ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪೋಷಕರಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಭಾರತೀಯ ಸಂಸ್ಕೃತಿಯ ನೆಲೆಯಲ್ಲಿ ಜೀವನಕ್ಕಾಗಿ ಶಿಕ್ಷಣವನ್ನು ನೀಡುವುದು ನಮ್ಮ ಗುರಿಯಾಗಿದೆ. ಪೋಷಕರು ಜಿ ಎಮ್ನ ಮೇಲೆ ಇಟ್ಟ ಭರವಸೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತೇವೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ಪ್ರೀತಿಯ ಜೊತೆಗೆ ಹೆಚ್ಚಿನ ಸಮಯವನ್ನು ಕೊಡಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಮಕ್ಕಳ ಆಸಕ್ತಿಯ ವಿಷಯಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಸುಸಂಸ್ಕೃತರನ್ನಾಗಿಸುವುದು ಪೋಷಕರ, ಶಿಕ್ಷಕರ ಕರ್ತವ್ಯವಾಗಿದೆ. ಎಲ್ಲರೂ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಜಿ ಎಮ್ ಮಕ್ಕಳಿಗೆ ಜೀವನ ಕೌಶಲ್ಯದ ಜೊತೆಗೆ ವ್ಯಕ್ತಿತ್ವ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುತ್ತದೆ ಎಂದರು. ಶಾಲಾ ವಿಭಾಗದ ಮುಖ್ಯಸ್ಥರು ಶಾಲಾ ಚಟುವಟಿಕೆಗಳು, ಪೋಷಕರ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನುಷಾ ಸುಬ್ರಹ್ಮಣ್ಯಂ, ಉಪಾಧ್ಯಕ್ಷೆ ರೇವತಿ ಕೆ, ಪೋಷಕರು, ಶಿಕ್ಷಕವೃಂದ ಉಪಸ್ಥಿತರಿದ್ದರು.





































































































