ಯಕ್ಷಗಾನ ಎಂದರೆ ನನಗೆ ಅಪಾರ ಪ್ರೀತಿ. ತಾಳಮದ್ದಳೆಯಲ್ಲಿ ನಾನು ಕಲಾವಿದನಾಗಿಯೂ ಭಾಗವಹಿಸಿದ್ದೇನೆ. ಊರಿನಲ್ಲಿ ವರ್ಷಂಪ್ರತಿ ನಾವು ಯಕ್ಷಗಾನವನ್ನು ಹಮ್ಮಿಕೊಂಡು ಬಂದಿರುತ್ತೇವೆ. ಯಕ್ಷಗಾನ ಕ್ಷೇತ್ರವನ್ನು ನಾವು ಗಟ್ಟಿಗೊಳಿಸುವ ಅಗತ್ಯವಿದೆ. ಯಕ್ಷಗಾನದಿಂದ ವ್ಯಕ್ತಿತ್ವ ವಿಕಸನ ಹಾಗೂ ಮನಶಾಂತಿ ನಮಗೆ ದೊರೆಯುತ್ತದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ನಮ್ಮ ಕಲೆ ಸಂಸ್ಕೃತಿಯ ಅರಿವು ಮೂಡಿಸಿ ಉತ್ತಮ ಸಂಸ್ಕಾರವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ. ತಂದೆ ತಾಯಂದಿರ ಸೇವೆಯನ್ನು ಮಾಡುವುದೇ ಮಕ್ಕಳು ತಮ್ಮ ಜೀವನದಲ್ಲಿ ಮಾಡುವ ದೊಡ್ಡ ಸಾಧನೆ ಆಗುತ್ತದೆ ಎಂದು ಉದ್ಯಮಿ, ಸಮಾಜಸೇವಕ ಮುಂಡಪ್ಪ ಪಯ್ಯಡೆ ನುಡಿದರು. ಅವರು ಆಗಸ್ಟ್ 7 ರ ಬುಧವಾರದಂದು ಭಾಯಂದರ್ ಪೂರ್ವದ ಕ್ರೌನ್ ಬಿಸಿನೆಸ್ ಹೋಟೆಲ್ ನ ಅಶ್ವಿನಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಂಟ್ಸ್ ಫೋರಮ್ ಮೀರಾ ಭಾಯಂದರ್ ಆಯೋಜಿಸಿದ್ದ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿಯ ತವರೂರ ಕಲಾವಿದರ ಕೂಡುವಿಕೆಯಲ್ಲಿ ಸಾದರ ಪಡಿಸಲಾದ ‘ಭೀಷ್ಮ- ವಿಜಯ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದ ಮಧ್ಯೆ ಜರಗಿದ ಸನ್ಮಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ದೀಪವನ್ನು ಪ್ರಜ್ವಲಿಸಿ ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ್ ಭಟ್ ಮಾತನಾಡಿ, ಬಂಟ್ಸ್ ಫೋರಮ್ ಸಂಸ್ಥೆಯು ಸಮಾಜಪರ ಸೇವೆಯೊಂದಿಗೆ ಕಲಾ ಸೇವೆ ಹಾಗೂ ಶೈಕ್ಷಣಿಕ ಸೇವೆಯನ್ನು ಮಾಡುತ್ತಿರುವುದು ಅಭಿನಂದನೀಯ. ಯಕ್ಷಗಾನದಿಂದ ಸಂಸ್ಕಾರ ಪ್ರಾಪ್ತಿಯಾಗುತ್ತದೆ. ಹೆಣ್ಣು ಮಕ್ಕಳು ಶಿಸ್ತಿನ ಜೀವನದೊಂದಿಗೆ ಕೈಗೆ ಬಳೆ, ಹಣೆಗೆ ಬೊಟ್ಟು ಹಾಕುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.
ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ ಮಾತನಾಡಿ, ಪ್ರಸ್ತುತ ಯಕ್ಷಗಾನ ತಾಳಮದ್ದಳೆಗಳು ನಮ್ಮೂರಿಗಿಂತಲೂ ಹೆಚ್ಚಾಗಿ ಈ ಮುಂಬಯಿ ಮಹಾನಗರದಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದರೂ ತಪ್ಪಾಗಲಾರದು. ಯಕ್ಷಗಾನ ಸದ್ಯ ಗಂಡು ಕಲೆಯಾಗಿ ಉಳಿದಿಲ್ಲ. ಹೆಣ್ಣು ಮಕ್ಕಳು, ಮಹಿಳೆಯರು ಕೂಡಾ ಯಕ್ಷಗಾನದ ಮೇಲೆ ಆಸಕ್ತಿಯನ್ನು ವಹಿಸುತ್ತಿದ್ದಾರೆ. ಕಲಾವಿದರಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇದರ ಶ್ರೇಯಸ್ಸು ಯಕ್ಷ ಗುರುಗಳಿಗೆ ಸಲ್ಲುತ್ತದೆ ಎಂದರು. ಉಪಸ್ಥಿತರಿದ್ದ ಸಮಾಜ ಸೇವಕಿ ತನುಜಾ ವಿರ್ ಕರ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಬಂಟ್ಸ್ ಫೋರಮ್ ನ ಅಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರಬೀಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಸಂಸ್ಥೆಯ ಮುಂದಿನ ಸೇವಾ ಕಾರ್ಯಗಳಿಗೆ, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದರು. ಈ ಸಂದರ್ಭದಲ್ಲಿ ಭಾಗವತ ಬಲಿಪ ಶಿವಶಂಕರ್ ಭಟ್ ಮತ್ತು ಅರ್ಥಧಾರಿ ಯಕ್ಷಗಾನ ಕಲಾವಿದ ಸಂಪಾಜೆ ಜಬ್ಬಾರ್ ಸುಮೋರವರನ್ನು ಸನ್ಮಾನಿಸಲಾಯಿತು. ಅಲ್ಲದೇ ಇತ್ತೀಚೆಗೆ ಸಿಎ ಪದವಿ ಪಡೆದ ಶ್ರೀರಕ್ಷಾ ಶೆಟ್ಟಿ, ಎಸ್ ಎಸ್ ಸಿಯಲ್ಲಿ 98 ಪ್ರತಿಶತ ಅಂಕ ಗಳಿಸಿದ ಪೂರ್ಣಾ ಎಸ್. ಶೆಟ್ಟಿ, ಪ್ರಶಸ್ತಿ ಗಳಿಸಿದ ಫುಟ್ಬಾಲ್ ಆಟಗಾರ ಸಮರ್ಥ ರೈ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಪತ್ರಗಳನ್ನು ಮಲ್ಲಿಕಾ ಶೆಟ್ಟಿ, ಯೋಗಿನಿ ಶೆಟ್ಟಿ, ಪ್ರತಿಭಾ ಶೆಟ್ಟಿ ಶರ್ಮಿಳಾ ಶೆಟ್ಟಿ, ಸುಜಾತಾ ಶೆಟ್ಟಿ, ವಾಚಿಸಿದರು. ವೇದಿಕೆಯಲ್ಲಿ ಅತಿಥಿ ಆನಂದ್ ಶೆಟ್ಟಿ ಮಿಲಿ, ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ಇನ್ನ, ಸಂಚಾಲಕ ಅನಿಲ್ ಆರ್. ಶೆಟ್ಟಿ ಎಲ್ಲೂರು ಒಡಿಪರಗುತ್ತು, ಉಪಾಧ್ಯಕ್ಷ ದಿವಾಕರ್ ಶೆಟ್ಟಿ ಶಿರ್ಲಾಲು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಕವಾನಿ ಡಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ. ಶೆಟ್ಟಿ, ಜೊತೆ ಕೋಶಾಧಿಕಾರಿ ಮಧುಕರ್ ಎಸ್. ಶೆಟ್ಟಿ ಅಜೆಕಾರು, ಕಾರ್ಯಕ್ರಮದ ಸಂಯೋಜಕ ಪ್ರಸಾದ್ ವಿ. ಶೆಟ್ಟಿ ನೀರೆ ಬೈಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಟ, ನಿರ್ದೇಶಕ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿದರು. ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು ವಂದಿಸಿದರು. ಸಂಸ್ಥೆಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಮಾಜಿ ನಗರ ಸೇವಕ ಅರವಿಂದ್ ಆನಂದ ಶೆಟ್ಟಿ, ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಹಿರಿಯ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.