ನೆನಪುಗಳು ಎಂದಾಗ ಮೊದಲು ಕಣ್ಣ ಮುಂದೆ ಬರುವುದು ಬಾಲ್ಯ ಜೀವನ, ಆಟ ಪಾಠ. ಅದೆಷ್ಟು ಸುಂದರ ಆ ದಿನಗಳು. ಯಾವುದೇ ಜವಾಬ್ದಾರಿ, ಮೋಸ ವಂಚನೆ ತಿಳಿಯದೆ ಸಂತೋಷದಿಂದ ಕಳೆದ ಕ್ಷಣಗಳವು. ನಾವು ಮಕ್ಕಳಾಗಿರುವಾಗ ಯಾವಾಗ ದೊಡ್ಡವರಾಗುತ್ತೇವೋ ಎಂದು ಅಂದುಕೊಳ್ಳುತ್ತಿದ್ದೆವು. ಆದರೆ ಈಗ ಮತ್ತದೇ ಆ ಬಾಲ್ಯವೇ ಬೇಕೆಂದೆನಿಸಿದೆ. ಅಪ್ಪ ಅಮ್ಮನ ಜತೆ ಜಗಳವಾಡಿ ಹತ್ತು ರೂಪಾಯಿಯ ನೋಟನ್ನು ತೆಗೆದುಕೊಂಡು ಅದರಲ್ಲಿ ದೊರೆತ ಚಾಕಲೇಟ್ ಅನ್ನು ತನ್ನ ಜತೆ ಇದ್ದ ಗೆಳೆಯರೊಡನೆ ಕೂಡಿ ತಿಂದು ಆನಂದ ಪಟ್ಟ ಆ ಕ್ಷಣಗಳು ಎಂದಿಗೂ ಮಾಸದು. ಮೊದಲ ಬಾರಿಗೆ ಅಪ್ಪ ಅಮ್ಮನನ್ನು ಬಿಟ್ಟು ಶಾಲೆಗೆ ಹೋಗಬೇಕೆಂದರೆ ಮನದಲ್ಲಿ ಅದೇನೋ ಕಸಿವಿಸಿ. ನೀಲಿ ಬಿಳಿ ಸಮವಸ್ತ್ರವನ್ನು ಧರಿಸಿ, ಬ್ಯಾಗಿಗೆ ಪುಸ್ತಕ, ಪೆನ್ಸಿಲ್ ಮುಂತಾದವುಗಳನ್ನು ತುಂಬಿಸಿಕೊಂಡು ಶಾಲೆಗೆ ಹೊರಟಾಗ ಅಮ್ಮನ ಕಣ್ಣೀರ ವಿದಾಯ ಆದರೂ ಮುಖದಲ್ಲೇನೋ ಒಂದು ಮಂದಹಾಸ.
ನಲಿ ಕಲಿ ತರಗತಿಯನ್ನು ಪ್ರವೇಶಿಸಿದಾಗ ಕಂಡ ಹೊಸ ಹೊಸ ಮುಖಗಳಿಂದ ಬೇಸರವಾಗಿ ಕಣ್ಣೀರು ಹಾಕಿದಾಗ ಟೀಚರ್ ಬಂದು ಸಮಾಧಾನಪಡಿಸಿ ಇವರೆಲ್ಲರೂ ನಿನ್ನ ಸ್ನೇಹಿತರು ಎಂದು ಹೇಳಿದಾಗ ಹೆಸರು ಹೇಳಿ ಎಲ್ಲರನ್ನೂ ಪರಿಚಯಿಸಿಕೊಂಡು, ಟೀಚರ್ ತರಗತಿ ಒಳಗೆ ಪ್ರವೇಶಿಸಿದಾಗ ರಾಗಮಯವಾಗಿ ವಿಶ್ ಮಾಡಿ ಅವರನ್ನು ಸ್ವಾಗತಿಸುತ್ತಿದ್ದೆವು. ಸಣ್ಣ ಸಣ್ಣ ವಿಷಯಕ್ಕೆ ಟೀಚರಿಗೆ ಹೋಗಿ ದೂರು ಹೇಳುವುದು, ಬೇರೆಯವರ ಬ್ಯಾಗಿನಿಂದ ಹೋಗಿ ಕದಿಯುತ್ತಿದ್ದ ಪೆನ್ಸಿಲ್ಗಳು, ಒಂದು ಪೆನ್ಸಿಲ್ ಬದಲಿಗೆ ಎರಡು ಪೆನ್ಸಿಲ್ ಅನ್ನು ಮನೆಗೆ ತೆಗೆದುಕೊಂಡು ಹೋದಾಗ ಅಪ್ಪ ಬೆಲ್ಟಿನಿಂದ ಹೊಡೆದ ಸಂದರ್ಭವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಶಾಲೆಯಲ್ಲಿ ಸಿಗುತ್ತಿದ್ದ ಮಧ್ಯಾಹ್ನದ ಬಿಸಿ ಊಟ ಆಹಾ ಅದೆಷ್ಟು ರುಚಿ. ಸಂಜೆಯಾದ ಕೂಡಲೇ ಮೈದಾನಕ್ಕೆ ಆಡಲು ಓಡಿ ಬಿಡುತ್ತಿದ್ದೆವು.
ಯಾವುದೇ ಭೇದ ಭಾವಗಳಿಲ್ಲದೆ ಆಟವಾಡಿದ ದಿನಗಳವು. ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ ನಾವು ದಿನ ಕಳೆದಂತೆ ಬೆಳಗ್ಗೆ ಯಾವಾಗ ಆಗುತ್ತದೋ ಎಂದು ಚಡಪಡಿಸುತ್ತಿದ್ದೆವು. ಸ್ವಾತಂತ್ರೋತ್ಸದ ದಿನದಂದು ಅಪ್ಪನೊಂದಿಗೆ ಹಠ ಮಾಡಿ ಬಾವುಟವನ್ನು ತೆಗೆದುಕೊಂಡು ಸಮವಸ್ತದ ಮೇಲೆ ತ್ರಿವರ್ಣದ ಬ್ಯಾಜ್ ಅನ್ನು ಸಿಕ್ಕಿಸಿಕೊಂಡು ಶಾಲೆಗೆ ಹೋಗಿ ಧ್ವಜೋಹರಣವಾದ ಮೇಲೆ ಬ್ಯಾಂಡ್ ಭಾರಿಸಿಕೊಂಡು ಸ್ವಾತಂತ್ರಕ್ಕೋಸ್ಕರ ಹೋರಾಡಿದ ಮಹಾನ್ ವೀರರ ಹೆಸರನ್ನು ಕೂಗಿ ಜೈಕಾರ ಹಾಕುತ್ತಾ ದೇವಸ್ಥಾನಕ್ಕೆ ಹೋಗಿ ಬ್ರಹ್ಮ ಮುರಾರಿ ಶ್ಲೋಕವನ್ನು ಹೇಳಿ ಕೊನೆಗೆ ಸಿಹಿಯನ್ನು ವಿತರಿಸಿದಾಗ ಕೊಟ್ಟ ಎರಡು ಲಡ್ಡಲ್ಲಿ ಒಂದನ್ನು ತಿಂದು ಇನ್ನೊಂದನ್ನು ಕರ್ಚಿಫಲ್ಲಿ ಕಟ್ಟಿಕೊಂಡು ಮನೆಗೆ ಓಡಿ ಹೋಗಿ ಅಮ್ಮನಿಗೆ ಕೊಟ್ಟಾಗ ಅದನ್ನು ಖುಷಿಯಿಂದ ಸ್ವೀಕರಿಸುತ್ತಿದ್ದಳು.
ಮಳೆಗಾಲದಂದು ರೈನ್ ಕೋಟನ್ನು ಧರಿಸಿ ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬರುವ ರಭಸದಲ್ಲಿ ಬಿದ್ದು ರೈನ್ ಕೋಟು ಹರಿದಾಗ ಅಪ್ಪನ ಕೈಯಿಂದ ಸಿಗುತ್ತಿದ್ದ ಕೋಲಿನ ಏಟು, ಕೆಸರಿನಲ್ಲಿ ಆಟವಾಡಿ ಬಟ್ಟೆಯನ್ನು ಕೊಳೆ ಮಾಡಿಕೊಂಡು ಬಂದಾಗ ಅಮ್ಮ ಬೈಯುತ್ತಿದ್ದ ಸಂದರ್ಭಗಳು, ಪರೀಕ್ಷೆಯ ದಿನದಂದು ಓದಲು ತಡವರಿಸಿದಾಗ ಅಕ್ಕ ತಲೆಗೆ ಎರಡೇಟು ಹೊಡೆದ ದಿನಗಳನ್ನು ಇಂದಿಗೂ ಮೆಲುಕು ಹಾಕುತ್ತೇವೆ. ಏಪ್ರಿಲ್ ಹತ್ತು ಎಂದಾಗ ಅದು ಪಾಸ್ ಫೈಲ್ ದಿನ. ಅಂದು ಖುಷಿಯಿಂದ ಅಂಗಡಿಗೆ ಹೋಗಿ ಐವತ್ತು ಪೈಸೆಯ ಚಾಕಲೇಟ್ ಅನ್ನು ತೆಗೆದುಕೊಂಡು ಶಾಲೆಗೆ ಹೋಗಿ ಪಾಸ್ ಎಂದು ಗೊತ್ತಾದಾಗ ಬರುವ ದಾರಿಯಲ್ಲಿ ಸಿಕ್ಕವರಿಗೆಲ್ಲ ನಾನು ಪಾಸ್ ಎಂದು ಹೇಳಿ ಕೈಯಲ್ಲಿದ್ದ ಚಾಕಲೇಟ್ ಅನ್ನು ಕೊಡುತ್ತಿದ್ದ ಆ ದಿನಗಳು ಇಂದು ನೆನಪಾಗಿ ಉಳಿದಿದೆ. ರಜೆ ಎಂದ ಕೂಡಲೇ ಅಜ್ಜಿ ಮನೆಗೆ ಓಡಿ ಹೋಗುತ್ತಿದ್ದೆವು. ಅಲ್ಲಿ ಒಂದಿಷ್ಟು ದಿನ ಕಳೆದು ಮರಳಿ ಮನೆಗೆ ಹಿಂತಿರುವಾಗ ಅಜ್ಜಿ ನಮ್ಮ ಬಳಿ ಬಂದು ಯಾರಿಗೂ ಕಾಣದಂತೆ ನೂರು ರೂಪಾಯಿಯ ನೋಟನ್ನು ಕೈಯಲ್ಲಿ ಇಟ್ಟು ಯಾರಿಗೂ ಹೇಳ ಬೇಡ ಎಂದು ಹೇಳುತ್ತಿದ್ದಳು. ಜೋಕಾಲಿ, ಲಗೋರಿ, ಕುಂಟೆ ಬಿಲ್ಲೆ, ಮರಕೋತಿ, ಕಳ್ಳ ಪೊಲೀಸ್ ಮುಂತಾದ ಆಟಗಳನ್ನು ಆಡಿ ಉಳಿದ ರಜಾ ದಿನವನ್ನು ಕಳೆಯುತ್ತಿದ್ದೆವು. ಮೊಬೈಲ್ ಬಂದ ಮೇಲೆ ಈಗಿನ ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಮರೆತು ಬಿಟ್ಟಿದ್ದಾರೆ. ಓದಲೆಂದು ದೂರದ ಊರಿಗೆ ಹೋದ ಬಾಲ್ಯದ ಗೆಳೆಯರು ದಾರಿ ಮಧ್ಯೆ ಸಿಕ್ಕಾಗ ನಮ್ಮೊಡನೆ ಇದ್ದ ಸ್ನೇಹಿತರೊಡನೆ ಅವಳು ಅವನು ನನ್ನ ಚಡ್ಡಿ ದೋಸ್ತ್ ಲಂಗ ದೋಸ್ತ್ ಎಂದು ಪರಿಚಯಿಸಿಕೊಳ್ಳುತ್ತೇವೆ ಅಲ್ಲವೇ. ಪರಿಚಯ ಹಳೆಯದಾದರೂ ಅವರು ಸಿಕ್ಕಿ ನಮ್ಮೊಡನೆ ಮಾತನಾಡಿದಾಗ ಮನಸ್ಸಿಗೆ ಅದೇನೋ ತೃಪ್ತಿ.ಬಾಲ್ಯದ ದಿನಗಳು ಎಷ್ಟು ವಿಶೇಷವೋ ಬಾಲ್ಯದ ಗೆಳೆಯರು ಕೂಡ ಅಷ್ಟೇ ವಿಶೇಷ. ನೆನಪು ಎಂಬುವುದು ಎಂದಿಗೂ ಶಾಶ್ವತ.
- ಲಾವಣ್ಯ,
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು