ಮಂಗಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ 40,000 ಮಂದಿಗೆ ಉದ್ಯೋಗವಕಾಶ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಪ್ರಥಮ ಹಂತದಲ್ಲಿ 10,000 ಮಂದಿಗೆ ಉದ್ಯೋಗ ನೀಡುವ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯಗತ ಮಾಡಲಾಗುವುದು ಎಂದು ಎಂಆರ್ ಜಿ ಗ್ರೂಪ್ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿಯವರು ಹೇಳಿದರು.
ಪಡುಬಿದ್ರಿ ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಪಡುಬಿದ್ರಿ ಬಂಟರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುವಕರಿಗೆ, ಯುವತಿಯರಿಗೆ ಒಂದು ದಿನದ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಎಂ.ಆರ್ ಜಿ ಗ್ರೂಪ್ ನಲ್ಲಿ 4 ಸಾವಿರ ಮಂದಿ ಉದ್ಯೋಗಿಗಳಿದ್ದು, 4 ವರ್ಷದಲ್ಲಿ 8 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ದೇಶದ ಆಸ್ತಿಯಾಗಿರುವ ಯುವ ಪೀಳಿಗೆ ವಿದ್ಯೆಯೊಂದಿಗೆ ಪ್ರಜ್ಞಾವಂತಿಗೆ ಬೆಳೆಸಿಕೊಳ್ಳಬೇಕು. ಸವಾಲು ಸ್ವೀಕರಿಸಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದರು.
ಮಂಗಳೂರಿನ ಉದ್ಯಮಿ ಮೈತ್ರಿ ಮಲ್ಲಿ, ಪ್ರೊ. ದಿವ್ಯರಾಣಿ ಪ್ರದೀಪ್, ಸಿ.ಕೆ. ಮಂಜುನಾಥ್, ಶುಭ ಮಾಹೆ, ಪ್ರವೀಣ್ ಶೆಟ್ಟಿ, ಎಂಐಟಿ ಸುಧೀರ್ ರಾಜ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಹರೀಶ್ ಅವರು ಲೀಡರ್ ಶಿಪ್, ಕಮ್ಯುನಿಕೇಷನ್ ಸ್ಕಿಲ್, ಸಂದರ್ಶನ ತಯಾರಿ, ಬ್ಯಾಂಕ್ ಗಳಿಂದ ಉದ್ಯಮ ಮಾಡಲು ಸಿಗುವ ಸಹಾಯ ಕುರಿತು ತರಬೇತಿ ನೀಡಿದರು. ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಪ್ರಮಾಣಪತ್ರ ವಿತರಿಸಲಾಯಿತು.
ಪಡುಬಿದ್ರಿ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಶಿಧರ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ರವೀಂದ್ರನಾಥ್ ಜಿ.ಹೆಗ್ಡೆ, ಸುರೇಶ್ ಶೆಟ್ಟಿ, ಸಾಂತೂರು ಭಾಸ್ಕರ್ ಶೆಟ್ಟಿ, ನವೀನ್ ಚಂದ್ರ ಜೆ.ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ, ಪದ್ಮನಾಭ ಹೆಗ್ಡೆ ಇದ್ದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಉಡುಪಿ ಗ್ರಾಮೀಣ ಬಂಟರ ಸಂಘ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಶೆಟ್ಟಿ ಪದ್ರ ನಿರೂಪಿಸಿದರು.