ಇವತ್ತು ಗುರ್ಮೆ ಸುರೇಶಣ್ಣನ ಜನ್ಮದಿನ. ಸುರೇಶಣ್ಣ ಮತ್ತು ಹಸುವಿಗೂ, ಹಸುಗೂಸಿಗೂ ದೊಡ್ಡದೇನು ವ್ಯತ್ಯಾಸವಿಲ್ಲ. ಅವರ ಹೃದಯ ನಿಷ್ಕಲ್ಮಶ. ಯಾವಾಗಾದರೊಮ್ಮೆ ಕರೆ ಮಾಡುವ ಸುರೇಶಣ್ಣ ತಡ ರಾತ್ರಿಯ ತನಕವೂ ಲಹರಿಗೆ ಬಿದ್ದು ಮಾತಾಡುತ್ತಾರೆ. ಅದು ಅವರ ಅಂತರಂಗ ಅರಳಿಕೊಳ್ಳುವ ಕಾಲವೆನೋ! ಯಾವ ಜನ್ಮದ ಬಂಧುವೋ ಎನ್ನುವಂತೆ ನಾವು ಹರಟುತ್ತೇವೆ. ಏನಿದೆ ಅಷ್ಟು ಮಾತಾಡಲು ವಿಷಯ? ಆದರೂ ಮಾತಾಡಿರುತ್ತೇವೆ. ಅವರ ಆರೋಗ್ಯ, ಸಮಾಜದ ಅನಾರೋಗ್ಯ, ಹತ್ತಿರವಿದ್ದೂ ದೂರ ನಿಲ್ಲುವವರು, ದೂರವಿದ್ದೂ ಹತ್ತಿರವಿರುವವರು, ಏನೂ ಇಲ್ಲದೆ ದೂರುವವರು ಹೀಗೆ ನನ್ನ ಮತ್ತು ಸುರೇಶಣ್ಣನ ಮಾತಿನ ನಡುವೆ ಎಲ್ಲರೂ ಬಂದು ಹೋಗುತ್ತಾರೆ. ನನ್ನ ಜೀವನದಲ್ಲಿ ನೋಡಿದ ಕೆಲವೇ ಕೆಲವು ನಿಷ್ಕಲ್ಮಶ ಹೃದಯದವರಲ್ಲಿ ಗುರ್ಮೆ ಸುರೇಶಣ್ಣನೂ ಒಬ್ಬರು.

ಸುರೇಶಣ್ಣ ಕಾಪು ಕ್ಷೇತ್ರದ “ಪುಣ್ಯಪುರುಷ” ಎನ್ನುವುದು ನನ್ನ ಅಭಿಪ್ರಾಯ. ಮೊನ್ನೆ ಕಾಪು ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ನೋಡಿದಾಗ ನನಗೆ ಹಾಗನ್ನಿಸಿತು. ಅವರ ಮುಂದಿನ ಹೆಜ್ಜೆ ಪೇರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಕಡೆಗಿದೆ! ಸುರೇಶಣ್ಣ ಏನಾದರೊಂದು ಮಾಡಬೇಕು ಎಂದು ಹೆಜ್ಜೆ ಇಟ್ಟರೆ ಅದನ್ನ ಮಾಡಿಯೇ ತೀರುತ್ತಾರೆ, ಅದಕ್ಕಾಗಿ ಯಾರನ್ನ ಮುಂದೆ ಬಿಡಬೇಕು ಎಂದು ಯೋಚಿಸಿ ಅವರವರಿಗೆ ಜವಾಬ್ದಾರಿ ವಹಿಸಿ ತಾನು ಏನೂ ಅಲ್ಲ ಎನ್ನುವಂತೆ ಸುಮ್ಮನುಳಿದು ಕಾರ್ಯ ಜಯದ ಹಿಂದಿನ ಉಸ್ತುವಾರಿಯಾಗಿ ನಿಂತಿರುತ್ತಾರೆ. ಸುರೇಶಣ್ಣನ ಅವಧಿಯಲ್ಲೇ ಜೀರ್ಣಗೊಂಡಿರುವ ಇತಿಹಾಸ ಪ್ರಸಿದ್ಧ ಪೇರ್ಡೂರು ಅನಂತಪದ್ಮನಾಭ ದೇವಸ್ಥಾನ ಅತ್ಯಂತ ವೈಭವದಲ್ಲಿ ಜೀರ್ಣೋದ್ದಾರವಾಗುತ್ತದೆ ಎನ್ನುವ ಭರವಸೆ ನನಗಿದೆ.
ರಾಜಕಾರಣ ಸುರೇಶಣ್ಣನಿಗೆ ಒಗ್ಗುವಂತ ಕ್ಷೇತ್ರವಲ್ಲ. ಜೀವನದಲ್ಲಿ ಎಂದೂ ಸುರೇಶಣ್ಣ ತಲೆ ತಗ್ಗಿಸುವ ಕೆಲಸ ಮಾಡಿದವರಲ್ಲ, ಬದುಕಿಗೆ ಬೆನ್ನು ಹಾಕಿದವರ ಬೆನ್ನು ಚಪ್ಪರಿಸಿ ನಾನಿದ್ದೇನೆ ಜೊತೆಗೆ ಎಂದು ಜೊತೆ ನಿಂತವರು. ಈ ಸಮಾಜ ಈ ಕಾಲದಲ್ಲಿ ರಾಜಕಾರಣಿಗಳನ್ನ ನೋಡುವ, ಪರಿಗ್ರಹಿಸುವ ಪರಿಯೇ ಬೇರೆ. ಆದರೂ ಸುರೇಶಣ್ಣ ಅಲ್ಲಿಯೂ ಜನಾನುರಾಗಿಯಾಗಿ ಬೆಳೆಯುತ್ತಿದ್ದಾರೆ. ಸರ್ಕಾರದ ಅನುದಾನವೇ ಅನುಮಾನವಾಗಿದ್ದರೂ ತನ್ನ ಶ್ರಮದ ದುಡಿಮೆಯ ಪಾಲನ್ನ ಸಮಾಜಕ್ಕೆ ಅರ್ಪಿಸುತ್ತಾ ಮಾತು ಮತ್ತು ಕೃತಿಗೂ ಸಮವಾಗಿ ಬದುಕುವ ಸುರೇಶಣ್ಣನಿಗೆ ಭಗವತಿ, ಭಾಗ್ಯವತಿ ಕೊಲ್ಲೂರು ಮೂಕಾಂಬಿಕೆ ಎಂದಿಗೂ ಅನುಗ್ರಹಿಸಲಿ.
ಬರಹ : ವಸಂತ್ ಗಿಳಿಯಾರ್