ಇಂದಿನ ವಿವಾಹಗಳು ತರಕಾರಿಗಳಂತೆ ಆಗಿದ್ದು, ಮಾರುಕಟ್ಟೆಯಿಂದ ಖರೀದಿ ಮಾಡುವಾಗ ಎಲ್ಲವೂ ತಾಜಾವಾಗಿಯೇ ಇರುತ್ತದೆ. ಆದರೆ ದಿನ ಕಳೆದ ಹಾಗೆ ಕೊಳೆತು ನಾರಲು ಪ್ರಾರಂಭವಾಗುತ್ತವೆ. ಬಾಳಿಕೆ ಬಾರದ ಸಂಬಂಧಗಳು! ಒಟ್ಟಿನಲ್ಲಿ ಹೇಳುವುದಾದರೆ ಮೂರು ಗಂಟಿನ ನಂಟಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಪ್ರಸ್ತುತ ನಮ್ಮ ದೇಶದಲ್ಲಿ ನಿರುದ್ಯೋಗಕ್ಕಿಂತ ಹೆಚ್ಚಾಗಿ ಈ ಸಮಸ್ಯೆಯೇ ಕಾಡುತ್ತಿದೆ ಎಂದರೆ ಅತಿಶಯೋಕ್ತಿಯಾಗದು. ಈ ಸಮಸ್ಯೆಗೆ ಕಾರಣ ಹುಡುಕಲು ಹೊರಟರೆ ಹಲವಾರು ಕಾರಣಗಳು ಬಿಚ್ಚಿಕೊಳ್ಳುತ್ತವೆ. ಆದರೆ ಪ್ರತಿಯೊಂದು ಕಾರಣವೂ ಬಾಲಿಷದಂತೆ ಭಾಸವಾಗುತ್ತದೆ ವಿನಃ ಯಾವುದೂ ಗಂಭೀರವಾದದ್ದು ಎಂದು ಅನಿಸುವುದೇ ಇಲ್ಲ. ಮುಂದೊಂದು ದಿನ ಇದರ ಪರಿಣಾಮದಿಂದ ಮದುವೆಯೇ ಬೇಡ ಎಂಬ ಮನಸ್ಥಿತಿ ಬಹುತೇಕರಲ್ಲಿ ಮೂಡಿದರು ಯಾವುದೇ ಸಂದೇಹವಿಲ್ಲ.
ಪ್ರತಿಯೊಂದು ಸಂಬಂಧಗಳ ಭದ್ರ ಬುನಾದಿಯೇ ನಂಬಿಕೆ. ಅಡಿಪಾಯ ಭದ್ರವಾಗಿದ್ದರೆ ಆ ಕಟ್ಟಡ ಸುರಕ್ಷಿತವಾಗಿರುತ್ತದೆ. ಅಂತೆಯೇ ಸಂಬಂಧಗಳ ನಡುವೆ ನಂಬಿಕೆ ಎಂಬ ಅಡಿಪಾಯ ಗಟ್ಟಿಯಾಗಿದ್ದರೆ ಆ ಸಂಬಂಧವು ಕಟ್ಟಡದಂತೆಯೇ ಗಟ್ಟಿಯಾಗಿರುತ್ತದೆ. ಆದರೆ ಇತ್ತೀಚಿಗೆ ಯಾಕೋ ನಂಬಿಕೆ ಪ್ರತಿಯೊಂದು ಸಂಬಂಧಗಳ ನಡುವೆಯೂ ಕುಸಿದು ಬೀಳುತ್ತಿದೆ ಎಂದನಿಸುತ್ತಿದೆ.
ಹಿಂದೆ ಹೆಣ್ಣು ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಕೊಡುವಾಗ ಹಿರಿಯರು ಗಂಡನ ಮನೆಯಲ್ಲಿ ಅದೆಷ್ಟೇ ತೊಡಕುಗಳು ಬಂದರು ಸಹಿಸಿಕೊಂಡು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸು. ಯಾವುದೇ ಕಾರಣಕ್ಕೂ ಮೆಟ್ಟಿದ ಮನೆಯನ್ನು ತೊರೆದು ಬರಬೇಡ ಎಂದು ಬುದ್ಧಿ ಮಾತು ಹೇಳುತ್ತಿದ್ದರು. ಹಾಗೆಯೇ ಹೆಣ್ಣು ಮಕ್ಕಳು ಸಮಾಜಕ್ಕೆ ಅಂಜಿ, ಪರಿವಾರದ ಪ್ರತಿಷ್ಠೆಗಾಗಿ, ಆಡುವವರ ಬಾಯಿಗೆ ಸಿಕ್ಕಿ ಆಹಾರವಾಗಬಾರದು ಎನ್ನುವ ಕಾರಣಕ್ಕೆ ಗಂಡನ ಮನೆಯಲ್ಲಿ ಅದೆಷ್ಟೇ ತೊಂದರೆಗಳಾದರು, ಸಮಸ್ಯೆಗಳು ಎದುರಾದರೂ ಸಹಿಸಿಕೊಂಡು ಎಲ್ಲಾ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿ ಹೊಂದಿಕೊಂಡು ಹೋಗುತ್ತಿದ್ದರು.
ಆದರೆ ಪ್ರಸ್ತುತ ಇಂದಿನ ಕಾಲಘಟ್ಟ ಸಂಪೂರ್ಣವಾಗಿ ಬದಲಾಗಿ ಹೋಗಿವೆ. ಹೆಣ್ಣು ಹೆತ್ತವರು ಆಕೆಗೆ ಬುದ್ಧಿ ಮಾತು ಹೇಳುವ ರೀತಿ ಹೇಗಿದೆ ಎಂದರೆ ನಿನಗೆನಾದರೂ ಅಲ್ಲಿ ಬದುಕಲು ಕಷ್ಟವಾದರೆ ನಮಗೆ ತತ್ಕ್ಷಣ ಕರೆ ಮಾಡಿ ತಿಳಿಸು. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು. ಈ ಮಾತುಕತೆ ನಡೆದ ಮರುದಿನವೇ ಅಳಿಯನಿಗೆ ಲಾಯರ್ ಕಡೆಯಿಂದ ಡಿವೋರ್ಸ್ ನೋಟಿಸ್ ಬರುತ್ತದೆ. ಮುಂದಿನದು ನಮಗೆ ತಿಳಿದೆ ಇದೆ. ಕೋರ್ಟಿನಲ್ಲಿ ಕಲಾಪ. ಕಲಾಪದ ನಡುವೆ ನ್ಯಾಯಮೂರ್ತಿಗಳು ಕೇಳುವ ಪ್ರಶ್ನೆಗೆ ಇಬ್ಬರ ಕಡೆಯಿಂದಲೂ ಬರುವ ಉತ್ತರ ಒಂದೇ. ಜೊತೆಗೆ ಬದುಕಲು ಇಷ್ಟವಿಲ್ಲ, ಹೊಂದಾಣಿಕೆ ಇಲ್ಲ.
ಅಲ್ಲಿಗೆ ತಂದೆ ಅದೆಷ್ಟೋ ವರ್ಷ ಕಷ್ಟಪಟ್ಟು ಕೂಡಿ ಹಾಕಿ ಸಾಲವೋ ಮೂಲವೋ ಮಾಡಿ ಮಾಡಿಸಿದ ಮದುವೆ ಅರೇ ಘಳಿಗೆಯಲ್ಲಿ ನೀರ ಮೇಲೆ ಇಟ್ಟ ಹೋಮದಂತೆ ಆಗುತ್ತದೆ. ಆತನ ನಿಸ್ವಾರ್ಥ ಸೇವೆಗೆ ಮಕ್ಕಳು ನೀಡುವ ಬೆಲೆಯಿದು! ಆತನ ಬೆವರಿನ ದುಡಿಮೆಗೆ ಮಕ್ಕಳು ಕೊಡುವ ಮರ್ಯಾದಿಯಿದು! ಒಂದು ಬಾರಿಯಾದರು ಇದರ ಕುರಿತಾಗಿ ಯೋಚಿಸಿ ತಾಳ್ಮೆಯಿಂದ ಮುಂದುವರೆದರೆ ಇಂಥಹ ಅದೆಷ್ಟೋ ಕೌಟುಂಬಿಕ ಕಲಹಗಳನ್ನು ತಪ್ಪಿಸಬಹುದು. ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ. ಯಾಕೆಂದರೆ ಭೂಮಾತೆಯ ಮೇಲೆ ನಾವು ಎಷ್ಟೇ ಪ್ರಹಾರ ನಡೆಸಿದರು ಆಕೆ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಹೆಣ್ಣು ಹಾಗೆಯೇ. ಸಹನಾ ಮೂರ್ತಿ. ಆದರೆ ಇಂದಿನ ಯುಗದ ಹೆಣ್ಣುಮಕ್ಕಳಲ್ಲಿ ಸಹನೆ ತಾಳ್ಮೆ ಇದೆಯೇ ಎಂದು ಕೇಳಿದರೆ ನಾನು ಕೊಡುವ ಉತ್ತರ ಖಂಡಿತ ಇಲ್ಲ. ಇದ್ದಿದ್ದರೆ ಹೆಣ್ಣು ಮಕ್ಕಳು ಮದುವೆಯಾದ ಮೂರೇ ತಿಂಗಳಿಗೆ ಓಡಿ ಬಂದು ತವರು ಮನೆಯಲ್ಲಿ ಕೂರುವುದಿಲ್ಲ. ಅಥವಾ ಕೂರುವಂತಹ ಪ್ರಮೇಯವೂ ಬರುವುದಿಲ್ಲ. ಅದು ಕೂಡ ಬಾಲಿಶ ಕಾರಣಕ್ಕೆ! ಇದನ್ನು ವಿಪರ್ಯಾಸ ಅನ್ನಬೇಕೋ ಅಥವಾ ನಮ್ಮಲ್ಲಿ ಕುಂಠಿತಗೊಳ್ಳುತ್ತಿರುವ ಸಂಸ್ಕಾರದ ಅಡ್ಡ ಪರಿಣಾಮವೋ ನನಗಂತೂ ತಿಳಿಯುತ್ತಿಲ್ಲ. ಇಲ್ಲಿ ಪ್ರತಿಯೊಂದು ಕೂಡಾ ಆಧುನಿಕವೇ ಆಗುತ್ತಿದೆ. ಜತೆಗೆ ಸಂಬಂಧಗಳು, ಬಾಂಧವ್ಯಗಳು ಎಲ್ಲವೂ. ಇವೆಲ್ಲ ಯಾವುದರ ಮುನ್ಸೂಚನೆಯೋ ಆ ದೇವರೇ ಬಲ್ಲ.
ವೈವಾಹಿಕ ಜೀವನದಲ್ಲಿ ಪರಸ್ಪರ ಪ್ರೀತಿ, ಜಗಳ, ಸಣ್ಣ ಪುಟ್ಟ ಮನಸ್ತಾಪ ಎಲ್ಲವೂ ಸಹಜ. ಹಾಗೆಂದ ಮಾತ್ರಕ್ಕೆ ಪ್ರತಿಯೊಂದು ವಿಷಯಕ್ಕೂ ಕೋಪಿಸಿಕೊಂಡು ತಾಳ್ಮೆ ಕಳೆದುಕೊಂಡು ಕೋರ್ಟ್ ಮೆಟ್ಟಿಲು ಹತ್ತುವುದು ಮೂರ್ಖತನವೇ ಹೊರತು ಬುದ್ಧಿವಂತಿಕೆ ಅಲ್ಲ. ಬುದ್ಧಿ ಇದ್ದವರು ಸಮಾಧಾನದ ಚಿತ್ತದಿಂದ ಯೋಚಿಸಿ ಹದಗೆಟ್ಟಿರುವ ಸಂಬಂಧವನ್ನು ಹೇಗೆ ಗಟ್ಟಿಗೊಳಿಸುವುದು ಎಂದು ನೋಡುತ್ತಾರೆಯೇ ವಿನಃ ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ. ಹಾಗೆ ನೋಡುವುದಾದರೆ ವೈವಾಹಿಕ ಜೀವನದಲ್ಲಿ ಗಂಡು ಹೆಣ್ಣಿನ ನಡುವೆ ನಡೆಯುವ ಪ್ರತಿಯೊಂದು ಕಲಾಪಕ್ಕೂ ಕೋರ್ಟ್ ಮೆಟ್ಟಿಲು ಹತ್ತಿ ವಿಚ್ಚೇದನದ ಮೊರೆ ಹೋದರೆ ದಾಂಪತ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನಮ್ಮ ಕೈಯಲ್ಲೇ ಇರುತ್ತದೆ. ಕೋಪದ ಕೈಗೆ ಬುದ್ಧಿ ಕೊಡದೆ ತಾಳ್ಮೆಯಿಂದ ಯೋಚಿಸಿ ನೋಡಿದರೆ ಕೋರ್ಟ್, ಕೇಸು, ಕಲಾಪ ಎಲ್ಲದಕ್ಕಿಂತಲೂ ಉತ್ತಮವಾದ ಪರಿಹಾರ ಸಿಗುತ್ತದೆ. ಅಲ್ಲಿ ನಮ್ಮ ಸಮಸ್ಯೆಗಳ ಕುರಿತು ವಾದ ಮಂಡನೆ ಮಾಡುವವರು ನಾವೇ. ಸರಿ ತಪ್ಪುಗಳ ತಾಳೆ ಹಾಕಿ ಸೂಕ್ತ ಪರಿಹಾರ ಕೊಡುವ ನ್ಯಾಯಮೂರ್ತಿಗಳು ನಾವೇ. ಇದರಿಂದ ಅದೆಷ್ಟೋ ಸಂಸಾರಗಳು ಕೂಡಾ ಉಳಿಯುತ್ತವೆ. ನಮ್ಮ ಅನನ್ಯ ಸಂಸ್ಕೃತಿಯೂ ಕೂಡಾ ಉಳಿಯುತ್ತದೆ. ಜತೆಗೆ ಹೆತ್ತವರ ಕಣ್ಣಲ್ಲಿ ಕಣ್ಣೀರು ಹಾಕಿಸುವುದು ಕೂಡ ತಪ್ಪುತ್ತದೆ.
-ಸುಶ್ಮಿತಾ ಕೆ ಎನ್ ಅನಂತಾಡಿ