ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಎಂ. ಕೆ. ಪ್ರಸಾದ್ ಅವರು ಈಗಾಗಲೇ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಮೇ 11ರಂದು ಸಂಜೆ ಆದರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಗಣೇಶೋತ್ಸವ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು ಡಾ. ಎಂ. ಕೆ. ಪ್ರಸಾದ್ ಹಾಗೂ ರವೀಂದ್ರ ಶೆಟ್ಟಿ ನುಳಿಯಾಲು ಅವರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ರವೀಂದ್ರ ಶೆಟ್ಟಿಯವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಡಾ. ಎಂ. ಕೆ. ಪ್ರಸಾದ್ ಅವರು ತನ್ನ ಜೊತೆಯಲ್ಲಿ ಇನ್ನೋರ್ವ ಗೌರವಾಧ್ಯಕ್ಷರನ್ನಾಗಿ ಸೇರಿಸಿಕೊಂಡಿದ್ದಾರೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ರವೀಂದ್ರ ಶೆಟ್ಟಿಯವರು ನಿಡ್ಪಳ್ಳಿ ಗ್ರಾಮದ ನುಳಿಯಾಲು ಬಾರಿಕೆ ತರವಾಡು ಮನೆತನದವರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಇವರು, ಎಳವೆಯಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಸಾಧನ ರಂಗಕ್ಕೆ ಅಡಿಯಿಟ್ಟವರು. ತಂಬುತಡ್ಕದಲ್ಲಿ ಆದರ್ಶ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ ತನ್ನ ಉಸ್ತುವಾರಿಯಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದ್ದರು. ಇರ್ದೆ ಬೆಟ್ಟಂಪಾಡಿ ಮಂಡಲ ಪಂಚಾಯತ್ ಉಪ ಪ್ರಧಾನರಾಗಿ ತನ್ನ ಸಾಮಾಜಿಕ ಕೆಲಸ ಕಾರ್ಯಗಳಿಗೆ ಮುನ್ನುಡಿ ಬರೆದರು. ಇದರ ಅಧಿಕಾರಾವಧಿಯಲ್ಲಿ ನಿಡ್ಪಳ್ಳಿ ಕರ್ನಪ್ಪಾಡಿ ಸೇತುವೆ ನಿರ್ಮಾಣ, ಸಂಪರ್ಕ ರಸ್ತೆ, ಕುಡಿಯುವ ನೀರು, ನಾಲ್ಕು ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಕೆ, ಪ. ಜಾತಿ ಕಾಲೊನಿ ಅಭಿವೃದ್ಧಿ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಡೂರು -1 ಹಿ.ಪ್ರಾ. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸುಮಾರು 15 ವರ್ಷಗಳ ಕಾಲ ದುಡಿದು ಇಲಾಖೆಯಿಂದ ಸಿಗುವ ವಿವಿಧ ಸವಲತ್ತುಗಳನ್ನು ದೊರಕಿಸಿ ಕೊಡುವುದರ ಮೂಲಕ ಎರಡು ಕೊಠಡಿ, ರಂಗಮಂದಿರ ನಿರ್ಮಿಸಿ ಕೆಲವೊಮ್ಮೆ ಸ್ವಂತ ಹಣ ಹಾಕಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಾಲಯ, ಕಿನ್ನಿಮಾಣಿ- ಪೂಮಾಣಿ, ರಾಜನ್ ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ಅಪಾರ ಶ್ರಮ ವಹಿಸಿದ್ದರು.
ಪಾಣಾಜೆ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಐದನೇ ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ 2019 ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಇವರು ‘ಜ್ಞಾನ ಮಂದಾರ ಸೇವಾ ರತ್ನ’ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕೊರೋನಾ ಸಮಯದಲ್ಲಿ ಸುಮಾರು ರೂ. 3 ಲಕ್ಷ ವೆಚ್ಚದಲ್ಲಿ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದರು. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಳ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮೀತಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬಂಟ್ವಾಳ ತಾಲೂಕು ನಡ್ಕೇಲು ರಾಮಣ್ಣ ಶೆಟ್ಟಿ ಮತ್ತು ಯಮುನಾ ಆರ್. ಶೆಟ್ಟಿಯವರ ಪುತ್ರರಾದ ಇವರು ಪತ್ನಿ ಅಮಿತಾ ರವೀಂದ್ರ ಶೆಟ್ಟಿ ಮಠಂತಬೆಟ್ಟು, ಮಕ್ಕಳಾದ ಸೂರಜ್ ಕುಮಾರ್ ಶೆಟ್ಟಿ, ಸುಜೀರ್ ಕುಮಾರ್ ಶೆಟ್ಟಿ ಮತ್ತು ಸಜಿತ್ ಕುಮಾರ್ ಶೆಟ್ಟಿ ಅವರೊಂದಿಗೆ ಮುಕ್ರಂಪಾಡಿ ‘ನುಳಿಯಾಲು ನಿವಾಸ’ದಲ್ಲಿ ವಾಸ್ತವ್ಯವಿದ್ದಾರೆ.