ನೀಟ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ತೆಗೆದು, ವೈದ್ಯಕೀಯ ವ್ಯಾಸಂಗವನ್ನು ಮಾಡಲು ಅರ್ಹತೆಯನ್ನು ಹೊಂದಿದ್ದ ಕೈಕಾರದ ದೇವಿನ್ ಪ್ರಜ್ವಲ್ ರೈರವರ ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಬೇಕಾದ ಆರ್ಥಿಕ ನೆರವನ್ನು 2020- 21ರ ಅವಧಿಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಅವಧಿಯಲ್ಲಿ 35 ಮಂದಿ ದಾನಿಗಳ ಸಹಕಾರದಲ್ಲಿ 5.73 ಲಕ್ಷ ರೂ ದೇಣಿಗೆ ಸಂಗ್ರಹಿಸಿ ನೀಡಲಾಗಿದ್ದು, ಇದೀಗ ದೇವಿನ್ ಪ್ರಜ್ವಲ್ ರೈಯವರು ವೈದ್ಯರಾಗಿದ್ದು, ಈ ನಿಟ್ಟಿನಲ್ಲಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸರಳ ಸಮಾರಂಭ ಬೂಡಿಯಾರ್ ರಾಧಾಕೃಷ್ಣ ರೈಯವರ ನಿವಾಸದಲ್ಲಿ ಮೇ 20ರಂದು ಜರಗಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೂಡಿಯಾರ್ ರಾಧಾಕೃಷ್ಣ ರೈಯವರು ದೇವಿನ್ ಪ್ರಜ್ವಲ್ ರೈಯವರು ಆರ್ಥಿಕವಾಗಿ ಬಹಳ ಹಿಂದಿದ್ದರೂ, ಕಲಿಕೆಯಲ್ಲಿ ಮುಂದಿದ್ದರು. ವೈದ್ಯನಾಗಬೇಕೆಂಬ ತುಡಿತ ಇತ್ತು. ಈ ವಿಚಾರ ಬಂಟರ ಸಂಘದ ಗಮನಕ್ಕೆ ಬಂದಾಗ 2020-21ರ ಅವಧಿಯಲ್ಲಿ ನಾನು ಬಂಟರ ಸಂಘದ ಅಧ್ಯಕ್ಷನಾಗಿದ್ದ ಸಮಯದಲ್ಲಿ ಚಿಲ್ಮೆತ್ತಾರು ಜಗಜೀವನ್ ದಾಸ್ ರೈ ಹಾಗೂ ಜೈರಾಜ್ ಭಂಡಾರಿ ಡಿಂಬ್ರಿ ಅವರೊಂದಿಗೆ ಚರ್ಚಿಸಿ, ದೇವಿನ್ ಪ್ರಜ್ವಲ್ ರೈರವರ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಸಹಕಾರವನ್ನು ನೀಡಲು ನಾವು ಮುಂದೆ ಬಂದೆವು. 5.73 ಲಕ್ಷ ರೂ ಹಣವನ್ನು ದಾನಿಗಳ ಸಹಕಾರದಲ್ಲಿ ಸಂಗ್ರಹಿಸಿ, ದೇವಿನ್ ಪ್ರಜ್ವಲ್ ಗೆ ನೀಡಿದ್ದೇವೆ. ಇದೀಗ ಆತ ವೈದ್ಯನಾಗಿದ್ದು, ಇದು ತುಂಬಾ ಸಂತೋಷ ತಂದಿದೆ. ನನ್ನ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ರಾಕೇಶ್ ರೈ ಕೆಡೆಂಜಿ ಹಾಗೂ ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಎಲ್ಲಾ ನಿರ್ದೇಶಕರುಗಳ ಸಹಕಾರ ದೊರೆತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಬೂಡಿಯಾರ್ ರಾಧಾಕೃಷ್ಣ ರೈಯವರ ನೇತೃತ್ವದಲ್ಲಿ ದಾನಿಗಳ ಸಹಕಾರದಲ್ಲಿ ದೇವಿನ್ ಪ್ರಜ್ವಲ್ ರೈರವರನ್ನು ವೈದ್ಯನಾಗಿ ಮಾಡಿದ್ದು, ಇಡೀ ಬಂಟ ಸಮಾಜಕ್ಕೆ ಗೌರವ ತರುವ ವಿಷಯವಾಗಿದೆ. ರಾಧಾಕೃಷ್ಣ ರೈಯವರ ಶಿಕ್ಷಣದ ಕಾಳಜಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಬಂಟ ಸಮಾಜದ ಹಿರಿಯ ಮುಂದಾಳು, ನಿವೃತ್ತ ವಿಜಯಾ ಬ್ಯಾಂಕ್ ಅಧಿಕಾರಿ ಎ. ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆಯವರು ಮಾತನಾಡಿ, ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ದೇವಿನ್ ಪ್ರಜ್ವಲ್ ರೈ ಅವರನ್ನು ವೈದ್ಯನಾಗಿ ಮಾಡಲು ನೇತೃತ್ವ ವಹಿಸಿದ್ದ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ದಾನಿಗಳನ್ನು ಅಭಿನಂದಿಸುವುದಾಗಿ ಹೇಳಿದರು. ಬಂಟರ ಸಂಘ ಮಾಜಿ ಉಪಾಧ್ಯಕ್ಷ ಕಡಮಜಲು ಸುಭಾಷ್ ರೈ ಮತ್ತು ರಮೇಶ್ ರೈ ಬೋಳೋಡಿ ಸಂದರ್ಭೋಚಿತವಾಗಿ ಮಾತನಾಡಿದರು.
ದೇವಿನ್ ಪ್ರಜ್ವಲ್ ರೈರವರು ತನ್ನ ವೈದ್ಯಕೀಯ ಶಿಕ್ಷಣಕ್ಕೆ ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ಅವರಿಗೆ ಹೂ ನೀಡಿ ಆಶೀರ್ವಾದವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ದೇವಿನ್ ಪ್ರಜ್ವಲ್ ರೈ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ನಿರ್ದೇಶಕ ಎನ್. ಚಂದ್ರಹಾಸ್ ಶೆಟ್ಟಿ, ಬಂಟರ ಸಂಘದ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮೋಹನ್ ರೈ ನರಿಮೊಗರು, ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ, ಸಂಜೀವ ಆಳ್ವ ಹಾರಾಡಿ, ಕಿಶೋರ್ ಶೆಟ್ಟಿ ಅರಿಯಡ್ಕ, ಜಯಕುಮಾರ್ ರೈ ಮಿತ್ರಂಪಾಡಿ, ನಾರಾಯಣ ರೈ ಬಾರಿಕೆ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ ಶೆಟ್ಟಿ ಸಾಜ, ಗಣೇಶ್ ರೈ ಬೂಡಿಯಾರ್, ಕೆ. ಎಸ್ ರವೀಂದ್ರನಾಥ ರೈ ಬಳ್ಳಮಜಲು, ಆನಂದ ರೈ ಡಿಂಬ್ರಿ, ಸುಧಾಮಣಿ ರೈ, ಪ್ರೀತಿ ಎಸ್ ರೈ ಕಡಮಜಲು, ತಾರಾ ಜೆ ಭಂಡಾರಿ ಡಿಂಬ್ರಿ, ಬಂಟಸಿರಿ ವಿವಿದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು, ಪುರಂದರ ಶೆಟ್ಟಿ ಮುಡಾಳ, ಜೀವನ್ ದಾಸ್ ರೈ, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಅರುಣಾ ಪ್ರಜ್ವಲ್ ರೈ ಕೈಕಾರ ಉಪಸ್ಥಿತರಿದ್ದರು. ಜಯಲಕ್ಷ್ಮೀ ಆರ್ ರೈ ಬೂಡಿಯಾರ್ ಪ್ರಾರ್ಥನೆಗೈದರು. ತಾಲೂಕು ಬಂಟರ ಸಂಘದ ಮಾಜಿ ಉಪಾಧ್ಯಕ್ಷ ಚಿಲ್ಮೆತ್ತಾರು ಜಗಜೀವನ್ ದಾಸ್ ರೈ ಸ್ವಾಗತಿಸಿ, ಜೈರಾಜ್ ಭಂಡಾರಿ ಡಿಂಬ್ರಿ ವಂದಿಸಿದರು.





































































































