ಮುಂಬಯಿ: ಕರುನಾಡಿನಲ್ಲಿ ಆಚರಿಸುವ ಕರ್ನಾಟಕ ರಾಜ್ಯೋತ್ಸವವು ಬರೇ ಕರ್ನಾಟಕದಲ್ಲಿ ಅಲ್ಲ ಇಡೀ ಭಾರತ ದೇಶದಲ್ಲಿ ಎಲ್ಲ ಕನ್ನಡಿಗರು ಒಟ್ಟಿಗೆ ಸೇರಿ ಆಚರಿಸುತ್ತಿರುವುದು ಅಭಿನಂದನೀಯ. ಕರ್ನಾಟಕ ರಾಜ್ಯೋತ್ಸವಕ್ಕೆ ತುಂಬಾ ಮಹತ್ವವಿದೆ. ಯಾಕೆಂದರೆ ನಮಗೆ ನಮ್ಮ ರಾಜ್ಯದ ಮೇಲೆ ಇರುವ ಪ್ರೀತಿ ಮತ್ತು ಜನ್ಮಭೂಮಿಯಲ್ಲಿರುವಂತಹ ವಿಶ್ವಾಸ. ಈ ಸಡಗರವನ್ನು ಇಂದಿಲ್ಲಿ ಮುಂಬಯಿಯಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ. ಸಾಂಸ್ಕೃತಿಕ ಕಾರ್ಯಕ್ರಮ ಕಾಣುವಾಗ ಕನ್ನಡ, ನಮ್ಮ ರಾಜ್ಯ, ಸಂಸ್ಕೃತಿ ಏನೆಂದು ಭಾವೀ ಜನಾಂಗಕ್ಕೆ ತಿಳಿಸಿ ಕೊಟ್ಟಂತಾಗುವುದು ಜೊತೆಗೆ ಅವರನ್ನು ಕನ್ನಡಕ್ಕೆ ಸೇರಿಸಿದಂತಾಗುವುದು. ಎಲ್ಲಾ ಕನ್ನಡಿಗರು ಒಟ್ಟಿಗೆ ಸೇರಬೇಕು. ನಮ್ಮ ರಾಜ್ಯದ ಪ್ರೀತಿಯನ್ನು ತೋರಿಸಬೇಕು. ಅಲ್ಲಿಯ ಸಂಸ್ಕೃತಿಯನ್ನು ಮುಂಬಯಿಯಲ್ಲಿ ಬೆಳೆಸಿ, ಊಳಿಸಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಭಾನುವಾರ ಮಧ್ಯಾಹ್ನ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ, ಕೆಂಪೇಗೌಡ ಅಸೋಸಿಯೇ ಶನ್ ಮುಂಬಯಿ, ಕುರುಬರ ಸಂಘ ಮಹಾರಾಷ್ಟ್ರ ಮತ್ತು ಗೌಡರ ಉನ್ನತೀಕರಣ ಸಂಸ್ಥೆ ನವಿಮುಂಬಯಿ ಹಾಗೂ ಕಲಾ ಸೌರಭ ಮುಂಬಯಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕನಕದಾಸ ಮತ್ತು ಕುವೆಂಪು ಜಯಂತಿ ಗೌರವಾರ್ಥ ಕರ್ನಾಟಕ ರಾಜ್ಯೋತ್ಸವ ಸಡಗರ, ಕರುನಾಡ ಡಿಂಡಿಮ-2024 ಸಂಭ್ರಮವನ್ನು ಉದ್ಘಾಟಿಸಿ ಡಾ| ಆರ್.ಕೆ ಶೆಟ್ಟಿ ಮಾತನಾಡಿದರು.
ಒಕ್ಕಲಿಗ ಸಂಘ ಮಹಾರಾಷ್ಟ್ರ ಅಧ್ಯಕ್ಷ ಕೆ.ರಾಜೇ ಗೌಡ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ, ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ, ಅತಿಥಿs ಅಭ್ಯಾಗತರುಗಳಾಗಿ ಬಾಂಬೇ ಬಂಟ್ಸ್ ಅಸೋಸಿಯೇಶನ್ ಮುಂಬ ಮಾಜಿ ಅಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಇದರ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಸುರೇಶ್ ಕುಮಾರ್ ಕದ್ರಿ, ಕನ್ನಡ ಕಲಾ ಕೇಂದ್ರ ಮುಂಬಯಿ ಅಧ್ಯಕ್ಷ ಮಧುಸೂಧನ್ ಟಿ.ಆರ್., ಕುರುಬರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಯೋಗೇಶ್ ಗೌಡ, ಒಕ್ಕಲಿಗರ ಸಂಘ ಮಹಾರಾಷ್ಟ್ರ. ಮಾಜಿ ಅಧ್ಯಕ್ಷ ಜಿತೇಂದ್ರ ಗೌಡ, ಗೌಡರ ಉನ್ನತೀಕರಣ ಸಂಸ್ಥೆ ಮುಂಬಯಿ ಅಧ್ಯಕ್ಷ ಮೋಹನ್ಕುಮಾರ್ ಜೆ.ಗೌಡ, ಕೆಂಪೇ ಗೌಡ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ವಿಕಾಸ್ ಕುಮಾರ್ ಗೌಡ, ಕಲಾ ಸೌರಭ ಮುಂಬಯಿ ಅಧ್ಯಕ್ಷ ಪದ್ಮನಾಭ ಸಸಿಹಿತ್ಲು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ, ಕೆಂಪೇಗೌಡ ಅಸೋಸಿಯೇಶನ್, ಕುರುಬರ ಸಂಘ, ಗೌಡರ ಉನ್ನತೀಕರಣ ಸಂಸ್ಥೆಗಳಿಗೆ ಅಭಿನಂದನಾ ಗೌರವ ಸಮ್ಮಾನ ಹಾಗೂ
ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘಟನಾ ಸಂಸ್ಥೆಗಳ ಮಹಿಳಾ ವಿಭಾಗಗಳು ಹಳದಿ ಕುಂಕುಮ, ಚಿಣ್ಣರ ಬಿಂಬ ಮುಂಬಯಿ ತಂಡವು ಭಜನಾಮೃತ, ವೀಣಾ ಬಾಬು ಗೌಡ ಮತ್ತು ಬಳಗ ಗಣೇಶ ವಂದನೆ, ವಿದ್ವಾನ್ ಕೋಲಾರ ರಮೇಶ್ ಬೆಂಗಳೂರು ಬಳಗವು ಕನಕದಾಸ ಸ್ತುತಿ ನೃತ್ಯ ರೂಪಕ, ಕುವೆಂಪು ಸ್ಮರಣೆ ಜಾನಪದ ಸಮೂಹ ನೃತ್ಯ, ಒಕ್ಕಲಿಗರ ಸಂಘ, ಕುರುಬರ ಸಂಘ, ಗೌಡರ ಉನ್ನತೀಕರಣ ಸಂಸೆ ಯುವ ವಿಭಾಗವು ಸರಣಿ ನೃತ್ಯ ವೈವಿಧ್ಯ, ಕಲಾ ಸೌರಭ ಮುಂಬಯಿ ನಿರ್ದೇಶನದಲ್ಲಿ ಅಮಿತಾ ಕಲಾ ಮಂದಿರ ಮೀರಾರೋಡ್ ತಂಡವು ಶಾಸ್ತ್ರೀಯ ಜಾನಪದ ನೃತ್ಯ ವೈವಿಧ್ಯ, ಕು| ದೀಕ್ಷಾ ದೇವಾಡಿಗ, ಕು| ಸೌಜನ್ಯ ಬಿಲ್ಲವ ಮತ್ತು ಬಳಗವು ಭರತನಾಟ್ಯ ಹಾಗೂ ಜಡೆ ಕೋಲಾಟ, ಕು| ಅಂಕಿತಾ ನಾಯ್ಕ್ ಮತ್ತು ಬಳಗವು ಯಕ್ಷಕುಣಿತ ಸಂಭ್ರಮ (ತೆಂಕು ಬಡಗು ಜುಗಲ್ಬಂದಿ), ಕನ್ನಡ ಕಲಾ ಕೇಂದ್ರ ಮುಂಬಯಿ ಪ್ರಸ್ತುತಿಯೊಂದಿಗೆ ಪ್ರೊ| ಚೇತನ್ ಗೌಡ ಅವರ ಮೇಲ್ವಿಚಾರಣೆಯಲ್ಲಿ ನಾರಾಯಣ ಶೆಟ್ಟಿ ನಂದಳಿಕೆ ರಚನೆಯ ಮತ್ತು ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ಬಿಸಿಲು ಬೆಳದಿಂಗಳು ಕನ್ನಡ ನಾಟಕ ಪ್ರದರ್ಶಿಸಲ್ಪಟ್ಟಿತು.
ದಯಾ ಸಾಗರ್ ಚೌಟ, ನಳಿನಾ ಪ್ರಸಾದ್, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ರವಿ ಪಿ. ಗೌಡ ಮತ್ತು ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಒಕ್ಕಲಿಗರ ಸಂಘ ಮಹಾರಾಷ್ಟ್ರ ಗೌ| ಪ್ರ| ಕಾರ್ಯದರ್ಶಿ ಗಂಗಾಧರ್ ಎನ್. ಗೌಡ ವಂದಿಸಿದರು.
ಚಿತ್ರ, ವರದಿ – ರೋನ್ಸ್ ಬಂಟ್ವಾಳ್