ಸವಾಲುಗಳು ಜೀವನದ ಅವಿಭಾಜ್ಯ ಅಂಗ. ಸವಾಲುಗಳನ್ನು ಸ್ವೀಕರಿಸುವ ಕಲೆಯನ್ನು ಕಲಿಯುವುದು ಕಷ್ಟ. ಆದರೆ ಅವುಗಳನ್ನು ಸ್ವೀಕರಿಸುತ್ತ ಹಲವು ಸಲ ನಾವು ಯಶಸ್ಸನ್ನು ಕಾಣುವೆವು ಎಂಬ ಭರವಸೆಯಲ್ಲಿ ಮತ್ತು ಕೆಲವು ಸಲ ನಿರೀಕ್ಷಿತ ಯಶಸ್ಸು ದೊರಕದಿದ್ದರೂ ಜೀವನವನ್ನು ಧನಾತ್ಮಕ ಚಿಂತನೆಯಲ್ಲಿ ಸಾಗಿಸಿದರೆ ನಾವು ಉತ್ತಮ ಮಾನವರಾಗುವ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಸಂದೇಹವಿಲ್ಲ. ಸವಾಲುಗಳನ್ನು ಎದುರಿಸುವಾಗ ಜೀವನದಲ್ಲಿ ಹಲವಾರು ಕಷ್ಟ ನಷ್ಟಗಳು, ಆತಂಕಗಳು ಅನಿರೀಕ್ಷಿತವಾಗಿ ಕಾಣಿಸಿದರೂ ಅವುಗಳು ಸಹಜ. ಆದರೆ ಎಲ್ಲೋ ಓದಿದಂತೆ ‘ಹೊಸ ಸಾಗರಗಳನ್ನು ಅನ್ವೇಷಣೆ ಮಾಡಬೇಕಾದರೆ ದೃಷ್ಟಿಯಲ್ಲಿ ತೀರವನ್ನು, ಕಾಣದೆ ದೂರಕ್ಕೆ ಹೋಗಬೇಕಾದ ಧೈರ್ಯ ನಮ್ಮಲಿರಬೇಕು’ ಇಂಥ ಧೈರ್ಯದಿಂದಲೇ ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಇವರ ಜೀವನ ದಂತಕಥೆಗಳಾದವು.
ಕ್ರಿಕೆಟಿನ ದಂತಕಥೆ ಸುನಿಲ್ ಗಾವಸ್ಕರ್ ರವರ ಸಾಧನೆಯನ್ನು ಮೆಲುಕು ಹಾಕುವಾಗ ಹಿಂದಿನ ಪ್ರಸಿದ್ಧ ವಾಕ್ಯದ ನೆನಪಾಗುತ್ತದೆ. ‘ಎಲ್ಲಾ ಅಮೋಘ ಸಾಧನೆಗಳು ಒಂದೊಮ್ಮೆ ಅಸಾಧ್ಯವೆಂದು ಪರಿಗಣಿಸಲ್ಪಡುತ್ತಿತ್ತು. ಡಾನ್ ಬ್ರಾಡ್ಮನ್ ನ ವಿಶ್ವದಾಖಲೆಯನ್ನು ಒಂದು ದಿನ ಯಾರಾದರೂ ಮುರಿಯುವರೆಂದು ಯಾರೂ ಊಹಿಸಿರಲಿಲ್ಲ. ಅದೂ ಕೂಡಾ ಒಬ್ಬ ಭಾರತೀಯನಿಂದ. ಇಲ್ಲಿಯ ನಿಧಾನಗತಿಯ ಬೌಲರ್ ಗಳನ್ನು ಭಾರತದ ನೀರಸ ಮೈದಾನದಲ್ಲಿ ಆಡುತ್ತಿರುವ ಭಾರತೀಯನಿಂದ ಅಂತೂ ದಾಖಲೆ ಮುರಿಯಬಹುದು ಎಂದು ಯಾರೂ ಊಹಿಸಿರಲಿಲ್ಲ. ಸುನಿಲ್ ಗಾವಸ್ಕರ್, ಮಾಲ್ಕಮ್ ಮಾರ್ಷಲ್, ಡೆನ್ನಿಸ್ ಲಿಲ್ಲಿ, ಜೆಫ್ ಥಾಮ್ ಸನ್, ಇಮ್ರಾನ್ ಖಾನ್, ರಿಚರ್ಡ್ ಹಾಡ್ಲಿ, ಮೈಕೆಲ್ ಹೋಲ್ಡಿಂಗ್ ರಂತಹ ಅಪಾಯಕಾರಿ, ಅಮೋಘ ಬೌಲರ್ ಗಳನ್ನು ಹೆಲ್ಮೆಟ್ ಧರಿಸದೆ ಎದುರಿಸಿದರು. ವಿಶ್ವದಲ್ಲೇ ಅತ್ಯುತ್ತಮ ಶ್ರೇಷ್ಠ ಪ್ರಾರಂಭಿಕ ಬ್ಯಾಟ್ಸಮನ್ ಆದರು. ಡಾನ್ ಬ್ರಾಡ್ಮನ್ ರವರ ವಿಶ್ವ ದಾಖಲೆಯನ್ನು ಮುರಿದರು. 34 ಶತಕಗಳೊಂದಿಗೆ ತನ್ನದೇ ಆದ ನೂತನ ದಾಖಲೆಯನ್ನು ನಿರ್ಮಿಸಿದರು.
ಪ್ರತಿಭೆಯ ಜೊತೆಗೆ ಹೆಮ್ಮೆಯಿಂದ ಪ್ರತಿನಿಧಿಸುವ ಸವಾಲುಗಳನ್ನು ಧೈರ್ಯದಲ್ಲಿ ಎದಿರಿಸುವುದು. ಅದ್ವಿತೀಯ ಏಕಾಗ್ರತೆಗಳು. ಅವರು ಈ ಅದ್ಭುತ ಯಶಸ್ಸನ್ನು ಕಾಣುವಂತಾಯಿತು. ಸ್ಟೀಫನ್ ಹಾಕಿಂಗ್ ಗಂಭೀರ ನರ ಕಾಯಿಲೆಗಳನ್ನು ಎದುರಿಸಿಯೂ ಮಾಡಿದ ಸಾಧನೆ ಮತ್ತೊಂದು ಪ್ರೇರಣಾತ್ಮಕವಾದ ಯಶೋಗಾಥೆ. ಇವರೆಲ್ಲರ ಜೀವನದ ಯಶಸ್ಸು, ಅದ್ಭುತ ಸಾಧನೆಗಳನ್ನು ಕಂಡು ನಾವು ಎದುರಿಸುವ ಚಿಕ್ಕ ಪುಟ್ಟ ಸವಾಲುಗಳನ್ನು ಧೈರ್ಯದಿಂದ, ಪರಿಶ್ರಮದಿಂದ, ಹಠದಿಂದ ಎದುರಿಸಲು ಪ್ರಯತ್ನಿಸೋಣ.
ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸದವರು ಯಾರೂ ಇಲ್ಲ. ನಾನು ಕೂಡ ವೈಯಕ್ತಿಕವಾಗಿ, ಸಾಮಾಜಿಕವಾಗಿ ಹಾಗೂ ವ್ಯವಹಾರಿಕ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸುವೆನು. ಜೀವನದಲ್ಲಿ ಯಶಸ್ಸನ್ನು ಕಾಣಲು ಸಮಸ್ಯೆ ಸವಾಲುಗಳನ್ನು ಎದುರಿಸುವುದು ಸಹಜ. ನಮ್ಮ ನಿರಂತರ ಪ್ರಯತ್ನದ ಜೊತೆಗೆ, ತಾಳ್ಮೆ, ಹಿರಿಯರ ಆಶೀರ್ವಾದ, ದೇವರ ಅನುಗ್ರಹ, ಧರ್ಮದ ಹಾದಿಗಳು ನಮಗೆ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಶ್ರೀರಕ್ಷೆಯಾಗುತ್ತವೆ ಎಂಬುದನ್ನು ಮರೆಯಬಾರದು.
‘ವಿಶ್ವಮೇವ ಜಯತೇ.’