ದೈವ ನೇಮದ ಹದಿನಾರು ಕಟ್ಟು ಕಟ್ಟಲೆಗಳನ್ನು ವಿವರಿಸುವ ಭಕ್ತಿ ಭಾವಪೂರ್ಣ ವಿಶಿಷ್ಠ ಹಾಡೊಂದನ್ನು ಐಲೇಸಾ ದಿ ವಾಯ್ಸ್ ಆಫ್ ಓಷನ್ [ರಿ] ಸಂಸ್ಥೆ ಧ್ವನಿ ಮುದ್ರಿಸಿ ಚಿತ್ರೀಕರಿಸಿದ್ದು, ಇದೇ ಮೇ 18 ಭಾನುವಾರದಂದು ಬಿಡುಗಡೆ ಮಾಡಲಿದೆ. ಖ್ಯಾತ ಸಾಹಿತಿ, ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಕುಲಸಚಿವ, ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಡಾ. ಚಿನ್ನಪ್ಪ ಗೌಡ ಇವರ ಸಾಹಿತ್ಯವನ್ನು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಸಂಗೀತಕ್ಕೆ ಅಳವಡಿಸಿದ್ದು ಮಂಗಳೂರಿನ ಉದಯೋನ್ಮುಖ ಗಾಯಕ ಹರಿಪ್ರಸಾದ್ ಅದ್ಭುತವಾಗಿ ಹಾಡಿದ್ದಾರೆ.

ಮುಂಬೈಯ ಸಮಾಜಮುಖಿ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ಈ ಹಾಡನ್ನು ಪ್ರಾಯೋಜಿಸಿ ತುಳು ಜಾನಪದ ಲೋಕಕ್ಕೊಂದು ಭಕ್ತಿಪೂರ್ಣ ಭಾವಗೀತೆಯೊಂದನ್ನು ಕೊಡುಗೆಯಾಗಿ ನೀಡಲಿದ್ದಾರೆ. ಹಾಡು ದೈವ ಆರಾಧನೆಯ ವಿವಿಧ ಕಟ್ಟು ಕಟ್ಟಲೆಗಳನ್ನು ವಿವರಿಸುತ್ತಾ ಲೋಕದ ತುಂಬೆಲ್ಲಾ ಸತ್ಯವನ್ನು ಉಳಿಸು ಎನ್ನುವ ಪ್ರಾಮಾಣಿಕ ಪ್ರಾರ್ಥನೆಯೊಂದಿಗೆ ಸಂಪನ್ನಗೊಳ್ಳುತ್ತದೆ. ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ. ಸತೀಶ್ ಕುಮಾರ್ ಭಂಡಾರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಹಾಡನ್ನು ಜೂಮ್ ಡಿಜಿಟಲ್ ವೇದಿಕೆಯಲ್ಲಿ ಮೇ 18 ರಂದು ಸಂಜೆ 4 ಗಂಟೆಗೆ ಬಿಡುಗಡೆಗೊಳಿಸಲಿದ್ದು, ಅತಿಥಿಗಳಾಗಿ ಡಾ. ಚಿನ್ನಪ್ಪ ಗೌಡ, ವಿ ಮನೋಹರ್, ಗಾಯಕ ಹರಿಪ್ರಸಾದ್ ಭಾಗವಹಿಸಲಿದ್ದಾರೆ.ಶಿವಾಯ ಫೌಂಡೇಶನ್ ನ ಅಧ್ಯಕ್ಷ ಪಲಿಮಾರು ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಪಂಜ ಮತ್ತು ವೈದ್ಯಕೀಯ ಸಲಹೆಗಾರ್ತಿ ಡಾ. ಸ್ವರ್ಣಲತಾ ಶೆಟ್ಟಿ ಹಾಡಿನ ಲೋಕಾರ್ಪಣೆಗೆ ಸಹಕರಿಸಲಿದ್ದಾರೆ. ಕಾರ್ಯಕ್ರಮವನ್ನು ಉಡುಪಿಯ ಕಂಡೀರಾ ಖ್ಯಾತಿಯ ಮಂಜುನಾಥ್ ಕಾಮತ್ ನಿರ್ವಹಿಸಲಿದ್ದು, ತಾಂತ್ರಿಕ ಹಿನ್ನಲೆಯನ್ನು ಗೋಪಾಲ್ ಪಟ್ಟೆ, ಪಳ್ಳಿ ವಿಶ್ವನಾಥ್ ಶೆಟ್ಟಿ ಮತ್ತು ಅಜೇಶ್ ಚಾರ್ಮಾಡಿ, ಅನಂತ್ ರಾವ್ ನಡೆಸಿಕೊಡುತ್ತಾರೆ.
ತುಳು ದೈವಾರಾಧನಾ ಪರಿಕ್ರಮಕ್ಕೆ ಹೊಸ ರೀತಿಯ ಹಾಡನ್ನು ಅರ್ಪಿಸುವ ಈ ಕಾರ್ಯಕ್ರಮದಲ್ಲಿ ಎಲ್ಲಾ ತುಳುವರು ಡಿಜಿಟಲ್ ವೇದಿಕೆಯಲ್ಲಿ ಐಲೇಸಾ ಝೂಮ್ ಐಡಿ: 5340283988, ಮತ್ತದರ ಪಾಸ್ ಕೋಡ್: 0324 ಬಳಸಿಕೊಂಡು ಭಾಗವಹಿಸಿ ತುಳು ಭಾಷೆಯ ಬೆಳವಣಿಗೆಯಲ್ಲಿ ಮನಃಪೂರ್ವಕ ಪಾಲುದಾರರಾಗಬೇಕೆಂದು ಐಲೇಸಾದ ಮುಂಬೈ ಸಂಚಾಲಕ ಸುರೇಂದ್ರ ಶೆಟ್ಟಿ ಮಾರ್ನಾಡು ಇವರು ವಿನಂತಿಸಿದ್ದಾರೆ.