ದೈವ ಎಂದರೇನು? ಅದರ ಆರಾಧನೆ ಹೇಗೆ? ಅದರ ಕಟ್ಟು ಪಾಡು ಯಾವುದು? ದೈವದ ಚಾಕಿರಿ ಹೇಗೆ? ಆ ದೈವದ ವಿಚಾರ ಹೇಗೆ?ಇದ್ಯಾವುದು ತಿಳಿಯದೇ ಮ್ಯಾಚಿಂಗ್ ಶಾಲು-ಮುಂಡು ಹಾಕಿ, ಯಾರೋ ಹೇಳಿದ ಮದಿಪು ರೆಕಾರ್ಡ್ ಮಾಡಿ, ಪುಸ್ತಕ ಓದಿ, ಯೂಟ್ಯೂಬ್ ನಿಂದ ಹುಡುಕಿ ಬಾಯಿ ಪಾಠ ಮಾಡಿ ದೈವದ ಎದುರು ಸರಾಗವಾಗಿ ಹೇಳುವ ನೀವುಗಳು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ? ನೀವು ಇಂದು ದೈವರಾಧನೆಗೆ ಮಾಡುವ ಅವಹೇಳನ ಅಲ್ಲವೇ? ಈ ರೀತಿ ಮಾಡುವ ನಿಮಗೆ ಸ್ವಂತಿಕೆ ಅನ್ನುವುದು ಇಲ್ಲವೇ? ಒಂದು ಅಕ್ಷರ ಸ್ವಂತ ಬಳಸದೇ ಅನ್ಯರ ಮದಿಪು ಅನುಕರಣೆ ಮಾಡುವ ನೀವು ದೈವರಾಧನೆಗೆ ಮಾಡುವ ಅಪಚಾರ ಅಲ್ಲವೇ? ಇನ್ನೊಬ್ಬರು ಮಾಡುವ, ಬಾಯಿ ಪಾಠ ಮಾಡಿ ಹೇಳುವ ನೀವು, ಯಾವುದನ್ನು ಎಲ್ಲಿ ಹೇಳಬೇಕು, ಹೇಗೆ ಹೇಳಬೇಕು ಅನ್ನುವ ಪರಿಜ್ಞಾನ ನಿಮಗೆ ಇಲ್ಲವೇ? ಈ ರೀತಿ ಮಾಡಿ ನೀವು ಹೇಳುವ ಆ ಮದಿಪು ದೈವಗಳಿಗೆ ಅರ್ಪಣೆ ಆದೀತೇ?
ದೈವಾರಾಧನೆ ಬಗ್ಗೆ ಸಂಪೂರ್ಣ ತಿಳಿದವರು ಯಾರೂ ಇಲ್ಲ. ಆದರೆ 1% ತಿಳಿದು ಹೇಳಿದರೆ ಒಳ್ಳೆಯದು. ಇಲ್ಲವಾದರೇ ನೀವು ಈಗ ಮಕ್ಕಳಾಟದಲ್ಲಿ ಮಾಡಿದ ಮದಿಪು ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೆ ನೀವು ಮಾಡುವ ಬಹು ದೊಡ್ಡ ದೋಷ ಪಾಲು. ಆ ದೋಷವನ್ನು ಹೊತ್ತುಕೊಳ್ಳುವವರು ನಿಮ್ಮ ಮಕ್ಕಳೇ ಹೊರತು ಅನ್ಯರಲ್ಲ. ಇದರಂತೆ ದೈವದ ಕಲಕ್ಕೆ ಮದಿಪು ಹೇಳಲು ಆಹ್ವಾನಿಸುವ ಮನೆಯವರು ಅಥವಾ ಕುಟುಂಬದ ಸದಸ್ಯರು, ಬರುವ ವ್ಯಕ್ತಿ ನಮ್ಮ ಜಾತಿಯವ, ನಮ್ಮ ಸಂಬಂಧಿಕ, ನಮ್ಮ ಗೆಳೆಯ ಎಂಬುದನ್ನು ನೋಡದೇ ಆ ವ್ಯಕ್ತಿಗೆ ಆ ಅರ್ಹತೆ ಇದೆಯಾ ಎಂಬುದನ್ನು ನೋಡಿಕೊಂಡು ಮತ್ತು ಆ ವ್ಯಕ್ತಿ ಈ ಜಾಗಕ್ಕೆ ಸೂಕ್ತವೇ ಎಂಬುದನ್ನು ಅರಿತು ಕರೆದರೆ ಒಳ್ಳೆಯದು.
ದೈವದ ನುಡಿಯ ಬಗ್ಗೆ, ಕುಟುಂಬದ ಮಾತಿನ ಬಗ್ಗೆ ಸ್ವಲ್ಪವೂ ತಿಳಿಯದ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿ ಮಕ್ಕಳು ಮದಿಪು ಹೇಳಿದರೆ ಆ ಕುಟುಂಬದ ಅಭಿವೃದ್ಧಿ ಹೇಗೆ ಸಾಧ್ಯ. ಬಾಯಿ ಪಾಠ ಮಾಡಿ ಬಂದು ನಿಂತು ನೀವು ಹೇಳುವುದಾದರೆ ಅದನ್ನು ಮನೆಯವರೇ ನಿಂತು ಸ್ವಾಮಿ ಎಂಕ್ಲೆನ ದೈವೊನೇ ಹೇಳಿದರೆ ದೈವ ಆವೇಶ ಆಗುವುದಿಲ್ಲವೇ? ಇಲ್ಲಿ ನಿರರ್ಗಳವಾಗಿ ಹೇಳುವುದು ಮುಖ್ಯವಲ್ಲ. ಬದಲಾಗಿ ದೈವ ಮತ್ತು ಕುಟುಂಬದ ಮಧ್ಯೆ ಸಂಭಾಷಣೆ ಮಾಡುವ ಚಾಕಚಕ್ಯತೆ ಇಲ್ಲದೇ ಇದ್ದರೇ ಅವನು ದೈವದ ಕಲದಲ್ಲಿ ದೈವದ ಮದಿಪು ಹೇಳಲು ಅರ್ಹನಲ್ಲ. ಯಾಕೆಂದರೆ ದೈವ ಮತ್ತು ಕುಟುಂಬದ ಮಧ್ಯೆ ಬಹು ದೊಡ್ಡ ಕೊಂಡಿಯಾಗಿ ಮಧ್ಯಸ್ಥ (ಮದಿಪು, ಪಾರಿ) ಹೇಳುವವ ಕೆಲಸ ಮುಂದುವರಿಸಬೇಕು ಹೊರತು ಇದೊಂದು ಶೋ ಅಥವಾ ನಾಟಕವಾಗಿ ಅಥವಾ ದಂದೆಯಾಗಿ ನಡೆದರೆ ಇಲ್ಲಿ ದೈವದ ಮೇಲಿರುವ ನಂಬಿಕೆ ಇಲ್ಲದಂತಾಗುತ್ತದೆ. ಇದನ್ನು ಮಾಡಿದವರೇ ಅನುಭವಿಸುತ್ತೀರಿ ಇದು ನಿಮಗೆ ಎಚ್ಚರಿಕೆ. ಮದಿಪು ಯಾರೂ ಬೇಕಾದರೂ ಹೇಳಬಹುದು ಎನ್ನುವವರು ಇತಿಹಾಸ ಒಮ್ಮೆ ನೋಡಿದರೆ ಯಾರೆಲ್ಲ ದೈವಕ್ಕೆ ಮದಿಪು ಹೇಳಬಹುದು ಎಂಬುದನ್ನು ಅಧ್ಯಯನ ಮಾಡಿದರೆ ಒಳ್ಳೆಯದು. ಪಾರಿ ಹೇಳುವವರಿಗೆ ಮುಕ್ತ ಅವಕಾಶ ಇದೆ ಅಂದರೇ ದೈವ ಆರಾಧನೆ ಬಗ್ಗೆ ಸ್ವಲ್ಪ ತಿಳುವಳಿಕೆ ಪಡೆದು ಸ್ವಲ್ಪ ಸಮಯ ಅಧ್ಯಯನ ಮಾಡಿದ ನಂತರ ಸಣ್ಣ ಸಣ್ಣ ಮೆಟ್ಟಿಲು ಏರಿದರೆ ಈ ನಮ್ಮ ತುಳುನಾಡಿನ ದೈವರಾಧನೆ ನಂಬಿಕೆ ಉಳಿದೀತು ಹೊರತು ನೇರವಾಗಿ ಏನಾಗಬಹುದೆಂದು ನೋಡಿದರೆ ದೈವದ ಶಾಪಕ್ಕೆ ಗುರಿಯಾಗಬಹುದು. ದೈವದ ಕಲದಲ್ಲಿ ಇನ್ನೊಬ್ಬರ ಪಾರಿ (ಮದಿಪು) ರೆಕಾರ್ಡ್ ಮಾಡಿ ನಂತರ ಬಾಯಿ ಪಾಠ ಮಾಡಿ ಹೇಳುವವರೇ ಈ ಬರಹ ನಿಮಗೆ ಸಮರ್ಪಣೆ. ಯಾಕೆಂದರೆ ದೈವಗಳು ಯಾರೊಬ್ಬರ ಮನೆಯ ಸ್ವತ್ತುಗಳಲ್ಲ ಬದಲಾಗಿ ಅದು ಪ್ರತಿಯೊಬ್ಬರ ಆರಾಧನೆಯ ಶಕ್ತಿಗಳು.
-ಮನ್ಮಥ ಶೆಟ್ಟಿ ಪುತ್ತೂರು