‘ಕವಿತೆ ಕಟ್ಟುವುದು ಸುಲಭದ ಮಾತಲ್ಲ. ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸುವ ಚಿಕಿತ್ಸಕ ಬುದ್ಧಿಯೊಂದಿಗೆ ಭಾಷೆಯ ಮೇಲಿನ ಪ್ರಭುತ್ವವೂ ಬೇಕಾಗುತ್ತದೆ. ಈ ದೃಷ್ಟಿಯಿಂದ ಕಾವ್ಯ ರಚನೆ ಎಂಬುದು ಒಂದು ಅದ್ಭುತ ಸೃಷ್ಟಿ ಕಾರ್ಯವೇ. ವಿವಿಧ ಮಾದರಿಯ ಕವಿತಾ ರಚನೆಯ ಮೂಲಕ ಕುಕ್ಕುವಳ್ಳಿ ಅವರು ಅದನ್ನು ಸಾಧಿಸಿದ್ದಾರೆ’ ಎಂದು ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಹೇಳಿದ್ದಾರೆ. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಫೆಬ್ರವರಿ 14ರಂದು ನಗರದ ಪುರಭವನದಲ್ಲಿ ಜರಗಿದ ಪುಸ್ತಕ ಪ್ರೇಮಿಗಳ ದಿನಾಚರಣೆಯಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಸೃಷ್ಟಿಸಿರಿಯಲಿ ಪುಷ್ಪವೃಷ್ಟಿ’ ಭಾವ ಅನುಭಾವ ಗೀತೆಗಳ ಗುಚ್ಛವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಗುಲ್ಬರ್ಗ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಅಧಿಕಾರಿ ಡಾ. ಸದಾನಂದ ಪೆರ್ಲ ಕೃತಿಯ ಬಗ್ಗೆ ಮಾತನಾಡಿ ‘ವೃಕ್ಷರಾಜಿಗಳೆಲ್ಲ ಹೂ ಬಿಡುವ ಭೂಮಿಯ ಫಲವಂತಿಕೆಯ ಕಾಲದಲ್ಲಿ ಕೃತಿ ಹೊರಬರುತ್ತಿದೆ. ಅದಕ್ಕನುಗುಣವಾಗಿ ಕೃತಿಯ ಶೀರ್ಷಿಕೆ ಹೊಂದಿಕೆ ಯಾಗುವುದೊಂದು ಯೋಗಾಯೋಗ’ ಎಂದರು.
ಕೃತಿಕಾರ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಪ್ರಕೃತಿಯಲ್ಲಾಗುವ ಪುಷ್ಪ ವೃಷ್ಟಿ ಯಾವತ್ತೂ ವ್ಯರ್ಥವಲ್ಲ. ಎಲ್ಲಾ ಹೂಗಳು ಸುಗಂಧ ಬೀರದಿದ್ದರೂ ಔಷಧಿ ಅಥವಾ ಅಲಂಕಾರಕ್ಕಾಗಿಯಾದರೂ ಉಪಯೋಗವಾಗುತ್ತವೆ. ಅದಕ್ಕಾಗಿ ಸಂಕಲನದಲ್ಲಿರುವ ಕವಿತೆಗಳನ್ನು ಕಾವ್ಯಸಿರಿ, ಭಾವಸಿರಿ ಮತ್ತು ಭಕ್ತಿಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕೃತಿಕಾರರನ್ನು ರಂಗ ಸಂಗಾತಿ ವತಿಯಿಂದ ಸನ್ಮಾನಿಸಲಾಯಿತು. ಲೇಖಕಿ ಅಕ್ಷಯ ಆರ್ .ಶೆಟ್ಟಿ ಕವಿ ಪರಿಚಯ ನೀಡಿದರು. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಶಶಿರಾಜ್ ರಾವ್ ಕಾವೂರು ಸ್ವಾಗತಿಸಿದರು. ಡಾ. ಮಂಜುಳಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.