ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇವರ ಆಶ್ರಯದಲ್ಲಿ ‘ಸೋಣಡೊಂಜಿ ಬಂಟರೆ ಸೇರಿಗೆ’, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರವು ಆಗಸ್ಟ್ 18ರಂದು ನೆಲ್ಯಾಡಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು, ನೆಲ್ಯಾಡಿ ವಲಯ ಬಂಟರ ಸಂಘದ ಮೇಲೆ ಅಭಿಮಾನ, ನಂಬಿಕೆ, ಪ್ರೀತಿ, ವಿಶ್ವಾಸವಿದೆ. ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ಬಂಟ ಬಾಂಧವರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಲಯದಲ್ಲಿ ಬಡವರಿಗೆ ಮನೆ ನಿರ್ಮಾಣ, ಮದುವೆ, ಚಿಕಿತ್ಸೆಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ನೆಲ್ಯಾಡಿ ವಲಯ ಬಂಟರ ಸಂಘ ಎಲ್ಲರಿಗೂ ಮಾದರಿಯಾಗಿದೆ. ಈ ರೀತಿಯ ಕಾರ್ಯಕ್ರಮ ಎಲ್ಲಾ ವಲಯಗಳಲ್ಲೂ ಆಗಬೇಕು ಎಂದು ಹೇಳಿದರು. ಏಳು ಜನ್ಮದ ಪುಣ್ಯದ ಫಲವಾಗಿ ಬಂಟ ಸಮುದಾಯದಲ್ಲಿ ಹುಟ್ಟಿದ್ದೇವೆ. ಬಂಟ ಸಮುದಾಯದಲ್ಲಿ ನಾಯಕತ್ವಕ್ಕೆ ಯಾವುದೇ ಕೊರತೆ ಇಲ್ಲ. ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಎಂದು ಹೇಳಿದ ಅವರು, ಪುತ್ತೂರಿನಲ್ಲಿ ಬಂಟರ ಸಂಘದಿಂದ ದೊಡ್ಡ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದೆ ಇದರಿಂದ ಬರುವ ಲಾಭದಲ್ಲಿ ಒಂದಂಶವನ್ನು ಸಮಾಜದ ಬಡವರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು. ನೆಲ್ಯಾಡಿ ವಲಯದಲ್ಲೂ ಜಾಗ ಖರೀದಿಸಿ ಸ್ವಂತ ಸಭಾಭವನ ಕಚೇರಿ ಆಗಬೇಕೆಂದು ಹೇಳಿದರು.
ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರು, ಸೋಣಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮವನ್ನು ಆಯೋಜಿಸಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆ ನೆಲ್ಯಾಡಿ ಬಂಟರ ಸಂಘದ ಕಾರ್ಯಕ್ರಮವು ಸ್ವಂತ ಸಭಾಭವನದಲ್ಲಿ ಆಗಬೇಕು. ಈ ವಲಯ ಇನ್ನಷ್ಟೂ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಲಿ. ದೇಶ ವಿದೇಶಗಳಲ್ಲೂ ಹೆಸರು ಗಳಿಸಲಿ ಎಂದು ಹಾರೈಸಿದರು.
ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆ ಅವರು, ಸಂಘಟನೆಯಲ್ಲಿ ನೆಲ್ಯಾಡಿ ವಲಯ ಬಂಟರ ಸಂಘ ಮುಂಚೂಣಿಯಲ್ಲಿದೆ. ತಾಲೂಕು ಬಂಟರ ಸಂಘದ ಚಟುವಟಿಕೆಗಳಲ್ಲೂ ನೆಲ್ಯಾಡಿ ವಲಯದ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಂಘಟನೆ ಇನ್ನಷ್ಟೂ ಬಲಿಷ್ಠಗೊಳ್ಳಲಿ ಎಂದರು. ಅತಿಥಿಯಾಗಿದ್ದ ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಬಂಟರಲ್ಲಿ ಒಗ್ಗಟ್ಟು ಇರಬೇಕು. ಪುತ್ತೂರು ತಾಲೂಕಿನ ಎಲ್ಲಾ ಗ್ರಾಮ, ವಲಯಗಳಲ್ಲೂ ಚಟುವಟಿಕೆಗಳು ನಡೆಯುತ್ತಿರಬೇಕು. ಇದರಿಂದ ಬಂಟ ಬಾಂಧವರ ಪರಿಚಯ ಸಂಘಟನೆಯಾಗಲಿದೆ ಎಂದು ಹೇಳಿದ ಅವರು ನೆಲ್ಯಾಡಿ ವಲಯ ಬಂಟರ ಸಂಘದ ವಿದ್ಯಾನಿಧಿಗೆ ದೇಣಿಗೆ ಹಸ್ತಾಂತರಿಸಿದರು. ಇನ್ನೋರ್ವ ಅತಿಥಿ ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿಯವರು, ಇಲ್ಲಿ ಹಿರಿಯರು ಕಿರಿಯರನ್ನು ಒಟ್ಟಾಗಿ ಸೇರಿಸಿಕೊಂಡು ನೆಲ್ಯಾಡಿ ವಲಯದಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಯಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ವಲಯದ ಬಂಟರ ಸಂಘದ ಅಧ್ಯಕ್ಷರಾದ ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು ಮಾತನಾಡಿ, 2014 ರಲ್ಲಿ ನೆಲ್ಯಾಡಿ ವಲಯ ಬಂಟರ ಸಂಘವನ್ನು ಪುನಶ್ಚೇತನಗೊಳಿಸಿ ಉತ್ತಮ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಂಘಟನೆ ನಿಟ್ಟಿನಲ್ಲಿ ವಲಯದ ಬಂಟ ಸಮಾಜದವರ ಪ್ರತಿ ಮನೆಗೂ ಭೇಟಿ ನೀಡಿದ್ದೇವೆ. ಮಾತೃ ಸಂಘ, ತಾಲೂಕು ಸಂಘದಲ್ಲೂ ನೆಲ್ಯಾಡಿ ವಲಯ ಬಂಟರ ಸಂಘದ ಪದಾಧಿಕಾರಿಗಳಿಗೆ ಸ್ಥಾನ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಇದರಿಂದ ಸಂಘ ಇನ್ನಷ್ಟು ಬಲಿಷ್ಠಗೊಳ್ಳಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಉಪ್ಪಿನಂಗಡಿ ವಲಯ ಉಪಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ರವರು, ಮಾತೃ ಸಂಘ ಹಾಗೂ ಪುತ್ತೂರು ತಾಲೂಕು ಬಂಟರ ಸಂಘದ ಮಾರ್ಗದರ್ಶನದಲ್ಲಿ ಆರಂಭಗೊಂಡ ನೆಲ್ಯಾಡಿ ವಲಯ ಬಂಟರ ಸಂಘವು ಹಲವಾರು ಸಾಮಾಜಿಕ ಚಟುವಟಿಕೆ ನಡೆಸಿದೆ. ಮನೆ ನಿರ್ಮಾಣ, ಮದುವೆ, ಚಿಕಿತ್ಸೆಗೆ ನೆರವು ಸೇರಿದಂತೆ ಇಲ್ಲಿಯ ತನಕ ಸುಮಾರು 30 ಲಕ್ಷ ರೂ. ಧನಸಹಾಯ ನೀಡಿದೆ. ನೆಲ್ಯಾಡಿ ವಲಯದಲ್ಲಿ ಶ್ರೀಮಂತರಿಲ್ಲದಿದ್ದರೂ ಹೃದಯ ಶ್ರೀಮಂತಿಕೆಯ ಬಂಟರು ಇದ್ದಾರೆ. ಬಂಟರಲ್ಲಿ ಹಂಚಿ ತಿನ್ನುವ ಮನೋಭಾವ ಇದೆ. ಮುಂದೆಯೂ ಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಸಂಘಟನೆ ಬಲಿಷ್ಠಗೊಳಿಸಲಾಗುವುದು ಎಂದರು. ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ವಿಶ್ವನಾಥ ಶೆಟ್ಟಿ ಹಾಗೂ ವಲಯ ಬಂಟರ ಕಲಾ ಪ್ರತಿಭೆಗಳಿಂದ ‘ಲಹರಿ ಸಂಗೀತ ರಸಮಂಜರಿ’ ನೃತ್ಯ, ಹಾಡು ಮನೋರಂಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ನೆಲ್ಯಾಡಿ ವಲಯ ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು, ಬಂಟ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಹ ಭೋಜನ ನಡೆಯಿತು.
ಈ ಸಂಧರ್ಭದಲ್ಲಿ ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಮಾತೃ ಸಂಘದ ನಿರ್ದೇಶಕಿ ವಾಣಿ ಸುಂದರ ಶೆಟ್ಟಿ, ನೆಲ್ಯಾಡಿ ವಲಯ ಬಂಟರ ಸಂಘದ ಕೋಶಾಧಿಕಾರಿ ಆನಂದ ಶೆಟ್ಟಿ ಇಚ್ಲಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರವೀಣ್ ಭಂಡಾರಿ ಪುರ, ಭಾಸ್ಕರ ರೈ ತೋಟ, ರಮೇಶ್ ಶೆಟ್ಟಿ ಬೀದಿ, ಚಂದ್ರಶೇಖರ, ವಾಣಿ ಸದಾನಂದ ಶೆಟ್ಟಿ, ಅನಿಲ್ ರೈ ಹಾರ್ಪಳ, ಐತ್ತಪ್ಪ ಶೆಟ್ಟಿ, ರಘುನಾಥ ಶೆಟ್ಟಿ ಕಡೆಂಬಿಲ, ಜಯಾನಂದ ಶೆಟ್ಟಿ ಸೌಜನ್ಯ ಮತ್ತಿತರು ಅತಿಥಿಗಳಿಗೆ ಶಾಲು ಹಾಕಿ ಹೂ ನೀಡಿ ಸ್ವಾಗತಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀ ಮಾತಾ ಸ್ವಾಗತಿಸಿ, ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋಂತಿಲ ವಂದಿಸಿದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು ಭೂಮಿಕಾ ಪ್ರಾರ್ಥಿಸಿದರು.