ಕೇಶಿ ಕುದುರೆ ರೂಪದ ರಾಕ್ಷಸ. ಈತ ವಿಷ್ಣುವಿನ ಅವತಾರವಾದ ಕೃಷ್ಣನಿಂದ ಕೊಲ್ಲಲ್ಪಟ್ಟಿರುತ್ತಾನೆ. ಕೇಶಿಯ ವಧೆಯ ಕಥೆಯನ್ನು ಭಾಗವತ ಪುರಾಣ, ವಿಷ್ಣು ಪುರಾಣ ಮತ್ತು ಹರಿವಂಶದಲ್ಲಿ ಹೇಳಲಾಗಿದೆ. ಕೃಷ್ಣನ ಮಾವ ಕಂಸ, ಕೃಷ್ಣ, ಬಲರಾಮನನ್ನು ಕೊಲ್ಲಲು ಈ ರಾಕ್ಷಸನನ್ನು ಕಳುಹಿಸಿರುತ್ತಾನೆ. ಮಥುರೆಯ ರಾಜನಾದ ಕಂಸನಿಗೆ ಕೃಷ್ಣನಿಂದ ಮರಣ ಅಂತ ಶರೀರವಾಣಿ ಆದಂದಿನಿಂದ ಕಂಸನು ತನ್ನ ಮರಣವನ್ನು ತಪ್ಪಿಸುವ ಪ್ರಯತ್ನದಲ್ಲಿ, ಅನೇಕ ರಾಕ್ಷಸರನ್ನು, ಕೃಷ್ಣನನ್ನು ಕೊಲ್ಲಲು ಗೋಕುಲಕ್ಕೆ ಕಳುಹಿಸುತ್ತಾನೆ. ಅಲ್ಲಿ ಕೃಷ್ಣನು ತನ್ನ ಸಾಕು ತಂದೆ ತಾಯಿಯರಾದ ನಂದಗೋಪ ರೋಹಿಣಿಯರೊಂದಿಗೆ ವಾಸಿಸುತ್ತಿರುತ್ತಾನೆ. ದೇವಕಿಯ ಮಗು ಎಂದು ತಪ್ಪಾಗಿ ಭಾವಿಸಿ ಕಂಸ ಕೊಲ್ಲಲು ಯತ್ನಿಸಿದ ಹೆಣ್ಣು ಮಗು ವಾಸ್ತವವಾಗಿ ಕೃಷ್ಣನ ಸಾಕು ತಾಯಿಯಾದ ಯಶೋದೆಯ ಮಗಳು ಎಂದು ತಿಳಿಯುತ್ತದೆ. ಇದನ್ನು ಕೇಳಿ ಕೋಪಗೊಂಡ ಕಂಸ ರಾಕ್ಷಸ ಕೇಶಿಯನ್ನು ಕರೆದು ಕೃಷ್ಣ ಮತ್ತು ಅವನ ಸಹೋದರ ಬಲರಾಮನನ್ನು ಕೊಲ್ಲುವಂತೆ ಆದೇಶಿಸುತ್ತಾನೆ.
ಕೇಶಿಯು ಬೃಹತ್ ಕುದುರೆಯ ರೂಪವನ್ನು ತಾಳುತ್ತಾನೆ. ಕುದುರೆಯು ಗೋಕುಲದ ಸುತ್ತಲೂ ವಿಧ್ವಂಸಕತೆಯನ್ನು ಸೃಷ್ಟಿಸುತ್ತಿದ್ದಂತೆ ಕೃಷ್ಣ, ಕೇಶಿಯನ್ನು ದ್ವಂದ್ವ ಯುದ್ಧಕ್ಕೆ ಕರೆಯುತ್ತಾನೆ. ಕೇಶಿಯು ಸಿಂಹದಂತೆ ಘರ್ಜಿಸುತ್ತಾ ಕೃಷ್ಣನಿಗೆ ತನ್ನ ಗೊರಸುಗಳಿಂದ ಹೊಡೆಯುತ್ತಾನೆ. ಕೃಷ್ಣನು ಕೇಶಿಯ ಎರಡು ಕಾಲುಗಳನ್ನು ಹಿಡಿದು ಬಹಳ ದೂರಕ್ಕೆ ಎಸೆಯುತ್ತಾನೆ. ಪತನದಿಂದ ಚೇತರಿಸಿಕೊಂಡು, ಉದ್ರೇಕಗೊಂಡ ಕೇಶಿ ಬಾಯಿ ತೆರೆದು ಕೃಷ್ಣನ ಮೇಲೆ ದಾಳಿ ಮಾಡುತ್ತಾನೆ. ಕೃಷ್ಣನು ತನ್ನ ಎಡಗೈಯನ್ನು ಕೇಶಿಯ ಬಾಯಿಗೆ ತುರುಕಿದ ಕೂಡಲೇ ಕೇಶಿಯ ಎಲ್ಲಾ ಹಲ್ಲುಗಳು ಬೀಳುತ್ತವೆ. ಅವನ ದೇಹದಿಂದ ಬೆವರು ಹರಿಯುತ್ತದೆ. ಅವನ ಕಣ್ಣುಗಳು ಉರುಳುತ್ತವೆ. ಅವನು ತನ್ನ ಕಾಲುಗಳಿಂದ ಕೃಷ್ಣನಿಗೆ ಒದೆಯಲು ಪ್ರಯತ್ನಿಸುತ್ತಾನೆ. ಕೇಶಿಯ ಬಾಯೊಳಗಿದ್ದ ಕೃಷ್ಣನ ತೋಳು ಹಿಗ್ಗುತ್ತಾ ಸಾಗುತ್ತದೆ, ಕೇಶಿ ಉಸಿರುಗಟ್ಟಿ ಸಾಯುತ್ತಾನೆ. ಕೇಶಿಯು ನಿರ್ಜೀವವಾಗಿ ದೇಹ ನೆಲದ ಮೇಲೆ ಬೀಳುತ್ತಿದ್ದಂತೆ, ಅವನಿಗೆ ನಿಜವಾದ ರಾಕ್ಷಸ ರೂಪ ಬರುತ್ತದೆ.
“ಪುರಾಣದೊಳಗಣ ನೂರ ಒಂದು ಶಾಪಗಳು” ಪುಸ್ತಕ ಮುದ್ರಣದಲ್ಲಿದೆ. ಪ್ರಕಟಣಾ ಪೂರ್ವ ಬೆಲೆ ಅಂಚೆ ವೆಚ್ಚವು ಸೇರಿ ರೂ 200 ಮಾತ್ರ. ಪುಸ್ತಕದ ಪ್ರತಿ ಬೇಕಾದವರು ನನ್ನ ಮೊಬೈಲ್ ನಂಬರಿಗೆ ನಿಮ್ಮ ಸಂಪೂರ್ಣ ವಿಳಾಸ ವಾಟ್ಸಪ್ ಮಾಡಿ. ಹಣ ಈಗ ಕಳಿಸಬೇಡಿ.
ದಾಮೋದರ ಶೆಟ್ಟಿ ಇರುವೈಲು
ಮೊ. 98203 93098