ಅಗ್ನಿವೀರ್ ನಂತಹ ಯೋಜನೆಗಳಲ್ಲಿ ಯುವ ಜನರು ಸೇರಿಕೊಂಡು ಸೇವೆಯಲ್ಲಿ ಸ್ವಲ್ಪ ವರ್ಷ ಸೇವೆ ಮಾಡಿ ಬಂದರೆ ಆತನ ಜೀವನ ಪೂರ್ತಿ ಶಿಸ್ತಿನಲ್ಲಿ ಬದುಕುತ್ತಾನೆ. ಎಲ್ಲಾ ಪ್ರಜೆಗಳು ಸೇನೆಯ ತರಬೇತಿ ಪಡೆದಾಗ ಶಿಸ್ತಿನ ಸ್ವಸ್ಥ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಐಲೇಸಾ ಸಂಸ್ಥೆ ಸಂದೀಪ ನಂದಾದೀಪದಂತೆ ಕಾರ್ಯಕ್ರಮ ಮೂಲಕ ಸೈನಿಕರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡಿರುವುದು ಅನುಕರಣೀಯ ಎಂದು ವಾಯುಸೇನೆಯ ಮಾಜಿ ವಾರಂಟ್ ಆಫೀಸರ್ ಆತ್ರಾಡಿ ಸುರೇಶ ಹೆಗ್ಡೆ ಅಭಿಪ್ರಾಯಪಟ್ಟರು. ಬೆಂಗಳೂರಿನ ಐಲೇಸಾ ದಿ ವಾಯ್ಸ್ ಆಫ್ ಒಶಿಯನ್ ಸಂಸ್ಥೆ ಜುಲೈ 14ರಂದು ಹುತಾತ್ಮ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ರಿಗೆ ಸಮರ್ಪಿಸಿದ ‘ನಂದಾದೀಪ ಸಂದೀಪ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಮಾತನಾಡಿ, ಐಲೇಸಾ ಹೆಸರು ಕೇಳಿದ್ದೆ ಆದರೆ ಅವರ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ಆದರೆ ಈ ಕಾರ್ಯಕ್ರಮ ನೋಡಿ ಸದಾ ನಿಮ್ಮ ಜತೆಗೆ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಇಂತಹ ಕಾರ್ಯಕ್ರಮಗಳು ಸೈನಿಕರ ಮತ್ತು ಅವರ ಮನೆಯವರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಶಂಸಿದರು.
ಜಮ್ಮು ಕಾಶ್ಮೀರದಲ್ಲಿ ಉಗ್ರಗ್ರಾಮಿಗಳಿಂದ ದಾಳಿಗೊಳಗಾಗಿ ತನ್ನ ದೇಹದ ಕೆಳಭಾಗದ ಸ್ವಾಧೀನ ಕಳೆದುಕೊಂಡ ಮೈಸೂರ್ ನಿವಾಸಿ ಹವಲ್ದಾರ್ ಬಿ. ರಮೇಶ್ ಮಾತನಾಡಿ, ಸೈನಿಕನಾಗಬೇಕು ಎನ್ನುವುದು ನನ್ನ ಜೀವನದ ಕನಸಾಗಿತ್ತು. ಹಾಗಾಗಿ ಗೆಳೆಯರ ಪ್ರೋತ್ಸಾಹದ ಕಾರಣ ಪರೀಕ್ಷೆಗೆ ಹಾಜರಾಗಿದ್ದ ಗೆಳೆಯರು ಆಯ್ಕೆಯಾಗಲಿಲ್ಲ. ಅವರಿಗಿಂತ ದೇಹದಾರ್ಡ್ಯಾದಲ್ಲಿ ಕೊರತೆಯಿದ್ದರೂ ಅದೃಷ್ಟಕ್ಕೆ ನಾನು ಆಯ್ಕೆಯಾದೆ. ಬಹುಶಃ ಭಾರತ ಮಾತೆಗೆ ಸೇವೆ ಸಲ್ಲಿಸುವ ಯೋಗ ನನಗಿತ್ತು. ಆದರೆ ಇನ್ನೇನು ಸೇವೆ ಮುಗಿಯಬೇಕು ಅನ್ನುವಷ್ಟರಲ್ಲಿ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡೆ. ಈಗ ನಿವೃತ್ತಿಯಾಗಿದ್ದು ಸಂತೃಪ್ತಿಯ ಜೀವನ ನಡೆಸುತ್ತಿದ್ದೇನೆ. ಸೇನೆ ನನ್ನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ ಇಂತಹ ಕಠಿಣ ಸಂದರ್ಭದಲ್ಲೂ ಬದುಕುವುದನ್ನು ಕಲಿಸಿತು. ಸಂಗೀತದಲ್ಲಿ ಆಸಕ್ತಿಯಿರುವುದರಿಂದ ನಿವೃತ್ತ ಬದುಕು ಸುಶ್ರಾವ್ಯವಾಗಿದೆ. ಹಾಗಾಗಿ ಐಲೇಸಾ ಸಂಸ್ಥೆಯ ಸ್ನೇಹ ಬೆಳೆಯಿತು ಎಂದು ಸಂತೋಷ ವ್ಯಕ್ತಪಡಿಸಿದರು.
ಹುತಾತ್ಮ ಮೇಜರ್ ಸಂದೀಪ್ ಅವರ ತಂದೆ ಕೆ. ಉನ್ನಿಕೃಷ್ಣನ್ ಮಾತನಾಡಿ, ಐಲೇಸಾ ಮೊದಲು ಬಂದು ನನ್ನಲ್ಲಿ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಹಲವಾರು ಕಾರ್ಯಕ್ರಮಗಳಿಂದ ಬೇಸರವಾಗಿರುವ ಕಾರಣ ಅಷ್ಟೇನೂ ಮನಸಿಲ್ಲದೆ ಒಪ್ಪಿದ್ದೆ. ಆದರೆ ಇಂದು ಕಾರ್ಯಕ್ರಮದಲ್ಲಿ ಅವರ ಪ್ರಾಮಾಣಿಕ ಕಳಕಳಿ ಕಂಡಾಗ ಮನಸ್ಸು ತುಂಬಿ ಬಂತು. ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದರು. ಐಲೇಸಾ ಸಂಸ್ಥೆಯ ಡಾ. ರಮೇಶ್ಚಂದ್ರ, ಡಾ. ಸುಶೀಲಾ, ಸುಧಾಕರ ಶೆಟ್ಟಿ, ಆತ್ಮಾರಾಮ್ ಆಳ್ವ, ಸುಮಾ ಕೋಟೆ, ಪ್ರಕಾಶ್ ಪಾವಂಜೆ, ನಮಿತಾ ಅನಂತ್, ದಿನೇಶ್ ಕಿನ್ನಿಗೋಳಿ ಮಧುರವಾಗಿ ಹಾಡಿದರು.
ಸೂರಿ ಮಾರ್ನಾಡ್ ಮತ್ತು ಅವರ ಪತ್ನಿ ಡಾ. ವಿದ್ಯಾ ಸೂರಿ ಮಾರ್ನಾಡ್ ಮುಂಬಯಿಯಿಂದ ಆಗಮಿಸಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಮನುಷ್ಯ ಸ್ವಾರ್ಥದ ಬಗ್ಗೆ ಶಾಂತರಾಮ್ ಶೆಟ್ಟಿ ರಚಿಸಿದ ದುರ್ಯೋಧನ ಬೆವರ್ದನ ಕಾವ್ಯ ವಾಚನ ಮಾಡಿ ಎಲ್ಲರ ಮನಗೆದ್ದರು. ನಮಿತಾ ಅನಂತ್ ರಾವ್ ಅವರ ಶಿಷ್ಯೆಯಿಂದ ನಂದಾದೀಪ ಸಂದೀಪ ಕಾರ್ಯಕ್ರಮಕ್ಕೆ ನೃತ್ಯದ ಮೂಲಕ ನಮನ ಸಲ್ಲಿಸಲಾಯಿತು. ಅನಂತ್ ರಾವ್ ಕಾರ್ಯಕ್ರಮ ನಿರೂಪಿಸಿ, ಮುಂಬಯಿ ದಾಳಿಯ ಸಂದರ್ಭ ಸೈನಿಕರು, ಪೊಲೀಸ್ ಮತ್ತು ತಾಜ್ ಹೋಟೆಲಿನ ಸಿಬ್ಬಂದಿ ತೋರಿದ ಬದ್ಧತೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಅವರ ತ್ಯಾಗವನ್ನು ಸ್ಮರಿಸಿದರು. ಐಲೇಸಾದ ಬೆನ್ನೆಲುಬು ಕವಿ, ಕತೆಗಾರ ಶಾಂತಾರಾಮ ಶೆಟ್ಟಿಯವರು ಬರೆದ ಕವನದ ಮೂಲಕ ಹುತಾತ್ಮ ಮೇಜರ್ ಸಂದೀಪ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಅದನ್ನು ಮುದ್ರಿಸಿ ಹಂಚಲಾಯಿತು. ಶಾಂತಾರಾಮ ಶೆಟ್ಟಿಯವರ ಕನಸಿನ ಈ ಕಾರ್ಯಕ್ರಮವನ್ನು ನನಸಾಗಿಸಲು ಐಲೇಸಾದ ಸಕ್ರಿಯ ಸದಸ್ಯರಾದ ವಿವೇಕ್ ಮಂಡೇಕರ, ಅಜೇಶ್ ಚಾರ್ಮಾಡಿ, ಡಾ| ರಾಜೇಶ್ ಆಳ್ವ, ಮೋಹನ್ ಚಾರ್ಮಾಡಿ, ಕಾಮಾಕ್ಷಿ ಪ್ರಶಾಂತ್, ದಿಶಾ ಶೆಟ್ಟಿ ಸಹಕರಿಸಿದರು.