ಬೆಂಗಳೂರು ಬಂಟರ ಸಂಘಕ್ಕೆ ಜುಲೈ 28 ರಂದು ನಡೆಯುವ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ ಜಪ್ತಿ ಸ್ಪರ್ಧೆ ಮಾಡುತ್ತಿದ್ದಾರೆ. ಬೆಂಗಳೂರು ಬಂಟರ ಸಂಘದಲ್ಲಿ 1994 ರಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿರುವ ಇವರು ಸಮರ್ಥ ಸಂಘಟರಾಗಿ ಗುರುತಿಸಿಕೊಂಡವರು. ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದು ಔದ್ಯೋಗಿಕ ಜೀವನಕ್ಕೆ ಕಾಲಿಟ್ಟು ಕಳೆದ 30 ವರ್ಷಗಳ ಸೇವಾ ಅನುಭವ ಇವರದ್ದಾಗಿದೆ.
1994 ರಲ್ಲಿ ಯುವ ವಿಭಾಗದ ಸದಸ್ಯನಾಗಿ ಸಂಘದ ಚಟುವಟಿಕೆಗಳಲ್ಲಿ ಸೇರ್ಪಡೆಯಾದ ಇವರು ಸಕ್ರೀಯ ಸದಸ್ಯರಾಗಿ ಸಂಘದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದರು. 2001-04ರಲ್ಲಿ ಯುವ ವಿಭಾಗದ ಕಾರ್ಯದರ್ಶಿಯಾಗಿ, 2004-06 ರಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕ್ರೀಡಾ ಸಮಿತಿ ಸಂಚಾಲಕರಾಗಿ, 2006-08 ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2008-10 ರ ವಿದ್ಯಾರ್ಥಿವೇತನ ಸಮಿತಿ ಸಂಚಾಲಕ, ಕ್ರೀಡಾ ಸಮಿತಿ ಸದಸ್ಯ ಮತ್ತು ಡೈರೆಕ್ಟರಿ ಸಮಿತಿ ಸಂಚಾಲಕರಾಗಿ ಸಂಘದಲ್ಲಿ ಪ್ರಥಮ ಬಾರಿಗೆ ವರ್ಣರಂಜಿತ ಸದಸ್ಯತ್ವ ಕೈಪಿಡಿ ನಿರ್ಮಾಣ ಮಾಡುವಲ್ಲಿ ಶ್ರಮಿಸಿದರು.
2012-14 ರಲ್ಲಿ ಜೊತೆ ಕಾರ್ಯದರ್ಶಿಯಾಗಿ ಸಂಘದ ಮುಖವಾಣಿ “ಸ್ನೇಹ ಚಿಂತನೆ” ಸಮಿತಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿ ಸಂಘಕ್ಕೆ ಅತಿ ಹೆಚ್ಚು ಸದಸ್ಯರ ನೋಂದಾವಣೆ ಮಾಡಿಸಿದರು. 2016-18 ರಲ್ಲಿ ಗೌರವ ಕಾರ್ಯದರ್ಶಿ, ಬಿ.ಎಸ್.ಆರ್.ಎನ್.ಎಸ್ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದರು. ಸಂಘದ ಚಟುವಟಿಕೆಗಳಲ್ಲಿ ಕಳೆದ 30 ವರ್ಷಗಳಿಂದ ಸಕ್ರೀಯವಾಗಿ ಭಾಗವಹಿಸುತ್ತಿರುವ ಇವರು ಯುವ ವಿಭಾಗದ ಕಾರ್ಯದರ್ಶಿಯಾಗಿ, ಎರಡು ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜೊತೆ ಕಾರ್ಯದರ್ಶಿಯಾಗಿ, ಗೌ. ಕಾರ್ಯದರ್ಶಿಯಾಗಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಘದ ಬೆಳವಣಿಗೆಯಲ್ಲಿ ಮಾರ್ಗದರ್ಶಕರಾದ ಸಮಾಜಮುಖಿ ಚಿಂತಕ ದಿ. ಕೀರ್ತಿಶೇಷ ಶ್ರೀನಿವಾಸ್ ಆಳ್ವ, ಪ್ರಾಮಾಣಿಕತೆಯ ಆದರ್ಶದ ಇನ್ನೊಂದು ಮುಖದಂತಿದ್ದ ದಿವಂಗತ ಕೆ.ಕೆ.ರೈ, ನಾಯಕತ್ವಕ್ಕೆ ಕೈಗನ್ನಡಿಯಾದ ದಿವಂಗತ ಐ.ಎಂ. ಜಯರಾಮ ಶೆಟ್ಟಿ, ಮಾತೃ ಸಂಸ್ಕಾರದ ದಿ. ಸುಶೀಲ. ಪಿ. ಶೆಟ್ಟಿ, ಸಮಾಜದ ಆಸ್ತಿ ಕೊಡುಗೈ ದಾನಿ ದಿ. ಆರ್.ಎನ್ ಶೆಟ್ಟಿಯವರ ಹಿರಿತನದಲ್ಲಿ ಸಾಮಾಜಿಕ ಕಳಕಳಿಯ ಕೊಡುಗೈ ದಾನಿ ಕೆ.ಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ವಿಶೇಷವಾಗಿ ಸಂಘದ ಶಾಲಾ ಆಡಳಿತವನ್ನು ಅತ್ಯುತ್ಕೃಷ್ಟ ಮಟ್ಟದಲ್ಲಿ ನಡೆಸಿಕೊಂಡು ಬರುವಲ್ಲಿ ಶ್ರಮಿಸಿದ್ದಾರೆ. ಸಮಾಜದ ಸಂಘಟನೆ ಮಾತ್ರವಲ್ಲದೇ ಬೇರೆ ಸಂಘ ಸಂಸ್ಥೆಗಳಲ್ಲೂ ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರಾಗಿ, ಕನ್ನಡ ಕರಾವಳಿ ವೇದಿಕೆ ಸಂಘಟನೆ ಕಾರ್ಯದರ್ಶಿಯಾಗಿ, ನಿಟ್ಟೆ ವಿದ್ಯೆ ಸಂಸ್ಥೆಯಲ್ಲಿ ಎಬಿವಿಪಿಯ ಸಂಸ್ಥಾಪಕ ಅಧ್ಯಕ್ಷರಾಗಿ, ಬೆಂಗಳೂರು ಅರ್ಬನ್ ಡಿಸ್ಟ್ರಿಕ್ ವೈಟ್ ಲಿಫ್ಟರ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ಬಂಟರ ಸಂಘದ ಸದಸ್ಯರೆಲ್ಲರೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವ ಸಮರ್ಥ ಅಭ್ಯರ್ಥಿ ಸಂತೋಷ್ ಶೆಟ್ಟಿ ಜಪ್ತಿ ಹಾಗೂ ಇವರ ಇಡೀ ತಂಡಕ್ಕೆ ಮತ ನೀಡಿ ಗೆಲ್ಲಿಸಿಕೊಟ್ಟಲ್ಲಿ ಸಮಾಜದ ಹಿತಕ್ಕಾಗಿ ಹಗಲಿರುಳು ಶ್ರಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ.