ಬಂಟರ ಸಂಘಕ್ಕೆ ಸಮಾಜದಲ್ಲಿ ಉನ್ನತ ಗೌರವವಿದೆ. ಬಂಟ ಸಮಾಜ ಜಾತ್ಯಾತೀತ ಚಿಂತನೆಯಿಂದ ಕೂಡಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಆ ಚಿಂತನೆಯ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಿಲಿಕುಲ ಮೂಡುಶೆಡ್ಡೆಯಲ್ಲಿ ಜರಗಿದ ಗುರುಪುರ ಬಂಟರ ಮಾತೃ ಸಂಘದ 12ನೇ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶಿಕ್ಷಣ ಎಂಬುದು ಪ್ರತಿಭೆಗೆ ಬೇಕಾದ ವಸ್ತು. ಅದನ್ನು ಕಾಪಾಡುವುದು ಮುಖ್ಯ. ಶಿಕ್ಷಣದೊಟ್ಟಿಗೆ ಸಂಸ್ಕೃತಿ ರಂಗ ಉಳಿಸುವ ಕಾರ್ಯ ಆಗಬೇಕು ಎಂದರು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಕ್ಷೇತ್ರದಲ್ಲಿ ಸಮಾಜದ ಸಾಧಕ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ.ಎ ಅಶೋಕ್ ಶೆಟ್ಟಿ ಎಂ., ಪುಣೆ ಬಂಟರ ಸಂಘದ ಅಧ್ಯಕ್ಷ ಕೆ. ಅಜಿತ್ ಹೆಗ್ಡೆ, ಡಾ. ಅವಿನ್ ಆಳ್ವ, ಸತೀಶ್ ಚೌಟ, ಮಲ್ಲಿಕಾ ಪ್ರಶಾಂತ್ ಪಕ್ಕಳ ಅವರನ್ನು ಸನ್ಮಾನಿಸಲಾಯಿತು. ಇದೇ ಸಂಧರ್ಭ ವಿದ್ಯಾರ್ಥಿ ವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ ನಡೆಯಿತು. ಬೆಳಕು ಯೋಜನೆಯಡಿಯಲ್ಲಿ ತಿಂಗಳಿಗೆ 4 ಆಶಕ್ತರಿಗೆ ನೀಡುವ ಸಹಾಯಧನವನ್ನು ಶಾಸಕ ಡಾ. ಭರತ್ ಶೆಟ್ಟಿ ವೈ. ನೀಡಿದರು. ದಿವಂಗತ ಜಗದೀಶ್ ಆಳ್ವ ಅತಿಕಾರಹಿತ್ಲು ಅವರಿಗೆ (ಕಾರಮೊಗರುಗುತ್ತು) ಕಂಬಳ ಹಾಗೂ ಕೃಷಿ ಕ್ಷೇತ್ರದ ಸಾಧನೆಗೆ ಮರಣೋತ್ತರ ಗೌರವ ಸಮರ್ಪಣೆ ನಡೆಯಿತು.
ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಪು ಕೆ. ವಾಸುದೇವ ಶೆಟ್ಟಿ, ವಿಜಯ ಜೆ. ಶೆಟ್ಟಿ, ರವಿರಾಜ್ ಶೆಟ್ಟಿ, ದೇವಿಚರಣ್ ಶೆಟ್ಟಿ, ರಂಜನ್ ಶೆಟ್ಟಿ, ಶಾಂತರಾಮ್ ಶೆಟ್ಟಿ, ಗಿರೀಶ್ ಎಂ. ಶೆಟ್ಟಿ ಕಟೀಲು, ಪೂರ್ಣಿಮಾ ಶೆಟ್ಟಿ, ಉಮಾವತಿ, ಸತೀಶ್ ಶೆಟ್ಟಿ, ಸುದೇಶ್ ಶೆಟ್ಟಿ, ರಾಜಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ನಯನ ಶೆಟ್ಟಿ, ಶ್ರವಣ್ ಶೆಟ್ಟಿ, ಉದಯ ಶೆಟ್ಟಿ, ಕವಿತಾ ಶೆಟ್ಟಿ ವಾಚಿಸಿದರು.
ಸುದರ್ಶನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಪುರ ಬಂಟರ ಮಾತೃ ಸಂಘಕ್ಕೆ ಡಿಸೆಂಬರ್ 31 ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಫೆಬ್ರವರಿಯಲ್ಲಿ ಬಂಟರ ಕಲೋತ್ಸವ ಜರಗಲಿದೆ ಎಂದರು. ಸಂಘದ ಕಾರ್ಯದರ್ಶಿ ಜಯರಾಮ್ ರೈ, ಜತೆ ಕಾರ್ಯದರ್ಶಿ ಕಿರಣ್ ಪಕ್ಕಳ, ಮಹೇಶ್ ಶೆಟ್ಟಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಆಳ್ವ ವಂದಿಸಿದರು.
