ತುಳುನಾಡಿನ ಧ್ವಜವಾಹಕತ್ವ ವಹಿಸಿಕೊಂಡಿರುವ ತುಳುವ ಮಹಾಸಭೆ ತನ್ನ ಚಟುವಟಿಕೆಗಳನ್ನು ವಿಸ್ತಾರಗೊಳಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ, ಸಮತೋಲಿತ ಆಹಾರ ಹಾಗೂ ಮನಃಶಾಂತಿಯ ಏಕ ಸಂಯೋಜನೆಯ ಸೇವೆ ನೀಡುತ್ತಿರುವ ಮನುಜ ಮನಸ್ಸಿನ ತಜ್ಞ ಡಾ| ನಿರಂಜನ್ ಎಸ್ ಶೆಟ್ಟಿ ಅವರನ್ನು ಕಾಪು ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ. ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿರುವ ಡಾ| ಶೆಟ್ಟಿ ಅವರು ಪ್ರಸಿದ್ಧ ಸುನಂದ ವೆಲ್ನೆಸ್ ಸೆಂಟರ್ ನ ಸ್ಥಾಪಕರಾಗಿದ್ದು, ಔಷಧವಿಲ್ಲದ ಚಿಕಿತ್ಸಾ ವಿಧಾನಗಳ ಮೂಲಕ ನೂರಾರು ಜನರ ಜೀವನದಲ್ಲಿ ಹೊಸ ಬೆಳಕು ತಂದಿದ್ದಾರೆ. ಅವರು ಸುಮಾರು 80ಕ್ಕೂ ಹೆಚ್ಚು ದೈಹಿಕ ಮಾನಸಿಕ ತೊಂದರೆಗಳಿಗೆ ಸುಸೂಕ್ತ ಪರಿಹಾರಗಳನ್ನು ನೀಡುತ್ತಾ, ದೇಶದ ವಿವಿಧ ಕಡೆ ಆರೋಗ್ಯ ಮತ್ತು ಆತ್ಮಶಾಂತಿಯ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಹಾಗೂ ಮಹಿಳಾ, ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿ, ಸಾಮಾಜಿಕ ನ್ಯಾಯಕ್ಕಾಗಿ ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಮೆರಿಕದ ಲಿಂರಾ ವಿಂಡ್ಸರ್ ವತಿಯಿಂದ ಸುವರ್ಣ ಪದಕ, ಸಿಂಗಾಪುರದ ಚಾಂಪಿಯನ್ ಆಫ್ ಚಾಂಪಿಯನ್ಸ್ ಸಿಇಓ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳು ಲಭಿಸಿದ್ದು, ಈ ಎಲ್ಲಾ ಸಾಧನೆಗಳು ಅವರ ಸೇವೆಯ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಇವರು ಅವರಾಳು ಕಂಕಣ ಗುತ್ತು ಶೇಖರ್ ಕೆ ಶೆಟ್ಟಿ ಮತ್ತು ಮಂಡೇಡಿ ರಾಜನ್ ಮನೆ ಸುನಂದ ಶೆಟ್ಟಿ ಅವರ ಸುಪುತ್ರರಾಗಿದ್ದಾರೆ.1928 ರಲ್ಲಿ ಎಸ್.ಯು ಪಣಿಯಾಡಿ ನೇತೃತ್ವದಲ್ಲಿ ಸ್ಥಾಪಿತ ತುಳುವ ಮಹಾಸಭೆ, ಶತಮಾನೋತ್ಸವದ ದಶಕದ ಹೆಜ್ಜೆಗಳಲ್ಲಿ ಶಕ್ತಿಯಾಗಿ ಪುನಶ್ಚೇತನಗೊಳ್ಳುತ್ತಿದೆ. ಈ ಪರಿಕಲ್ಪನೆಯಡಿ, ತುಳುನಾಡನ್ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸಾ ಶಿಕ್ಷಣ) ನಶಿಸಿರುವ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಭಾಷಾ, ಜಾತಿ, ಮತ ಸೌಹಾರ್ದತೆಯ ಪೋಷಣೆ, ಈ ನಿಟ್ಟಿನಲ್ಲಿ ಪ್ರತಿ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಅಲ್ಲಲ್ಲಿ ಸಮಿತಿಗಳನ್ನು ರೂಪೀಕರಿಸಲಾಗುತ್ತಿದ್ದು, ಡಾ| ಶೆಟ್ಟಿಯವರ ನೇತೃತ್ವದಲ್ಲಿ ಕಾಪು ತಾಲೂಕಿನಲ್ಲಿ ತುಳು ಬೋಧನೆ, ಸಂಸ್ಕೃತಿಯ ಸಂರಕ್ಷಣೆ, ಸಮುದಾಯದ ಆರ್ಥಿಕ ಮತ್ತು ಸಾಂಸ್ಕೃತಿಕ ಬಲವರ್ಧನೆಗೆ ಶಕ್ತಿಯುತ ಯೋಜನೆಗಳು ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ನೇಮಕಾತಿಗೆ ತುಳುವ ಮಹಾಸಭೆಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಯಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ.