ಹೌದು ಇದು ಅಲ್ಲ ಎಂದು ನೀವು ಯಾರೂ ಹೇಳುವ ಹಾಗಿಲ್ಲ. ಹಳ್ಳಿ ಡೆಲ್ಲಿ ಎಲ್ಲೆಲ್ಲಿ, ಭಿಕ್ಷುಕ, ಕ್ಷೌರಿಕ, ನೇತಾರ, ಸರದಾರ, ಸಂತ, ಸಾಧು, ಸನ್ಯಾಸಿ, ಮಾಲೀಕ, ಕಾವಲುಗಾರ, ಕೂಲಿ ಕಾರ್ಮಿಕ, ಬಡವ ಬಲ್ಲಿದ, ಹೆಣ್ಣು, ಗಂಡು ಈ ಯಾವ ಭೇದವೂ ಇರದೇ ಮನೆಯಲ್ಲಿ ಕಡಿಮೆ ಪಕ್ಷ ಒಂದು, ಇನ್ನು ಪ್ರತಿಯೊಬ್ಬನಲ್ಲೂ ಒಂದೊಂದು, ಇನ್ನೂ ಮುಂದುವರಿದ ಒಬ್ಬೊಬ್ಬನಲ್ಲಿ ಮೂರು ನಾಲ್ಕು ಮೊಬೈಲ್ ಇರುವವರೂ ಇದ್ದಾರೆ. ಒಟ್ಟಾರೆ ಹೇಳುವುದಾದರೆ ನಮ್ಮ ದೇಹದ ಒಂದು ಅವಿಭಾಜ್ಯ ಅಂಗದಂತಿದೆ. ಹಾಗಾಗಿಯೇ ಅಂದೆ ಇದೊಂದು ನಮ್ಮ ದೇಹದ ಅಂಗ ಈ ಮೊಬೈಲ್ ಎಂಬ ಕರ್ಣ ರಾಕ್ಷಸ ಇದು ಪೂಜೆಯ ಭಟ್ರ ಆರತಿ ತಟ್ಟೆಯ ಅಡಿಯಲ್ಲಿ, ಸೊಂಟದಲ್ಲಿ, ದರ್ಶನ ಪಾತ್ರಿಯ ಕಚ್ಚೆಯಲ್ಲಿ, ತೆಂಗಿನ ಮರ ಏರಿದವನ ಚಡ್ಡಿಯಲ್ಲಿ, ಮೀನು ವ್ಯಾಪಾರಿಯ ಬುಟ್ಟಿಯಲ್ಲಿ, ಮೇಸ್ತ್ರಿಯ ಸಿಮೆಂಟ್ ಚಟ್ಟಿಯಲ್ಲಿ, ಮಲ್ಲಿಗೆಯ ಅಟ್ಟಿಯಲ್ಲಿ ಎಲ್ಲೆಂದರಲ್ಲಿ ಗುಂಯ್ ಗುಡುತ್ತಿರುತ್ತದೆ. ಹಾಗಾಗಿ ಮುಂಚೆಯೆಲ್ಲಾ ಕೈಯೋ ಕಾಲೋ ಮುರಿದರೆ ಅಂಗ ಊನ ಎನ್ನುವರು. ಆದರೆ ಈಗ ಮೊಬೈಲ್ ಇಲ್ಲದ ಮೋನಪ್ಪಣ್ಣನೇ ಅಂಗವಿಕಲನಂತೆ ಇದು ಬೇಡವೆಂಬ ಪ್ರಶ್ನೆಯೇ ಇಲ್ಲ. ಯಾಕೆಂದರೆ ಇದು ಎಲ್ಲರ ಮನೆಯ, ವ್ಯವಹಾರದ, ಖಾಸಗೀ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಅದರ ತರತರದ ರಿಂಗ್ಟೋನ್, ಟುಯಿಂಕ್ ಟುಯಿಂಕ್ ಬೀಪ್ ಸೌಂಡ್ ಬರದೇ ಇದ್ದರೆ ಎಲ್ಲರಿಗೂ ಏನನ್ನೋ ಕಳಕೊಂಡಂತೆ ಭಾಸವಾಗುವುದು ಖಂಡಿತಾ. ಅದೊಂದು ಛಟವೇ ಆಗಿ ಬಿಟ್ಟಿದೆ. ಚಟ್ಟಕ್ಕೆ ಕೈ ಕೊಟ್ಟವನೂ ಮೊಬೈಲ್ ರಿಂಗ್ ಆದರೆ ಚಟ್ಟ ಕೈ ಬಿಡುವ ಪರಿಸ್ಥಿತಿ ಇದೆ. ಇದು ಮೊಬೈಲ್ ನ ಕಠೋರ ಸತ್ಯ. ಈ ಬಗ್ಗೆ ಹೇಳುವಾಗ ಮುಂಚೆ ನಾವು ಕೇಳುತ್ತಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಘೋರ ಕಾನನದಲ್ಲಿ ಒಬ್ಬ ರಾಕ್ಷಸನಿದ್ದ. ಅವನು ನರಭಕ್ಷಕನಾಗಿದ್ದ. “ಆತ ಮಂತ್ರವಾದಿಯೂ ಆಗಿದ್ದು ತನ್ನ ಮಂತ್ರ ಶಕ್ತಿಯ ಪ್ರಭಾವದಿಂದ ಎಲ್ಲವನ್ನೂ ನಡೆಸುತ್ತಿದ್ದ. ಹಾಗಾಗಿ ತನ್ನ ಪ್ರಾಣವನ್ನೇ ಆತ ಒಂದು ಗಿಳಿಯ ಜೀವದೊಳಗೆ ಇರಿಸಿದ್ದ” ಎಂಬುದು ಈ ಕಥೆಯ ಪ್ರಾರಂಭ. ಈಗ ನಮ್ಮ ಕೆಲವರ ಕಥೆಯೂ ಹೀಗೆಯೇ ಇದೆ. ಎಂದರೆ ಅವರ ಪ್ರತೀ ಖಾಸಗೀ ವಿಚಾರವೂ ಈ ಮೊಬೈಲ್ ಒಳಗಡೆ ಅವಿತಿದೆ. ಅದು ಯಾರಿಗೂ ತಿಳಿಸದ ಗುಪ್ತ ಸಂಗಾತಿಯಿಂದ ಹಿಡಿದು, ಬ್ಯಾಂಕ್ ಅಕೌಂಟ್, ಎಲ್ಲರೂ ನೋಡಬಾರದ “ಪ್ಯೂರ್ಲೀ ಪರ್ಸನಲ್” ಸಂದೇಶ, ಚಿತ್ರ, ವಿಡಿಯೋ ಎಲ್ಲವೂ ಅದರೊಳಗೆ ಅಡಗಿದೆ. ಹಾಗಾಗಿಯೇ ಅದಕ್ಕೆ ಭದ್ರವಾದ ಕೋಡ್ಗಳು, ಗುಪ್ತ ಸಂಕೇತಗಳು. ಕೆಲವರಂತೂ ಬಚ್ಚಲು ಕೋಣೆಗೆ, ಸ್ನಾನಗ್ರಹಕ್ಕೂ ಈ ಮೊಬೈಲ್ ನ ಜೊತೆಯೇ ಹೋಗುವರು. ಯಾಕೆಂದರೆ ಒಂದು ವೇಳೆ ಬಿಟ್ಟು ಹೊರಗಿಟ್ಟು ಹೋದರೆ ಅವರ ಬಂಡವಾಳ ಬಯಲಾಗಬಹುದು ಎಂಬ ಭೀತಿಯಿಂದ. ಇದರಿಂದ ಸಂಬಂಧಗಳೂ ಹಳಸಿ ಹೋಗುವ ಭಯವಿದೆ. ಮದುವೆ ಆದ ಮೇಲೆ ಹೆಂಡತಿ ಮೊಬೈಲ್ ನೋಡಿ ಮದುವೆ ವಿಚ್ಚೇದನಗಳು ನಡೆದ ಘಟನೆಗಳೂ ಸಾಕಷ್ಟಿವೆ. ಹಾಗಾಗಿ ಈ ಮೊಬೈಲ್ ಎಂಬುದೊಂದು ರಾಕ್ಷಸ ಗಿಳಿಯ ಒಳಗಿಟ್ಟ ಪ್ರಾಣದಂತೆಯೇ ಆಗಿಬಿಟ್ಟಿದೆ. ಮೊಬೈಲ್ ಸಿಕ್ಕರೆ ಪ್ರಾಣ ಹೋದ ಹಾಗೆಯೇ.
ಇನ್ನು ಹೆಚ್ಚಿನ ಕಂಪನಿಗಳಿಗೆ ತಮ್ಮ ಸಹೋದ್ಯೋಗಿಗಳ ಜೊತೆಗೆ ಮೀಟಿಂಗ್, ಪ್ರೊಜೆಕ್ಟ್ , ರಿಪೋರ್ಟ್ ಎಲ್ಲವನ್ನೂ ಈ ಮೊಬೈಲ್ ಗಳಲ್ಲಿ ಮಾಡುತ್ತಾರೆ. ಇದರಿಂದ ಮುಂಚಿನಂತೆ ಪ್ರತೀವಾರ, ಪ್ರತೀ ತಿಂಗಳು ಹೆಡ್ ಆಫೀಸ್ಗಳಿಗೆ ಹೋಗುವ ಖರ್ಚೂ ಉಳಿತಾಯವಾಗುತ್ತಿದೆ. ಮತ್ತೆ ಕೆಲಸಗಾರರೂ ನಿರಾಳ. ಇನ್ನು ಅದೆಷ್ಟೋ ಮಂದಿಗೆ ಈ ಮೊಬೈಲ್ ಎಂಬುದು ಹೊತ್ತು ಕಳೆಯುವ ಅಮೂಲ್ಯ ಸಾಧನವಾಗಿದೆ. ತಮಗೆ ಇಷ್ಟವಾದವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅವರಿಗೆ ವಾಟ್ಸಪ್ ಅಥವಾ ಇತರ ಮಾಧ್ಯಮದ ಮೂಲಕ ಡಯಲ್ ಮಾಡಿ ಅವರ ಜೊತೆ ಮುಖ ನೋಡಿ ಬೇಕಾದಷ್ಟು ಹೊತ್ತು ಮಾತಾಡಿ ಬೇಸರ ಕಳೆಯುವ ಸಾಧನವಾಗಿದೆ. ಹಾಗಾಗಿ ಇದೊಂದು ಸಂಗಾತಿಯೂ ಕೂಡ. ಇದರಿಂದಾಗಿ ಯಾವುದೇ ಗುರ್ತ ಪರಿಚಯ ಇಲ್ಲದವರಿಗೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಳ್ಳುವುದು. ಹಾಗಾಗಿ ಈ ಮೊಬೈಲ್ ಒಂದು ಸಂಗಾತಿ ಆಗಿ ಬಿಟ್ಟಿದೆ. ಆದರೆ ಇದರೊಂದಿಗೆ ವಿಪರ್ಯಾಸವೆಂದರೆ ಎದುರು ಬದುರಿಗೆ ಸಿಕ್ಕ ಗೆಳೆಯರನ್ನು ಮರೆತು ಕಣ್ಣಿಗೆ ಕಾಣದ ಕೇವಲ ಮೊಬೈಲ್ ನಲ್ಲಿ ದೊರೆತ ಗೆಳೆಯರೇ ದೊಡ್ಡದು ಎಂಬ ಮನಸ್ಥಿತಿ ಬೆಳೆದಿರುವುದು. ಇನ್ನು ಪ್ರೀತಿ ಪ್ರೇಮದಲ್ಲಿ ಮುಳುಗಿದ ಜೋಡಿಗಳಿಗೆ ಇದೊಂದು ಬಹು ದೊಡ್ಡ ಪ್ರೇಮಿಗಳ ದಳ್ಳಾಳಿಯೇ ಸರಿ. ಕೇವಲ ವಾಟ್ಸಪ್ ಫೇಸ್ ಬುಕ್ ಗಳಿಂದ ಎಷ್ಟೊಂದು ಲವ್ ಗಳು ಘಟಿಸಿವೆ, ಮದುವೆಯೂ ಆಗಿದೆ. ಹಾಗೆಯೇ ಬೇಸರವೆಂದರೆ ಹಲವಾರು ಡೈವೋರ್ಸ್ ಗಳೂ ನಡೆದಿದೆ. ಹಾಗಾಗಿ ಪ್ರೇಮಿಗಳಿಗೆ ಇದೊಂದು ಬಹುದೊಡ್ಡ ಅಡ್ವಾನ್ಸ್ಡ್ ಸಾಧನವಾಗಿದೆ. ಎಲ್ಲವೂ “ಒನ್ ಟೂ ವನ್ ಕನ್ವರ್ಸೇಷನ್” ಎಲ್ಲರೂ ಮಲಗಿದ ಮೇಲೆ ಬ್ಲಾಕೆಂಟ್ ಒಳಗಡೆಯಿಂದ ಕದ್ದು ಮುಚ್ಚಿ ನಡೆವ ಚಾಟಿಂಗ್ ಆ ಶಿವನೇ ಬಲ್ಲ. ಕೆಲ ವರ್ಷಗಳ ಮುಂಚೆ ದೂರದ ಊರು, ದೇಶಗಳಲ್ಲಿರುವ ಮಂದಿ ತಮ್ಮ ಬಂಧು ಮಿತ್ರರ ಜೊತೆ ಮಾತಾಡಲು STD ಫೋನ್ ಕರೆ ಮಾಡಿ ಅದೂ ಸರಿಯಾದ ಸಿಗ್ನಲ್ ಇದ್ದರೆ ಮಾತ್ರ ಮಾತಾಡಬಹುದಿತ್ತು. ಆದರೆ ಈಗ ಸುಖ ದುಃಖಗಳನ್ನು ಕ್ಷಣ ಮಾತ್ರದಲ್ಲಿ ಹಂಚಿ ಅದರ ಅನುಭೂತಿ ಪಡೆಯುವ ಸುವರ್ಣಾವಸರ ಈ ಮೊಬೈಲ್ ಮಾಡಿಕೊಟ್ಟಿದೆ. ಹಾಗಾಗಿ ಮೊದಲ ಟ್ರುಯಿಂ..ಟ್ರುಯಿ ನಂಬರ್ ತಿರುಗಿಸುವ ಫೋನನ್ನು 1847 ರಲ್ಲಿ ಕಂಡು ಹುಡುಕಿದ ಅಲೆಕ್ಸಾಂಡರ್ ಗ್ರಾಂ ಬೆಲ್ ನಿಂದ ಹಿಡಿದು ಆಮೇಲೆ 1973 ರಲ್ಲಿ 2 ಕೆಜಿ ತೂಕದ ಮೊದಲ ದೊಡ್ಡ ಮೊಬೈಲ್ ಕಂಡು ಹುಡುಕಿದ ಮಾರ್ಟಿನ್ ಕೂಪರ್ ಎಂಬ ವಿಜ್ಞಾನಿಗೆ ಸಾವಿರ ಸಾವಿರ ನಮನಗಳು.
ನಿಜಕ್ಕೂ ಇದೊಂದು ಭಗವಂತನ ಅನುಗ್ರಹದ ಸಾಧನವೇ ಸರಿ. ಕಾರಣ ಈ ಮುಂಚೆ ನಡೆದ, ನಾವು ಕೇಳಿದ ಮಹಾಭಾರತದ ಮಹಾ ಧರ್ಮ ಯುದ್ದವನ್ನು ಅರಮನೆಯೊಳಗೇ ನೋಡಬೇಕೆಂದು ಕೌರವಾಧಿಪನಾದ ಕುರುಡ ದೃತರಾಷ್ಟ್ರಇಚ್ಚಿಸಿದಾಗ ಶ್ರೀ ಕೃಷ್ಣನು ತನ್ನ ಅನುಗ್ರಹ ವಿಶೇಷದಿಂದ ಸಂಜಯನಿಗೆ ದಿವ್ಯ ದೃಷ್ಟಿಯನ್ನು ಕೊಟ್ಟು ಕುರುಕ್ಷೇತ್ರದಲ್ಲಿ ನಡೆಯುವ ಯುದ್ಧದ ವೀಕ್ಷಕ ವಿವರಣೆಯನ್ನು ಮನೆಯಲ್ಲೇ ಹೇಳುವಂತೆ ಮಾಡುತ್ತಾನೆ. ಇದನ್ನು ಆಗ ನಾವು ಸಂಶಯಿಸಿದ್ದೆವು. ಇದನ್ನು ಹೇಗೆ ನಂಬುವುದೋ ಬಿಡುವಿದೋ ಎಂಬ ಜಿಜ್ಞಾಸೆಯಲ್ಲಿದ್ದೆವು. ಆದರೆ ದೇವ ಲೀಲೆ ನೋಡಿ. ಇದೇ ಆಗಿನ ಸಿಸಿ ಕೆಮರಾ ಅದೇ ವಿದ್ಯೆಯು ಮಾನವನಿಗೆ ಸಿದ್ದಿಸಿ ಈಗ ವಿಶ್ವದ ಸಮಸ್ತ ಘಟನೆಗಳನ್ನು ನಾವು ಟಿವಿ ಮೊಬೈಲ್ ಗಳಲ್ಲಿ ನೋಡುವಂತಾಗಿದೆ. ಎಣಿಸುವಾಗ ಆಶ್ಚರ್ಯ ಪಡಲೇಬೇಕಾಗಿದೆ. ಹಾಗಾಗಿ ಪುರಾಣದ ಕಥೆಗಳು ಕೇವಲ ಊಹನೆ ಅಥವಾ ಭ್ರಮೆಯಲ್ಲ. ಅದು ಸತ್ಯವಾದ ಎಂದು ನಂಬುವಂತಾಗಿದೆ. ಈ ಮೊಬೈಲ್ ನ ಸದ್ಗುಣಗಳನ್ನು ತಿಳಿದ ಹಾಗೆಯೇ ಅದರ ದುರ್ಬಳಕೆಯಿಂದ ಆಗುವ ಅನಾಹುತಗಳನ್ನೂ ಅದರ ಇನ್ನೊಂದು ಮಗ್ಗುಲನ್ನೂ ತಿಳಿಯಲೇಬೇಕು. ಹೇಗೆ ರಾಮನಿದ್ದ ಕಾಲದಲ್ಲಿ ರಾವಣನಿದ್ದನೋ, ಕಂಸನಿದ್ದ ಕಾಲದಲ್ಲಿ ಕೃಷ್ಣನಿದ್ದನೋ ಹಾಗೆಯೇ ಈ ಮೊಬೈಲ್ ಒಂದರೊಳಗೇ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೂ ಅಡಗಿದೆ. ಬೆಂಕಿಯೊಂದು ಹೊಟ್ಟೆಯ ಹಸಿವು ಹಿಂಗಿಸುವ ಆಹಾರವನ್ನು ಬೇಯಿಸಬಹುದು. ಅದೇ ಇಡೀ ಮನೆಯನ್ನೇ ಸುಡುವ ದೈತ್ಯಾಗ್ನಿಯೂ ಆಗಬಹುದು. ಇದು ಅದರ ಬಳಕೆಯನ್ನು ಅವಲಂಭಿಸಿದೆ. ಹಾಗೆಯೇ ಈ ಮೊಬೈಲ್ ಎಂಬ ಮಾಂತ್ರಿಕನ ಶಕ್ತಿ ಅತಿಯಾದರೆ ಅಮೃತವೂ ವಿಷವಾಗಿ ಪರಿಣಮಿಸಬಹುದು ಎಂಬುದಕ್ಕೆ ಅತೀ ಸೂಕ್ತ ಉದಾಹರಣೆಯೇ ಈ ಮೊಬೈಲ್.
ಈ ಹಿಂದೆ ಶಾಲೆ ಕಾಲೇಜುಗಳಲ್ಲಿ ನಡೆದ ಮೊಬೈಲ್ ಹಗರಣಗಳನ್ನು, ಪ್ರಕರಣಗಳನ್ನು ಗಮನಿಸಿದ ಸರಕಾರವು ಮೊನ್ನೆ ತಾನೇ ಮತ್ತೆ ಮೊಬೈಲ್ ಗಳನ್ನು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ನಿಷೇಧಿಸುವ ನಿರ್ಧಾರ ಕೈಗೊಂಡಿದೆ. ಇದು ನಿಜಕ್ಕೂ ಸೂಕ್ತವಾದದ್ದೇ. ಕಾರಣ ಈಗಿನ ಕಾಲೇಜು ಮೆಟ್ಟಲು ಹತ್ತಿದ ಹುಡುಗ ಹುಡುಗಿ ಮುಂಡೇವುಗಳು ಲಂಗು ಲಗಾಮು ಇಲ್ಲದೇ ಎಲ್ಲಿ ಬೇಕೆಂದರಲ್ಲಿ ಈ ಮೊಬೈಲ್ ನ್ನು ದುರುಪಯೋಗ ಪಡಿಸುತ್ತಿರುವುದು ಆತಂಕಕಾರಿ ವಿಷಯ. ವಿದ್ಯಾ ಸಂಸ್ಥೆಗಳು ಏನೆಲ್ಲಾ ಉಪಾಯ ಮಾಡಿ ಈ ಮೊಬೈಲ್ ನ ಬಳಕೆಯನ್ನು ಹದ್ದು ಬಸ್ತಿನಲ್ಲಿ ಇಡುವ ವ್ಯರ್ಥ ಪ್ರಯತ್ನ ಮಾಡಿದರೂ, ಮತ್ತೆ ಮತ್ತೆ ಟಾಯ್ಲೇಟು, ಪಾರ್ಕಿಂಗ್, ಕ್ರೀಡಾ ಕೊಠಡಿ ಇಂತಹ ಸ್ಥಳಗಳಲ್ಲಿನ ನೋಡಬಾರದ ಚಿತ್ರಗಳು ದೃಶ್ಯಗಳು ಹೊರ ಜಗತ್ತಿನ ಅನಗತ್ಯ ಜನಗಳ ಮೊಬೈಲ್ ಗಳನ್ನು ಸೇರುತ್ತಿದೆ. ಇದರಿಂದಾಗಿ ಕೆಲವೊಮ್ಮೆ ನಾಟಕವೋ, ಸ್ಕಿಟ್ಟೋ ಅಭ್ಯಾಸದ, ಇಲ್ಲವೇ ಪ್ರದರ್ಶನದ ಸಂದರ್ಭಗಳಲ್ಲಿ ಮರ್ಯಾದಸ್ತ ಹೆಣ್ಮಕ್ಕಳು ಶಾಲೆಯಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿಯೂ ನೂರು ಸಲ ಆಲೋಚಿಸುವ ಪ್ರಮೇಯವಿದೆ ಅಥವಾ ಕೆಲವರು ಆ ಸಂದರ್ಭವನ್ನೇ ನಿರಾಕರಿಸುವುದೂ ಇದೆ. ಕಾರಣ ಈ ಬಿಗ್ಬಾಸ್ ಎಂಬ ಕುತಂತ್ರಿ ಮೊಬೈಲ್ ನ ಕಣ್ಣುಗಳು ಎಲ್ಲಿ ಏನನ್ನು ಸೆರೆ ಹಿಡಿದು ಮತ್ತೆ ಆ ಪಾರ್ಟಿ ಬ್ಲ್ಯಾಕ್ ಮೇಲ್ ಮಾಡಬಹುದೋ ಎಂಬ ಆತಂಕದಿಂದ ಹಾಗಾಗಿ ಈ ಮೊಬೈಲ್ ಬಂದ ಮೇಲೆ ಮಾನ ಮರ್ಯಾದೆ ಇರುವವರು ತುಂಬಾನೇ ಜಾಗ್ರತರಾಗಿರಬೇಕಾಗಿದೆ. ಇಲ್ಲವಾದಲ್ಲಿ ಮಾನ ಹರಾಜು ಗ್ಯಾರಂಟಿ. ಅದೂ ಈ ಕಾಲೇಜಿಗಳಲ್ಲಿ ಮತ್ತೆ ಈ ಜೂನಿಯರ್ ಸೀನಿಯರ್ ಎಂಬ ದಾದಾಗಿರಿ ಅಥವಾ ರಾಗಿಂಗ್. ಒಳ್ಳೆಯ (ಕೆಲವರಿಗೆ ಕೆಟ್ಟ) ಬೆಳವಣಿಗೆಯೆಂದರೆ ಕೋರ್ಟ್ ನಲ್ಲಿಯೂ ಈಗ ಮೊಬೈಲ್ ನ ಸಾಕ್ಷಿ ಮಾನ್ಯವಾಗಿದೆ. ಇನ್ನು ಅದೆಷ್ಟೋ ಪ್ರಕರಣಗಳಿಗೆ ಈ ಮೊಬೈಲ್ ನಲ್ಲಿ ತೆಗೆದ ಚಿತ್ರ ಇಲ್ಲವೇ ದೃಶ್ಯ ಸಾಕ್ಷಿ ನೀಡಬಹುದು ಎಂಬುದು ಸಮಾಧಾನಕರ ಸಂಗತಿ.
ಮೊದ ಮೊದಲು ಕೇವಲ ಶುಭ ಸಮಾರಂಭಗಳಲ್ಲಿ ಮಾತ್ರ ಶೋ ಮಾಡುತ್ತಿದ್ದ ಮೊಬೈಲ್ ಫೋಟೋಗ್ರಾಫರ್ ಗಳು ಈಗ ಮರಣದ ಮನೆ, ಸಾವಿನ ದಿನ ಅಳುವ ಚಿತ್ರೀಕರಣಕ್ಕೂ ಸೈ ಎನಿಸುತ್ತಿದ್ದಾರೆ. ಇನ್ನು ದೈವ- ಭೂತಗಳು ಈಗ ಮೊಬೈಲ್ ಗೆ ಫೋಸ್ ಕೊಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ನಿನ್ನೆ ಹುಟ್ಟಿದ ಅಳುವ ಮಗುವಿನಿಂದ ತೊಡಗಿಸಿ ಕೆಲವೇ ಕ್ಷಣದಲ್ಲಿ ಸಾಯಲು ಸಿದ್ದವಾದ ಜೀವಚ್ಛವವೂ ಕೂಡ ಈ ಮೊಬೈಲ್ ಮಾಯಕ್ಕೆ ವಶವಾಗಿದೆ. ಈಗಿನ ಹದಿ ಹರೆಯದ ಯುವಕ ಯುವತಿಯರಂತೂ ಛೇ..ಛೇ.. ಹೇಳಿ ಪ್ರಯೋಜನವಿಲ್ಲ. ಯಾವ ಅಪಾಯವನ್ನು ಎದುರಿಸಿಯೂ ಸೆಲ್ಫಿ. ತಂದೆ ಇನ್ನೂ ಬಟನ್ ನ ಹಳೇ ಫೋನ್ ಚಾರ್ಜಾಗುತ್ತಿಲ್ಲ ಎಂದು ಸಂಕಟ ಪಟ್ಟರೆ ಮಗ “ಐಫೋನ್” ಖರೀದಿಸಿ ಮಜಾ ಮಾಡುತ್ತಿದ್ದಾನೆ. ಆದರೆ ಇಸ್ಟಾಲ್ಮೆಂಟ್ ಕಟ್ಟಬೇಕಾಗಿರುವುದು ಇದೇ ಬಡಪಾಯಿ ತಂದೆ ತಾನೇ?. ಮಕ್ಕಳಿಗೆ ಮಜಾ ತಂದೆತಾ ಯಿಗೆ ಸಜಾ. ಮೊನ್ನೆ ತಾನೇ ವಾಟ್ಸಪ್ ನಲ್ಲಿ ಬಂದ ಒಂದು ಜೋಕ್ಸ್ ಹೀಗಿದೆ ” ಊಟಕ್ಕಾಗಿ ಹೋಟೆಲ್ ಗೆ ಬಂದ ಗಿರಾಕಿ ಮೊಬೈಲ್ ನೋಡುವುದನ್ನು ಬಿಟ್ಟು ಮನುಷ್ಯನ ಮುಖವನ್ನೇ ನೋಡಲಿಲ್ಲ. ಇದನ್ನು ಗಮನಿಸಿದ ಹೋಟೆಲ್ ಓನರ್ ಸಪ್ಲಾಯರ್ ಗೆ ಹೇಳಿ ಬೇರೊಬ್ಬ ಗಿರಾಕಿ ಬಿರಿಯಾನಿ ತಿಂದು ಉಳಿದ ಕಾಲಿ ತಟ್ಟೆಯನ್ನು ಆತನ ಮುಂದಿಡಲು ಹೇಳುತ್ತಾನೆ. ಸಪ್ಲಾಯರ್ ಹಾಗೆಯೇ ಮಾಡುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ ಗಿರಾಕಿಗೆ ಬಿಲ್ ತಂದು ಕೊಡುತ್ತಾನೆ ಸಪ್ಲಾಯರ್. ಮೊಬೈಲ್ ನೋಡುವುದರಲ್ಲೇ ಮುಳುಗಿದ್ದ ಆ ಗಿರಾಕಿ ತಾನೇ ಬಿರಿಯಾನಿ ತಿಂದಿರಬಹುದು ಎಂದು ಭಾವಿಸಿ ಬಿಲ್ಲ್ ಕೂಡಾ ಪೇಮೆಂಟ್ ಮಾಡುತ್ತಾನೆ”. ಇದು ಈಗಿನ ಮೊಬೈಲ್ ಹುಚ್ಚರ ಜ್ವಲಂತ ಉದಾಹರಣೆ. ಈ ಹುಚ್ಚರು ಮನೆಯಲ್ಲೂ ಅಷ್ಟೇ ತಾಯಿ ಕಾಳಜಿ ವಹಿಸಿ ಮಾಡಿದ ಊಟ ತಿಂಡಿಯನ್ನೂ ಗಮನಿಸದೆ ಮೊಬೈಲ್ ಒಳಗೆ ಪರಕಾಯ ಪ್ರವೇಶದಂತೆ ಮೊಬೈಲ್ ಸೆಟ್ ಪ್ರವೇಶಿಸಿ ತಿಂದೆವೋ ಇಲ್ಲವೋ ಎಂದೂ ತಿಳಿಯದೆ ಮಣ್ಣು ಮುಕ್ಕಿದ ಹಾಗೆ ಮುಕ್ಕಿ ಮನೆಯಿಂದ ಹೊರಡುತ್ತಾರೆ. ಇವರಿಗೆ ಸಂಬಂಧ, ಸಂತೋಷ, ಸರಸ, ವಿರಸ, ಪ್ರೀತಿ, ಕಾಳಜಿ ಎಲ್ಲವೂ ಮೊಬೈಲಲ್ಲೇ. ಒಂದೇ ಮನೆಯೊಳಗೆ ಇದ್ದರೂ ಅಮ್ಮ, ಅಪ್ಪ, ಅಕ್ಕ, ತಂಗಿ (ಇದ್ದರೆ) ಎಲ್ಲರಲ್ಲೂ ಚಾಟಿಂಗ್ ಮೂಲಕವೇ ಮಾತಾಡುವ ಮಂದಿ ಹಲವರು. ಈ ಮೊಬೈಲ್ ಪ್ರಪಂಚದಲ್ಲಿ ಇನ್ನು ಭಾವನೆಗಳಿಗೆ ಬೆಲೆಯೇ ಇಲ್ಲ. ಅದೂ ಸ್ಮೈಲೀ ಫೇಸ್, ನಮಸ್ಕಾರ, ಸೋರೋ ಫೇಸ್, ಆಶ್ಚರ್ಯ, ನಾಯಿ, ಬೆಕ್ಕು, ಇಂತಹ ಚಿಹ್ನೆಗಳಲ್ಲೇ ಎಲ್ಲವೂ ಮುಗಿದಿರುತ್ತದೆ. ಹಾಗಾದರೆ ಈ ಮೊಬೈಲ್ ನಮ್ಮನ್ನೆಲ್ಲಾ ಎತ್ತ ಕಡೆ ಕೊಂಡು ಹೋಗುತ್ತಿದೆ?. ಇದು ನಮ್ಮೆಲ್ಲರ ವಿವೇಚನೆಗೆ ಬಿಟ್ಟದ್ದು.
ಶರತ್ ಶೆಟ್ಟಿ ಪಡುಪಳ್ಳಿ