ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಅತ್ಯದ್ಭುತವೆಂಬಂತೆ ಬಾಗಲಕೋಟೆಯ ಇಳಕಲ್ ಶಿಲೆಯಲ್ಲಿ ನವ ನಿರ್ಮಾಣಗೊಳ್ಳುತ್ತಿದ್ದು ದೇಶ ವಿದೇಶಗಳಲ್ಲಿ ನೆಲೆಸಿರುವ ಭಕ್ತರ ಕೂಡುವಿಕೆಯಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅತ್ಯಂತ ವಿಜೃಂಭಣೆಯಿಂದ ಜರಗಲಿದೆ.
ಫೆಬ್ರವರಿ 25 ರಿಂದ ಮೊದಲ್ಗೊಂಡು ಮಾರ್ಚ್ 5 ರವರೆಗೆ ನವ ದಿನಗಳ ಪರ್ಯಂತ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನವದುರ್ಗಾ ಲೇಖನ ಮತ್ತು ನವ ಚಂಡೀಯಾಗದ ಕುರಿತು ಮಾಹಿತಿ ನೀಡಲು ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ, ರಜತ ರಥ ಸಮರ್ಪಣೆ, ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸ್ವರ್ಣ ಮುಖ ಹಾಗೂ ಹಸಿರು ಹೊರೆ ಕಾಣಿಕೆ ಮತ್ತು ಪ್ರತಿಷ್ಠಾದಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲು 18 ದೇಶಗಳ ವಿಶೇಷ ಸಭೆಯನ್ನು ಜೂಮ್ ಮೀಟಿಂಗ್ ನಲ್ಲಿ ಆಯೋಜಿಸಲಾಗಿತ್ತು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಂತರಾಷ್ಟ್ರೀಯ ಸೇವಾ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ, ಕಾರ್ಯಾಧ್ಯಕ್ಷ ಶಶಿಧರ್ ಶೆಟ್ಟಿ ಮಲ್ಲಾರ್, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮನೋಹರ ಎಸ್. ಶೆಟ್ಟಿ, ಮಾಧವ ಆರ್ ಪಾಲನ್ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.