ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ 2025- 2027 ರ ಅವಧಿಗೆ ನೂತನ ಕಾರ್ಯಾಧ್ಯಕ್ಷರಾಗಿ ಹೋಟೆಲ್ ಉದ್ಯಮಿ, ಸಮಾಜ ಸೇವಕ ಸುಧಾಕರ ಸಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಏಪ್ರಿಲ್ 14 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಿಶೇಷ ಮಹಾಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಹಾಗೂ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

ಸುಧಾಕರ ಸಿ ಶೆಟ್ಟಿಯವರು ಪುಣೆ ನಗರದಲ್ಲಿ ಹೋಟೆಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಸತತ ಪರಿಶ್ರಮದಿಂದ ಯಶಸ್ಸನ್ನು ಗಳಿಸಿದವರು. ಜೊತೆ ಜೊತೆಗೆ ಸಮಾಜಮುಖಿ ಚಿಂತನೆಯೊಂದಿಗೆ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದಲ್ಲಿ ಧಾರ್ಮಿಕ ಸೇವೆಯನ್ನು ಸಲ್ಲಿಸಿಕೊಂಡು ದೇವಸ್ಥಾನದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಅದೇ ರೀತಿ ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ರಚನೆಯಾದ ನಂತರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸಮಿತಿಯ ಬಲವರ್ಧನೆಗೆ ಶ್ರಮಿಸುತ್ತಾ ಬಂದಿದ್ದಾರೆ. ಅದೇ ರೀತಿ ಸಮಿತಿಯ ಪ್ರತಿಯೊಂದು ಕಾರ್ಯದಲ್ಲಿ ಸೇರಿಕೊಂಡು ಸಮಾಜ ಬಾಂಧವರಿಗೆ ಶೈಕ್ಷಣಿಕ ನೆರವು, ಅನಾರೋಗ್ಯ ಪೀಡಿತರಿಗೆ ತುರ್ತು ಸ್ಪಂದನೆ, ಅನಾಥಾಶ್ರಮಕ್ಕೆ ನೆರವು, ಯಾವುದೇ ಜನರ ಸಂಕಷ್ಟಗಳಿಗೆ ದನಿಯಾಗುವ ಸೇವೆಗಳನ್ನು ನೀಡುತ್ತಾ ಸರ್ವರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ಹೊರನಾಡಿನಲ್ಲಿದ್ದರೂ ನಾಡಿನ ತುಳು ಭಾಷೆ, ಸಂಸ್ಕೃತಿ, ಯಕ್ಷಗಾನ, ನಾಟಕದಂತಹ ಕಲಾ ಪ್ರಕಾರಗಳಿಗೆ ನಿರಂತರ ಸಹಕಾರ ನೀಡುವ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ಬಂದಿದ್ದಾರೆ.
ಮೂಲತಃ ಕಾಸರಗೋಡು ತಳೆಮೊಗೆರು ಗುತ್ತು ಚಿಕ್ಕಪ್ಪು ಶೆಟ್ಟಿ ಮತ್ತು ಕೊಡಗು ಸೋಮವಾರ ಪೇಟೆ ಸುಶೀಲಾ ಶೆಟ್ಟಿ ದಂಪತಿಗಳ ಪುತ್ರರಾದ ಶೆಟ್ಟರು ಧರ್ಮಪತ್ನಿ ವನಿತಾ ಶೆಟ್ಟಿ ಹಾಗೂ ಪುತ್ರಿಯರಾದ ಆದ್ಯ ಹಾಗೂ ಲಿದ್ಯ ಅವರೊಂದಿಗೆ ಪುಣೆಯಲ್ಲಿ ನೆಲೆಸಿದ್ದಾರೆ. ಸಮಿತಿಯ ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಭವಿಷ್ಯದಲ್ಲಿ ಇನ್ನಷ್ಟು ಕೀರ್ತಿ ಗೌರವ ಅವರನ್ನು ಅರಸಿಕೊಂಡು ಬರಲಿ ಎಂದು ಅಭಿನಂದಿಸುತ್ತಾ ಶುಭವನ್ನು ಹಾರೈಸೋಣ.





































































































