ಮೂಡುಬಿದಿರೆ: ಶಿಕ್ಷಣದ ಸ್ವರ್ಗವಾಗಿರುವ ಮೂಡುಬಿದಿರೆ, ಉತ್ಕೃಷ್ಟ ಮಟ್ಟದ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳ ಕಾಶಿಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ನುಡಿದರು. ಅವರು ಶನಿವಾರ ವಿದ್ಯಾಗಿರಿಯ ಕೃಷಿ ಸಿರಿ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಜರುಗಿದ ಮೂರು ದಿನಗಳ ‘ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಾವಿರಾರು ಜನರಿಗೆ ಬದುಕಿನ ಶಿಕ್ಷಣ ನೀಡುತ್ತಿರುವ ಡಾ ಎಮ್ ಮೋಹನ್ ಆಳ್ವರನ್ನು ವಿದ್ಯಾರ್ಥಿಗಳು ರೋಲ್ ಮಾಡೆಲ್ ಆಗಿ ಪರಿಗಣಿಸಬೇಕು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾನವ ನಿರ್ಮಾಣದ ಸಂಸ್ಥೆ. ಇಂತಹ ಶಿಬಿರದಲ್ಲಿ ಕಲಿತ ಜೀವನ ಶಿಕ್ಷಣ ಮುಂದಿನ ಸುಂದರ ಬದುಕಿಗೆ ಅಡಿಪಾಯವಾಗಬಲ್ಲದು. ಶಿಸ್ತು, ಸಮಯಪಾಲನೆ ಇಲ್ಲಿ ಕಲಿಯುವಂತಾಗಬೇಕು ಎಂದರು. ಇನ್ನು ವಿದ್ಯಾರ್ಥಿಗಳು ಶಾಸ್ತ್ರೀಯ ಶಿಕ್ಷಣದ ಕಡೆಗೆ ಗಮನ ಕೊಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಂತಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ೯೦ ಶೇಕಡಾ ಅಂಕಗಳಿಂದ ಹೆಚ್ಚಿನ ಅಂಕ ಪಡೆಯುವಂತಾಗಬೇಕು.ಈ ಹಿನ್ನಲೆಯಲ್ಲಿ ರಾಜ್ಯ ಸಂಸ್ಥೆ ಹತ್ತು ಹಲವು ಕರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ತರಬೇತಿ ಆಯುಕ್ತ ಶಾಂತಾರಾಮ ಪ್ರಭು, ಶಿಬಿರ ನಿರ್ದೇಶಕ ನಾರಾಯಣ್ ನಾಯಕ್, ಸ್ಕೌಟ್ ವಿಭಾಗದ ಪ್ರತೀಪ್, ಗೈಡ್ ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಗೈಡ್ ವಿಭಾಗ ನಾಯಕಿ ತ್ರಿಶಲಾ, ರೋವರ್ ಮತ್ತು ರೇಂಜರ್ ವಿಭಾಗ ನಾಯಕಿ ಡಾ. ಅಪರ್ಣಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್, ಬುಲ್ ಬುಲ್ ವಿಭಾಗದ ನಾಯಕಿ ಸಿಸ್ಟರ್ ಲೋರಿನಾ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ, ಜಿಲ್ಲಾ ಸಂಘಟನಾ ಆಯುಕ್ತೆ ಸ್ಕೌಟ್ಸ್ ಜಿಲ್ಲಾ ಸಂಘಟನಾ ಆಯುಕ್ತ ವಸಂತ ದೇವಾಡಿಗ ಇದ್ದರು. ಒಟ್ಟು ಕರ್ಯಕ್ರಮದಲ್ಲಿ ೧೩೯೨ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡರು. ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕರ್ಯಕ್ರಮ ನಡೆಯಿತು.