‘ತುಳುನಾಡಿನ ಗುತ್ತು ಬಾಳಿಕೆಗಳು ತಮ್ಮ ಶಿಷ್ಟಾಚಾರವನ್ನು ಮೀರದೆ ಪರಂಪರಾಗತವಾದ ಆಚಾರ ವಿಚಾರಗಳನ್ನು ಗೌರವಿಸುತ್ತಿರುವುದು ಒಂದು ಉತ್ತಮ ಲಕ್ಷಣ. ದೈವಗಳ ಚಾವಡಿ, ನಾಗ ಸಾನಿಧ್ಯ, ತರವಾಡು ಮನೆಗಳನ್ನು ಪುನರ್ ನಿರ್ಮಿಸಿ ತಮ್ಮವರೆಲ್ಲರನ್ನೂ ಒಂದೆಡೆ ಸೇರಿಸಲು ಉಪಕ್ರಮಿಸಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹಬ್ಬ ಹರಿದಿನಗಳನ್ನು ಒಂದೇ ಕಡೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿರುವುದು ಕೌಟುಂಬಿಕ ಏಕತೆಯನ್ನು ಬಲಪಡಿಸಿದೆ’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಕಾಸರಗೋಡಿನ ಪಾರಕಟ್ಟೆಯಲ್ಲಿ ಚೆಂಗಳ ಗುತ್ತು ಶ್ರೀ ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.’ಚೆಂಗಳ ಗುತ್ತು ಕುಟುಂಬಕ್ಕೆ ಸೇರಿದ 400ಕ್ಕೂ ಮಿಕ್ಕಿದ ಸದಸ್ಯರು ಒಟ್ಟುಗೂಡಿ ನಿರ್ಮಿಸಿದ ನೂತನ ತರವಾಡು ಮನೆ ಮತ್ತು ದೈವಾಲಯಗಳು ಅವರ ಶ್ರದ್ಧಾಭಕ್ತಿಯ ಪ್ರತೀಕ’ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ಉಮೇಶ್ ಶೆಟ್ಟಿ ಮನ್ನಿಪ್ಪಾಡಿ ಸಂಪಾದಿಸಿದ ‘ಜೀಟಿಗೆ’ ಸ್ಮರಣ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉಳಿಯುತ್ತಾಯ ವಿಷ್ಣು ಆಸ್ರರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಧಾರ್ಮಿಕ ಸಭೆಯಲ್ಲಿ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಜಾನಪದ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಧಾನ ಭಾಷಣಕಾರರಾಗಿದ್ದರು. ಅವರು ಮಾತನಾಡಿ ‘ತುಳುವರ ಆರಾಧನಾ ಪರಂಪರೆಗಳಲ್ಲಿ ಪ್ರಮುಖವಾದ ದೈವರಾಧನೆ ಕೇವಲ ನಂಬಿಕೆಯಲ್ಲ. ಅದು ಆತ್ಮಾಭಿಮಾನದ ಪ್ರತೀಕ. ನಮಗೆ ದೈವದ ನುಡಿ ಮತ್ತು ಹಿರಿಯರ ಮಾತು ಎರಡೂ ಒಂದೇ. ಕೋರ್ಟು ಕಚೇರಿಗಳ ಬಾಗಿಲನ್ನು ಕಾಣದ ಅದೆಷ್ಟೋ ಸಮಸ್ಯೆಗಳು ದೈವದ ಕೊಡಿಯಡಿಯಲ್ಲಿ ಅಥವಾ ಗುತ್ತು ಮನೆಯ ಚಾವಡಿಯಲ್ಲಿ ಇತ್ಯರ್ಥವಾದ ನಿದರ್ಶನಗಳಿವೆ’ ಎಂದರು. ದೈವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ. ಶಾನುಭೋಗ್, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಐ.ಸುಬ್ಬಯ್ಯ ರೈ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ., ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ ಶೆಟ್ಟಿ ತುಮಿನಾಡು ಚೆಂಗಳ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಳಶೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಚೆಂಗಳ ದೊಡ್ಡಬೀಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ವಿಷ್ಣುಮೂರ್ತಿ ಧೂಮಾವತಿ ದೈವಸ್ಥಾನ ನಿರ್ಮಾಣ ಸಮಿತಿ ಕೋಶಾಧಿಕಾರಿ ಕೆ ಶ್ರೀಶರಾಜ್ ಶೆಟ್ಟಿ ಸ್ವಾಗತಿಸಿದರು. ಶ್ರೀ ವಿಷ್ಣುಮೂರ್ತಿ ಧೂಮಾವತಿ ಸೇವಾ ಟ್ರಸ್ಟ್ ಕಾನೂನು ಸಲಹೆಗಾರ ನ್ಯಾಯವಾದಿ ಕೆ ಶ್ರೀಕಾಂತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಟ್ರಸ್ಟ್ ಕೋಶಾಧಿಕಾರಿ ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ವಿಠಲ ಶೆಟ್ಟಿ, ಕೆ ವಿಶ್ವನಾಥ ಶೆಟ್ಟಿ, ಮಧುಸೂದನ ಶೆಟ್ಟಿ, ಕೆ.ಶಶಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ‘ತುಳುವೆರೆ ಉಡಲ್’ ಜೋಡುಕಲ್ಲು ಇವರಿಂದ ತುಳು ಜಾನಪದ ನಾಟಕ ‘ತನಿಯಜ್ಜೆ’ ಹಾಗೂ ಚೆಂಗಳ ಗುತ್ತು ಕುಟುಂಬದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.