಾಗಿರುವ ಬಂಟರು ಜಗತ್ತಿನ ನಾನಾ ಊರುಗಳಲ್ಲಿ ವಾಸಿಸುತ್ತಿದ್ದಾರೆ. ಬಂಟರು ಚಂದ್ರಲೋಕವನ್ನು ಬಿಟ್ಟು ಬೇರೆ ಎಲ್ಲಾ ಕಡೆ ಹೋಗಿ ಸಾಧನೆಯನ್ನು ಮಾಡಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಬಂಟರು ಚಂದ್ರಲೋಕ ಪ್ರಯಣ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು. ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ನಾವಿಂದು ಪುತ್ತೂರು ಬಂಟರ ಸಂಘದ ಮೂಲಕ ಸಮಾಜದ ವಿಶೇಷ ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪುತ್ತೂರಿನ ಬಂಟರ ಸಂಘ ಹಮ್ಮಿಕೊಂಡಿರುವ ಪೆರ್ಮೆದ ಬಂಟೆರ್ ಕಾರ್ಯಕ್ರಮ ಜಗತ್ತಿಗೆ ಹೆಮ್ಮೆ ತರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರ ರತ್ನ’ ಸವಣೂರು ಕೆ. ಸೀತಾರಾಮ ರೈಯವರು ಧ್ವಜಾರೋಹಣಗೈದು ಮಾತನಾಡಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಬಂಟ ಸಾಧಕರನ್ನು ಸನ್ಮಾನಿಸುವುದು ಉತ್ತಮ ಕೆಲಸ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಟ ಸಮಾಜ ಬಾಂಧವರು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು. ಪುತ್ತೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರು ಚಾವಡಿ ಮದಿಪು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಪುತ್ತೂರು ತಾಲೂಕು ಬಂಟರ ಸಂಘದ ಮೂಲಕ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾಗಿ ನಡೆಯುತ್ತಿದೆ ಎಂದರು. ಬಂಟರ ಯಾನೆ ನಾಡಬರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಬಂಟರ ಚಾವಡಿಯ ಉದ್ದೇಶವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಉಮೇಶ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರುತ್ತಿವೆ. ಬೆಂಗಳೂರಿನಲ್ಲಿ ಬಂಟರ ತಂಟೆಗೆ ಯಾರಾದರೂ ಬಂದರೆ ಅದನ್ನು ಬೆಂಗಳೂರು ಬಂಟರ ಸಂಘ ಸಮರ್ಥವಾಗಿ ಎದುರಿಸುತ್ತಿದೆ. ಯಾವುದೇ ಇಲಾಖೆಯಲ್ಲಿ ಯಾವುದೇ ಕೆಲಸ ಆಗಬೇಕಾದಲ್ಲಿ ಬಂಟರ ಸಂಘದ ಸಹಕಾರ ಸದಾ ಇದೆ ಎಂದರು. ಬೆಂಗಳೂರು ಬಂಟರ ಸಂಘ ವಿದ್ಯಾರ್ಥಿವೇತನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆಯುವಂತೆ ಅವರು ವಿನಂತಿಸಿದರು. ಬೆಂಗಳೂರು ಬಂಟರ ಸಂಘದ ಜೊತೆ ಕಾರ್ಯದರ್ಶಿ ಜಯಶ್ರೀ ಸಿ ರೈಯವರು ಮಾತನಾಡಿ, ಪುತ್ತೂರು ಬಂಟರ ಸಂಘಕ್ಕೆ ಉತ್ತಮ ಹೆಸರು ಇದೆ. ಇಲ್ಲಿ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾಗಿದೆ ಎಂದರು. ತಾಲೂಕು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, 350ಕ್ಕೂ ಹೆಚ್ಚು ಮಂದಿಯನ್ನು ಸನ್ಮಾನಿಸುವ ಅಪೂರ್ವವಾದ ಕಾರ್ಯಕ್ರಮವನ್ನು ಸಂಘಟಿಸಿದ ಕಾವು ಹೇಮನಾಥ ಶೆಟ್ಟಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಸನ್ಮಾನಿತರ ಪೈಕಿ ರೈಸನ್ ನ್ಯೂಟ್ರಿಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಭಾರತೀಯ ಪಶು ವೈದ್ಯಕೀಯ ಮಂಡಳಿ ಸದಸ್ಯರಾದ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿರವರು ಮಾತನಾಡಿ ಶುಭ ಹಾರೈಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈ, ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ದಯಾನಂದ ರೈ, ಮನವಳಿಕೆ ಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷ ಗೀತಾ ಮೋಹನ್ ರೈ, ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಕ, ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೀತಾ ಮೋಹನ್ ರೈ, ಎ. ಕೆ. ಜಯರಾಮ ರೈ ಕೆಯ್ಯೂರು, ಸದಾಶಿವ ರೈ ಸೂರಂಬೈಲು, ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಮಾತೃ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು, ಶಶಿಕಿರಣ್ ರೈ ನೂಜಿಬೈಲು, ಇಂದು ಶೇಖರ್ ಶೆಟ್ಟಿ, ನಿತಿನ್ ಪಕ್ಕಳ, ಜಯಪ್ರಕಾಶ್ ರೈ ನೂಜಿಬೈಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಪ್ರಜ್ವಲ್ ರೈ ಸೊರಕೆ, ಕಾರ್ತಿಕ್ ರೈ ಬೆಳಿಯೂರು ಕಟ್ಟೆ, ತಿಲಕ್ ರೈ ಕುತ್ಯಾಡಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಕಾಶ್ ರೈ ಸಾರಕರೆ, ಸುಭಾಷ್ ರೈ ಬೆಳ್ಳಿಪ್ಪಾಡಿರವರುಗಳು ಅತಿಥಿಗಳನ್ನು ಗೌರವಿಸಿದರು. ಶಾಸಕ ಅಶೋಕ್ ಕುಮಾರ್ ಅವರು ಸಭಾ ಕಾರ್ಯಕ್ರಮ ಮುಕ್ತಾಯದ ಬಳಿಕ ಆಗಮಿಸಿ, ಬಂಟರ ಸಂಘದ ಪೆರ್ಮೆದ ಬಂಟೆರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಬಂಟರ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಇದೆ ಎಂದರು. ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ಪ್ರಮುಖರು ಶಾಸಕರನ್ನು ಸ್ವಾಗತಿಸಿ ಸನ್ಮಾನಿಸಿದರು.
ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಮನ್ಮಥ ಶೆಟ್ಟಿ, ಮಾಧವಿ ಮನೋಹರ್ ರೈ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರವಿ ಪ್ರಸಾದ್ ಶೆಟ್ಟಿ ಬನ್ನೂರು, ಮಾಜಿ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ, ಬಂಟರ ಸಂಘದ ಕಚೇರಿ ವ್ಯವಸ್ಥಾಪಕಿ ರಂಜಿನಿ ಶೆಟ್ಟಿ, ಸಂದೇಶ್ ರೈ, ಭಾಗ್ಯೇಶ್ ರೈ, ವಾಣಿ ಎಸ್. ಶೆಟ್ಟಿ, ಕುಸುಮ ಪಿ. ಶೆಟ್ಟಿ ಕೆರೆಕ್ಕೋಡಿ, ರಂಜಿತಾ ಶೆಟ್ಟಿ ಕಾವುರವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮ ನಿರೂಪಕರಾದ ಮನ್ಮಥ ಶೆಟ್ಟಿ, ಮಾಧವಿ ಮನೋಹರ್ ರೈ, ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಉಮಾ ಪ್ರಸಾದ್ ರೈ ನಡುಬೈಲು, ಛಾಯಾಗ್ರಾಹಕ ನವೀನ್ ರೈ ಪಂಜಳರವರನ್ನು ಗೌರವಿಸಲಾಯಿತು. ಧರ್ಮ ಚಾವಡಿ ಮತ್ತು ಜಂಗಲ್ ಮಂಗಲ್ ಚಿತ್ರತಂಡವನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಚಿತ್ರ ನಟರಾದ ಸುರೇಶ್ ರೈ ಮತ್ತು ಯಶ್ ಶೆಟ್ಟಿ ಹಾಗೂ ನಿರ್ದೇಶಕ ರಕ್ಷಿತ್ ರೈರವರು ಸಂದರ್ಭೋಚಿತವಾಗಿ ಮಾತನಾಡಿದರು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ರೂ.1,000ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು ರಾಜೀವ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಬಿ.ಎನ್.ವೈ.ಎಸ್ – ಯುಜಿ ಮತ್ತು ಪಿಜಿ ಅಧ್ಯಯನ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ವನಿತಾ ಎಸ್. ಶೆಟ್ಟಿ, ರೈಸನ್ ನ್ಯೂಟ್ರಿಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಭಾರತೀಯ ಪಶು ವೈದ್ಯಕೀಯ ಮಂಡಳಿ ಸದಸ್ಯ ಡಾ. ಸುಶಾಂತ್ ರೈ ಬೆಳ್ಳಿಪಾಡಿ ಹಾಗೂ ಲಯನ್ಸ್ ಜಿಲ್ಲೆ 317 ಸಿ ಇದರ ದ್ವಿತೀಯ ಉಪ ಗವರ್ನರ್ ಹರಿಪ್ರಸಾದ್ ರೈ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀನಿವಾಸ ರೈ ಕಡಬ, ಜೆಇಇ ಮೈನ್ಸ್, ಜೆಇಇ ಅಡ್ವಾನ್ಸ್ ನಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸಾಧನೆಗೈದ ಭುವನ್ ರೈ ಕುಂಬ್ರ, ರಾಷ್ಟ್ರೀಯ ಮಟ್ಟದ ಜೆಎಎ ರಾಂಕ್ ವಿಜೇತೆ ವೈಭವಿ ಶೆಟ್ಟಿ ಸಾರ್ಯಬೀಡು, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಜ್ಞಾನ ರೈ ಕುರಿಯ, ಪಿ.ಎಚ್.ಡಿಯಲ್ಲಿ ಡಾಕ್ಟರೇಟ್ ಪಡೆದ ಉಪನ್ಯಾಸಕ ಕಿರಣ್ ಚಂದ್ರ ರೈ ಕರ್ನೂರು ಹಾಗೂ ಸಿ.ಎ. ಪರೀಕ್ಷೆಯಲ್ಲಿ ಭಾರತದಲ್ಲಿ 24 ನೇ ರಾಂಕ್ ಗಳಿಸಿರುವ ನಿಶ್ಚಲ್ ರೈ ಡಿಂಬ್ರಿ ಹಾಗೂ ಬೆಂಗಳೂರು ಗ್ರಾಹಕರ ಮಹಾಮಂಡಲದ ನಿರ್ದೇಶಕ ಉದಯ ರೈ ಮಾದೋಡಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ‘ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈಯವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗರವರನ್ನು ಗೌರವಿಸಲಾಯಿತು. 350 ಕ್ಕೂ ಹೆಚ್ಚು ಮಂದಿಗೆ ಸನ್ಮಾನದ ಅಪೂರ್ವ ಕಾರ್ಯಕ್ರಮ ‘ಪೆರ್ಮೆದ ಬಂಟೆರ್’ ಕಾರ್ಯಕ್ರಮದಲ್ಲಿ ಬಂಟ ಸಮಾಜದ 12 ಮಂದಿ ಸಾಧಕರನ್ನು ವಿಶೇಷವಾಗಿ ಸನ್ಮಾನಿಸುವ ಜೊತೆಗೆ ವಿವಿಧ ಸಂಸ್ಥೆಗಳಿಗೆ ಆಯ್ಕೆಯಾದ ಸರಕಾರಿ ನಾಮನಿರ್ದೇಶಕ ಸದಸ್ಯರು, ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಕ್ಷೇತ್ರದ ಸಾಧಕರು ಮತ್ತು ಸಾಧಕ ವಿದ್ಯಾರ್ಥಿಗಳು ಸೇರಿದಂತೆ 350ಕ್ಕೂ ಹೆಚ್ಚು ಮಂದಿಯನ್ನು ಸನ್ಮಾನಿಸುವ ಅಪೂರ್ವವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.