ಕನ್ನಡ ಎನ್ನುವುದು ಒಂದು ಭಾಷೆಯಲ್ಲ, ಅದು ಸಂಸ್ಕೃತಿ. ಕನ್ನಡದ ಒಳಗೆ ಶತಮಾನದಿಂದ ಹರಿದು ಬಂದ ಜ್ಞಾನ ಧಾರೆಯಿದೆ. ಕನ್ನಡ ಕಲಿಕೆಯಿಂದ ಅದನ್ನು ಕೈವಶ ಮಾಡಿಕೊಳ್ಳಲು ಸಾಧ್ಯ ಎಂಬುದಾಗಿ ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ| ಜಿ.ಎನ್ ಉಪಾಧ್ಯ ಅವರು ನುಡಿದರು. ಅವರು ಕನ್ನಡ ವಿಭಾಗ ಎಪ್ರಿಲ್ 13ರ ಆದಿತ್ಯವಾರದಂದು ನಡೆದ ಕನ್ನಡ ಸರ್ಟಿಫಿಕೇಟ್ ಕೋರ್ಸಿನ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಕನ್ನಡ ವಿಭಾಗ ದೊಡ್ಡ ಪ್ರಮಾಣದಲ್ಲಿ ಕನ್ನಡೇತರರಿಗೆ, ಕನ್ನಡ ಬಾರದವರಿಗೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಯೋಜನೆಗೆ ನಗರ ಉಪನಗರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಇದೊಂದು ಮಹತ್ವದ ಉಪಕ್ರಮ ಎಂದು ಕನ್ನಡ ಕಲಿತ ಮಕ್ಕಳಿಗೆ ಶುಭಾಶಯ ಕೋರಿದರು. ಕಳೆದ ಅನೇಕ ವರ್ಷಗಳಿಂದ ಕನ್ನಡ ಕಲಿಕಾ ಯೋಜನೆಯ ಸಂಚಾಲಕರಾಗಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಶೆಟ್ಟಿ ಅವರು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಸರ್ಟಿಫಿಕೇಟ್ ಕೋರ್ಸಿನ ಶಿಕ್ಷಕರಾದ ಗೀತಾ ಮಂಜುನಾಥ್, ಕುಮುದಾ ಆಳ್ವ ಇವರ ಸಹಾಯ, ಸಹಕಾರ ಸ್ಮರಣೀಯವಾದುದು ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಕನ್ನಡ ಕಲಿಕಾ ಕೇಂದ್ರದ ಸಂಚಾಲಕರಾಗಿರುವ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರು ಮಾತನಾಡುತ್ತಾ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಈ ಕಲಿಕಾ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ. ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆ ಕಲಿಯುವಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡಿರುವುದು ನೋಡಿ ಸಂತೋಷವಾಗುತ್ತದೆ. ಮುಂದೆಯೂ ಈ ಭಾಷೆಯ ಮೇಲಿನ ಪ್ರೀತಿ, ಅಭಿಮಾನದಿಂದ ಹೆಚ್ಚು ಹೆಚ್ಚು ಕಲಿಯುವಂತಾಗಲಿ. ಕನ್ನಡ ಕಲಿಕೆ ನಿರಂತರವಾಗಿರಲಿ ಎಂದರು.ಇದೇ ಸಂದರ್ಭದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಕನ್ನಡ ವಿಭಾಗದ ಪರವಾಗಿ ಗ್ರಂಥ ಗೌರವ ನೀಡಿ ಶುಭ ಹಾರೈಸಲಾಯಿತು. ಕುಮುದಾ ಆಳ್ವ, ಡಾ. ಉಮಾ ರಾಮರಾವ್, ರೇಶ್ಮಾ ಮಾನೆ ಅವರು ಮೇಲ್ವಿಚಾರಕರಾಗಿ ಸಹಕರಿಸಿದರು. ಮಹಾರಾಷ್ಟ್ರದ ಹಿರಿಯ ಪೋಲೀಸ್ ಅಧಿಕಾರಿ ವಿಜಯ್ ಅವ್ರೀಕರ್, ಹಿರಿಯರಾದ ವಿಜಯ್, ಸುನೀತಾ, ನಿನಾದ್, ಗಂಗಾ, ಯಜ್ಞ, ಪ್ರತೀಕ್ಷಾ, ಆರ್ವಿ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಭಿಷೇಕ್, ದರ್ಶಿನಿ, ಸಚಿನ್, ಸಮರ್ಥ್, ಸೃಜನ್, ಬಾಲಾಜಿ, ಶ್ರೇಯಸ್, ಮಾನಸಿ ಮೊದಲಾದವರು ಉಪಸ್ಥಿತರಿದ್ದರು.