ಧರ್ಮ ಶಿಕ್ಷಣ ಸಿಗುವ ಜಾಗದಲ್ಲಿ ಜಾತ್ರೆಗೆ ಮಾರ್ಗದರ್ಶನ ಸಿಗಬೇಕು. ಜಾತ್ರೆಯಲ್ಲಿ ಸಾಗುವ ರಥ ಜೀವನ ಪಯಣಕ್ಕೆ ಸ್ಪೂರ್ತಿ ನೀಡಬೇಕು. ಸಂಪತ್ತಿನ ಸದ್ಬಳಕೆಯಿಂದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಸಂಸ್ಕೃತಿಯ ಕೊರತೆಯಿಂದ ವಿಕೃತಿ ಹೆಚ್ಚುತ್ತಿರುವುದು ಆತಂಕದ ಸಂಗತಿ. ಸಂಸ್ಕಾರಭರಿತ ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು. ಸಾಮಾಜಿಕ ಸಮತೋಲಕ್ಕೆ ಆಧ್ಯಾತ್ಮಕ ಹಾದಿಯೇ ಸೂಕ್ತ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ಶ್ರೀ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿ, “ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ. ಗುರುಗಳ ಸಾನಿಧ್ಯದಲ್ಲಿ ಆಧ್ಯಾತ್ಮಿಕ ಚಿತ್ತಹರಿಸಿ ಆನಂದ ಹೊಂದೋಣ. ಒತ್ತಡ ರಹಿತ ಸಂತೃಪ್ತ ಜೀವನ ಸಾಗಿಸೋಣ” ಎಂದರು.
ನಾನಾ ಕ್ಷೇತ್ರಗಳ ಗಣ್ಯರಾದ ವೀರೇಂದ್ರ ಮೋಹನ್ ಜೋಶಿ, ಡಾ. ಅವಿನ್ ಆಳ್ವ, ಮಲ್ಲಿಕಾ ಪ್ರಶಾಂತ ಪಕ್ಕಳ, ತಮನ್ನಾ ಪ್ರಭಾಕರ ಶೆಟ್ಟಿ, ಶ್ವೇತಾ ಸಿ. ರೈ, ಪಿ. ಎಸ್. ಸೂರ್ಯ ನಾರಾಯಣ ಭಟ್, ರಾಮಪ್ರಸಾದ್, ಬಾಲಕೃಷ್ಣ ಎಂ. ರೈ, ಜಯಲಕ್ಷ್ಮೀ ಪಿ. ಶೆಟ್ಟಿ, ಅಜಿತ್ ಕುಮಾರ್ ಪಂದಳಂ, ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ, ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.
ಆರ್ಥಿಕ ನೆರವು : ಕಾರ್ಯಕ್ರಮದ ಪ್ರಾಯೋಜಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಅನಾರೋಗ್ಯ ಪೀಡಿತರು, ಆಶಕ್ತರು ಹಾಗೂ ಸಂಘ ಸಂಸ್ಥೆಗಳ 127 ಮಂದಿಗೆ ಒಟ್ಟು 12.67 ಲಕ್ಷ ರೂ.ಗಳಷ್ಟು ಆರ್ಥಿಕ ನೆರವು ನೀಡಲಾಯಿತು.
ಒಡಿಯೂರು ಗುರುದೇವ ಸೇವಾ ಬಳಗದ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆ ಮನೆ ಸ್ವಾಗತಿಸಿದರು. ಶ್ರೀ ಗುರುದೇವ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಒಡಿಯೂರು ಆಶಯಗೀತೆ ಹಾಡಿದರು. ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿ ವಂದಿಸಿದರು. ರಥೋತ್ಸವ ಸಮೀತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಧರ್ಮಸಭೆಗೆ ಮೊದಲು ಸತ್ಯನಾರಾಯಣ ಪೂಜೆ ಜರುಗಿತು. ಸಂಜೆ ತಾಲೀಮು ಪ್ರದರ್ಶನ ನಡೆಯಿತು. ರಾತ್ರಿ 7 ರಿಂದ ಶ್ರೀ ದತ್ತಾಂಜನೇಯ ದೇವರ ರಥೋತ್ಸವ, ರಥಯಾತ್ರೆ ಒಡಿಯೂರು ಸಂಸ್ಥಾನದಿಂದ ಹೊರಟು ಮಿತ್ತನಡ್ಕದಲ್ಲಿರುವ ದೇವಸ್ಥಾನಕ್ಕೆ ತೆರಳಿ ನಂತರ ಕನ್ಯಾನ ಪೇಟೆ ಸವಾರಿ ಮಾಡಿತು. ಸದ್ಗುರು ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ಬಳಿಕ 12 ಕಿಲೋ ಮೀಟರ್ ದೂರದ ರಥಯಾತ್ರೆ ಒಡಿಯೂರು ಸಂಸ್ಥಾನಕ್ಕೆ ಹಿಂತಿರುಗಿತು.