ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಇದರ ಆಡಳಿತ ಮಂಡಳಿಯ ಸಭೆಯು ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೂಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ತೋನ್ಸೆ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ, ಕನ್ಯಾನ ಸದಾಶಿವ ಶೆಟ್ಟಿ ಹವಾ ನಿಯಂತ್ರಿತ ಸಭಾಂಗಣ ರಚನೆಯಾಗಲಿದೆ ಎಂದರು. ಸುಮಾರು 1,200 ಆಸನಗಳ ಸೌಲಭ್ಯ ಇರುವ ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣವನ್ನು ನಿರ್ಮಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 2025 ರ ಎಪ್ರಿಲ್ ತಿಂಗಳಲ್ಲಿ ಸಭಾಂಗಣವನ್ನು ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಲಾಗುವುದು. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಒಂದು ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದ ಅಗತ್ಯ ಇದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ದಾನಿಗಳ ನೆರವಿನಿಂದ ನಿರ್ಮಾಣ ಆಗುತ್ತಿರುವ ಹವಾ ನಿಯಂತ್ರಿತ ಸಭಾಂಗಣದ ಕಟ್ಟಡವು ವೇಗವನ್ನು ಪಡೆಯಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರವೂ ಇದೆ. ಜೊತೆಗೆ ಎಲ್ಲಾ ದಾನಿಗಳು ಕೈಜೋಡಿಸಿ ಸಹಕಾರ ನೀಡಬೇಕು. ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದಿಂದ ಸಾಮಾನ್ಯ ಜನರಿಗೂ ಪ್ರಯೋಜನ ಆಗಬೇಕು. ಸಮಾಜವನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಇದು ನನ್ನ ಯೋಗ, ಭಾಗ್ಯ. ಸಭಾಂಗಣದ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕೆಂದರು.
ಮುಖ್ಯ ಅತಿಥಿ ಸವಣೂರು ಸೀತಾರಾಮ ರೈ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿ, ಕೆ ಪ್ರಕಾಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವೆಯನ್ನು ಯಾವಾಗಲೂ ಸ್ಮರಿಸುವಂತದ್ದು. ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಇಂತಹ ನಾಯಕರನ್ನು ಪಡೆದ ಬಂಟ ಸಮಾಜ ಯಾವತ್ತೂ ಅವರಿಗೆ ಚಿರಋಣಿಯಾಗಿರುತ್ತದೆ ಎಂದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಶಶಿಧರ ಶೆಟ್ಟಿ ಇನ್ನಂಜೆ, ಡಾ| ಆರ್ ಕೆ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.
ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ವೇಣುಗೋಪಾಲ್ ಶೆಟ್ಟಿ ಥಾಣೆ, ರತ್ನಾ ಪಿ ಶೆಟ್ಟಿ ಮುಂಬಯಿ, ಅಜಿತ್ ಹೆಗ್ಡೆ ಪೂನಾ, ಗಿರೀಶ್ ಶೆಟ್ಟಿ ತೆಳ್ಳಾರು, ನಾಗೇಶ್ ಹೆಗ್ಡೆ ಉಡುಪಿ, ಹರಿಪ್ರಸಾದ್ ರೈ ಉಡುಪಿ, ಲೋಕೇಶ್ ಶೆಟ್ಟಿ ಬಂಟ್ವಾಳ, ಶ್ರೀಧರ ಶೆಟ್ಟಿ ಬ್ರಹ್ಮಾವರ, ಸುರೇಶ್ ರೈ ಮಕರ ಜ್ಯೋತಿ, ಸಿಎ ದಯಾಚರಣ್ ಶೆಟ್ಟಿ, ವಕೀಲ ಪೃಥ್ವಿರಾಜ ರೈ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಕ್ಷಣ್ ಶೇಖ ಸಾಲೆತ್ತೂರು ಅವರನ್ನು ಒಕ್ಕೂಟದ ಅಧ್ಯಕ್ಷರು ಸನ್ಮಾನಿಸಿದರು.